ಕೊರಟಗೆರೆ: (ಸೆ.22) ಆಧುನಿಕ ಜಗತ್ತಿನ ಭಾರತದ ಭೂಪಟದಲ್ಲಿ ಆದರ್ಶವಾಗಿ ನಿಲ್ಲುವ ವ್ಯಕ್ತಿ ಮಾಜಿ ಪ್ರಧಾನಿ ದಿ.ರಾಜೀವಗಾಂಧಿ ಮಾತ್ರ ನಮ್ಮ ಭಾರತ ದೇಶ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗಲು ಅವರ ಪಾತ್ರ ಅನನ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಹೇಳಿದರು. 

ಶನಿವಾರ ತಾಲೂಕಿನ ಮೋಟಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸರಕಾರಿ ಶಾಲೆಯ ನೂತನ ಕಟ್ಟಡ ಮತ್ತು ಪಾತಗಾನಹಳ್ಳಿ ಗ್ರಾಮದ ಭಾರತ್‌ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರತ ದೇಶ ಆಧುನಿತ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಬಹಳಷ್ಟು ಬೆಳೆದು ನಿಂತಿದೆ. ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಉತ್ತಮ ವಾತವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಒತ್ತಾಯ ಮಾಡಿದರು.

ಅಧಿಕಾರಿಗಳು ಬಡವರ ಸಮಸ್ಯೆ ಅರಿತು ಕೆಲಸ ಮಾಡಿ:

ನಮ್ಮ ರಾಜ್ಯದಲ್ಲಿ ನೂತನವಾಗಿ ರಚನೆಯಾದ ಆರು ಗ್ರಾಪಂನಲ್ಲಿ ನಮ್ಮ ಕ್ಷೇತ್ರದ ಪಾತಗಾನಹಳ್ಳಿ ಗ್ರಾಪಂ ಸಹ ಒಂದಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರ ಪಾತ್ರ ಮಹತ್ವವಾಗಿದೆ. ಅಧಿಕಾರಿ ವರ್ಗ ಬಡಜನತೆಯ ಸಮಸ್ಯೆಯನ್ನು ಅರಿತು ಅಭಿವೃದ್ಧಿಯ ಕೆಲಸ ಮಾಡಬೇಕು. ಪಾತಗಾನಹಳ್ಳಿ ಗ್ರಾಪಂಗೆ ಬೇಕಾದ ವಿಶೇಷ ಸೌಲಭ್ಯವನ್ನು ಸರಕಾರದಿಂದ ತ್ವರಿತವಾಗಿ ಕೊಡಿಸುತ್ತೇನೆ ಎಂದರು.

ಪರಮೇಶ್ವರಗೆ ತಪ್ಪಿದ ಸಿಎಂ ಸ್ಥಾನ:

ಎಲೆರಾಂಪುರ ಕುಂಚಿಟಿಗ ಮಠದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಹಲವು ಕಾರಣಗಳಿಂದ ರಾಜ್ಯದ ಸಿಎಂ ಆಗುವ ಅವಕಾಶ ಕಳೆದ ಬಾರಿ ಡಾ.ಜಿ.ಪರಮೇಶ್ವರ ಅವರ ಕೈತಪ್ಪಿಹೋಯಿತು. ಧರ್ಮವನ್ನು ನಾವು ರಕ್ಷಣೆ ಮಾಡಿದರೇ ನಮ್ಮನ್ನು ಧರ್ಮವು ರಕ್ಷಣೆ ಮಾಡಲಿದೆ ಎಂಬುದಕ್ಕೆ ಡಾ.ಜಿ.ಪರಮೇಶ್ವರ ಅವರೇ ಸಾಕ್ಷಿ ಆಗಿದ್ದಾರೆ ಎಂದು ತಿಳಿಸಿದರು. 

ಕೊರಟಗೆರೆ ಕ್ಷೇತ್ರದ ಮತದಾರರ ಆರ್ಶಿವಾದದಿಂದ ಎರಡನೇ ಬಾರಿ ಕೊರಟಗೆರೆಯಿಂದ ಶಾಸಕರಾಗಿ ಆಯ್ಕೆಯಾಗಿ ಉಪಮುಖ್ಯಮಂತ್ರಿ ಆಗಿದ್ದರು. ಅಭಿವೃದ್ಧಿಯ ಮೂಲ ಮಂತ್ರವೇ ಪರಮೇಶ್ವರ್‌ ಅವರ ಗುರಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಶ್ರಮಿಸಿದ್ದಾರೆ. ಕಳಂಕ ಹಾಗೂ ಭ್ರಷ್ಟಚಾರ ರಹಿತ ರಾಜಕಾರಣಿಯಾದ ಪರಮೇಶ್ವರ್‌ ಅವರ ಸೇವೆ ನಮ್ಮ ರಾಜ್ಯಕ್ಕೆ ಇನ್ನಷ್ಟುಸಿಗಲಿ ಆರ್ಶಿವಾದ ಮಾಡಿದರು.

ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಮೋಟಗಾನಹಳ್ಳಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಿಂದ ನಿರ್ಮಾಣವಾಗಿರುವ ಶಾಲಾ ಕೊಠಡಿ ಮತ್ತು ಪಾತಗಾನಹಳ್ಳಿ ಗ್ರಾಮದ ಭಾರತ್‌ ನಿರ್ಮಾಣ ರಾಜೀವ್‌ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಾ.ಜಿ.ಪರಮೇಶ್ವರ್‌ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಜಿಪಂ ಸದಸ್ಯ ಶಿವರಾಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರಣ್ಣ, ಅಶ್ವತ್ಥನಾರಾಯಣ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್‌, ತಹಸೀಲ್ದಾರ್‌ ಗೋವಿಂದರಾಜು, ಶಿಕ್ಷಕರಾದ ಶೈಲಜಾ ಮುಖಂಡರಾದ ಸುರೇಶ್‌, ಅರವಿಂದ್‌, ಶಂಕರಪ್ಪ, ಶೇಖರಪ್ಪ, ನಟರಾಜು, ಪ್ರಕಾಶ್‌, ನರಸಿಂಹಯ್ಯ ಉಪಸ್ಥಿತರಿದ್ದರು.