ಹಗರಿಬೊಮ್ಮನಹಳ್ಳಿಗೂ ವಕ್ಕರಿಸಿದ ಮಹಾಮಾರಿ ಕೊರೋನಾ..!
ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿ ತಾಲೂಕಿನಲ್ಲಿ 4 ಕೋವಿಡ್ ಪಾಸಿಟಿವ್ ಕೇಸ್| ಪಟ್ಟಣದ ಬಹುತೇಕ ಅಂಗಡಿಗಳು ಸ್ವಯಂ ಲಾಕ್| ಕಿರಾಣಿ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ ಕಿರಾಣಿ ಅಂಗಡಿಗಳ ಮಾಲೀಕರು ಮತ್ತು ವರ್ತಕರು|
ಹಗರಿಬೊಮ್ಮನಹಳ್ಳಿ(ಜೂ.20): ಇಲ್ಲಿವರೆಗೂ ಶಾಂತವಾಗಿದ್ದ ತಾಲೂಕಿನಲ್ಲಿ ಈಗ ಕೊರೋನಾ ವೈರಸ್ ವಕ್ಕರಿಸಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ 4 ಪಾಸಿಟಿವ್ ಬಂದಿರುವುದು ತಾಲೂಕಿನ ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
ಪಟ್ಟಣದ ಹಳೇ ಊರಿನ ತಂಬ್ರಹಳ್ಳಿ ವೃತ್ತದ ದುರುಗಮ್ಮನ ದೇಗುಲದ ಹಿಂದೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಈ ವ್ಯಕ್ತಿ ಆಂಧ್ರದ ಕಾರ್ನೂಲ್‌ನಿಂದ 5 ದಿನಗಳ ಹಿಂದೆ ಬಂದವನಾಗಿದ್ದು, ಮೊದಲೇ ಹೋಂ ಕ್ವಾರಂಟೈನಲ್ಲಿರಿಸಲಾಗಿತ್ತು. ಜ್ವರದಿಂದ ಬಳಲುತ್ತಿದ್ದ 24 ವರ್ಷದ ವ್ಯಕ್ತಿಯ ಪರೀಕ್ಷೆಯ ನಂತರ ಪಾಸಿಟಿವ್ ಬಂದಿದೆ ಎಂದು ದೃಢಪಡಿಸಲಾಗಿದೆ.
ಇಲ್ಲಿಯ ರಾಮ್‌ರಹೀಂ ನಗರದ ಜಿಂದಾಲ್‌ನಲ್ಲಿ ನೌಕರರಾಗಿದ್ದ ಕುಟುಂಬದಿಂದ ಬಂದಿದ್ದ 19 ವರ್ಷದ ಯುವತಿಯನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ದೃಢವಾಗಿದೆ. ಇದಲ್ಲದೆ ಸೊನ್ನಕ್ಕೆ ಜಿಂದಾಲ್‌ನಿಂದ 5 ಜನ ನೌಕರರು 12 ದಿನಗಳ ಕೆಳಗೆ ಬಂದವರಾಗಿದ್ದು, ಇವರನ್ನೆಲ್ಲ ಪರೀಕ್ಷಿಸಿದಾಗ 32 ವರ್ಷದ ಒಬ್ಬ ವ್ಯಕ್ತಿಗೆ ಮಾತ್ರ ಪಾಸಿಟಿವ್ ದೃಢಪಟ್ಟಿದೆ.
ಬಳ್ಳಾರಿ: ಜಿಂದಾಲ್‌ನ 244 ಜನರಲ್ಲಿ ಕೋರೋನಾ ಸೋಂಕು, ಬೆಚ್ಚಿಬಿದ್ದ ಜನತೆ
ತಾಲೂಕಿನ ಅಂಕಸಮುದ್ರ ಗ್ರಾಮದಲ್ಲೂ ಮಹಿಳೆಗೆ ಪಾಸಿಟಿವ್ ದೃಢಪಟ್ಟಹಿನ್ನೆಲೆಯಲ್ಲಿ, ಈ ಎಲ್ಲಾ ಸ್ಥಳಗಳಿಗೆ ತಹಸೀಲ್ದಾರ್ ಆಶಪ್ಪ ಪೂಜಾರ್, ತಾಪಂ ಇಒ ಹಾಲಪ್ಪ ಪೂಜೇರಿ, ತಾಲೂಕು ವೈದ್ಯಾಧಿಕಾರಿ ಡಾ. ಸುಲೋಚನಾ, ಡಾ. ಶಿವರಾಜ್, ಪುರಸಭೆ ಮುಖ್ಯ ಅಧಿಕಾರಿ ಕೃಷ್ಣನಾಯ್ಕ, ಆರೋಗ್ಯಾಧಿಕಾರಿಗಳು ಮತ್ತು ಕೊರೋನಾ ಟಾಸ್ಕ್‌ಪೋರ್ಸ್ ತಂಡ ಭೇಟಿ ನೀಡಿ ಈ ನಾಲ್ಕು ಪಾಸಿಟಿವ್ ಬಂದವರನ್ನು ಹೊಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ನಂತರ ಬಳ್ಳಾರಿಗೆ ಕಳಿಸಿಕೊಡಲಾಗುವುದು ಎಂದು ಟಾಸ್ಕ್‌ಪೋರ್ಸ್ ಮುಖಂಡ ಡಾ. ಶಿವರಾಜ್ ತಿಳಿಸಿದರು. ಇದರಿಂದ ಪಟ್ಟಣದ ಬಹುತೇಕ ಅಂಗಡಿಗಳು ಸ್ವಯಂ ಲಾಕ್ ಆಗಿವೆ. ಅಲ್ಲದೆ, ಕಿರಾಣಿ ಅಂಗಡಿಗಳ ಮಾಲೀಕರು ಮತ್ತು ವರ್ತಕರು ನಿರ್ಧರಿಸಿ ಕಿರಾಣಿ ಅಂಗಡಿಗಳನ್ನು ಬಂದ್ ಮಾಡಿದರು.