ತುಮಕೂರು(ಅ.05): ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವು ಸೋತ ತುಮಕೂರು ಕ್ಷೇತ್ರದಿಂದಲೇ ಮತ್ತೆ ಪಕ್ಷ ಕಟ್ಟುವ ಕಾರ್ಯಕ್ಕೆ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕಂಕಣ ತೊಟ್ಟಿದ್ದಾರೆ.

ಅವರು ನಗರದ ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿದ ದೇವೇಗೌಡರು, ಪಕ್ಷದಲ್ಲಿ ಸಮರ್ಥ ಯುವ ಮುಖಂಡರಿದ್ದಾರೆ. ಪಕ್ಷವನ್ನು ಸಂಘಟಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರಬೇಕಿದೆ. ಜೆಡಿಎಸ್‌ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜನರು ನಮ್ಮೊಂದಿಗೆ ಇದ್ದಾರೆ. ಪಕ್ಷವನ್ನು ಕಟ್ಟುವ ಕೆಲಸವನ್ನು ಮುಖಂಡರು ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

ಯಡಿಯೂರಪ್ಪ ಅವ್ರಿಗೆ ಹಣಕಾಸಿನ ಜ್ಞಾನ ಇಲ್ಲ..! ಸಿದ್ದು ವ್ಯಂಗ್ಯ

ನಾನು ಮುಖ್ಯಮಂತ್ರಿಯಾಗಲೂ ತುಮಕೂರು ಜಿಲ್ಲೆಯ ಕೊಡುಗೆ ಜಾಸ್ತಿ ಇದೆ. 9 ಮಂದಿ ಶಾಸಕರನ್ನು ಪಕ್ಷದಿಂದ ಆರಿಸಿ ಕಳುಹಿಸಿದ್ದರಿಂದ ನಾನು ಮುಖ್ಯಮಂತ್ರಿಯಾದೆ. ಯಾವುದೇ ಜಾತಿಗೆ ಸೀಮಿತವಾಗಿ ನಾನು ಕೆಲಸ ಮಾಡಿಲ್ಲ. ಆದರೂ ನನ್ನನ್ನು ಜಾತಿಗೆ ಸೀಮಿತ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರ ಕಷ್ಟಗಳಿಗೆ ಮುಖಂಡರು ಸ್ಪಂದಿಸಬೇಕು. ಸಣ್ಣಪುಟ್ಟವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ದುಡಿದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಚುನಾವಣೆ ಯಾವಾಗಲಾದರೂ ಬರಬಹುದು

ಜನರು ಮನಸ್ಸು ಮಾಡಿದರೆ ಯಾವ ದುಡ್ಡು, ಯಾವ ಸುಳ್ಳು ನಡೆಯೋದಿಲ್ಲ. ಸತ್ಯ ನಾಶ ಮಾಡಲು ಆಗುವುದಿಲ್ಲ, ದೇವರ ಆಟದಿಂದ ಚುನಾವಣೆ ಯಾವಾಗಲಾದರೂ ಬರಬಹುದು. ಕಾರ್ಯಕರ್ತರು ಮತ್ತು ಮುಖಂಡರು ಸಜ್ಜಾಗಿರುವಂತೆ ಸೂಚಿಸಿದ ದೇವೇಗೌಡರು, ಎಲ್ಲ ಟೀಕೆಗಳಿಗೆ ಉತ್ತರಿಸಲು ಹೋಗಬೇಡಿ. ಕಾಲ ಬಂದಾಗ ತಕ್ಕ ಉತ್ತರ ನೀಡೋಣ, ಇನ್ನೊಂದು ಚುನಾವಣೆ ಬರುವುದು ಗ್ಯಾರಂಟಿ. ಎಲ್ಲ ಕ್ಷೇತ್ರಗಳಿಗೆ ತೆರಳಿ ಪಕ್ಷವನ್ನು ಸಂಘಟಿಸೋಣ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಮತದಾರರಿಗೆ ಧನ್ಯವಾದ ಹೇಳುವುದು ತಡವಾಗಿದೆ. ಅದಕ್ಕಾಗಿ ಕ್ಷಮೆಯಿರಲಿ ಎಂದು ದೇವೇಗೌಡ ಎಂದು ಮನವಿ ಮಾಡಿದರು.

ವಿಧಿ ಕರೆತಂದು ನಿಲ್ಲಿಸಿತ್ತು:

3 ವರ್ಷಗಳ ಹಿಂದೆಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ ವಿಧಿ ಇಲ್ಲಿಗೆ ಬಂದು ನಿಲ್ಲುವಂತೆ ಮಾಡಿತು. ಸೋತೆ ಎನ್ನುವ ಸಿಟ್ಟು ನನಗಿಲ್ಲ. ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. 6.5 ಲಕ್ಷ ಮತಗಳನ್ನು ನೀಡಿದ ಮತದಾರರಿಗೆ ಧನ್ಯವಾದವನ್ನು ತಿಳಿಸಬೇಕಿತ್ತು. ತಡವಾಗಿ ಬಂದಿದ್ದೇನೆ. ಜಿಲ್ಲೆ ಮತದಾರರು ಹಾಗೂ ಮುಖಂಡರು ಸಹಕಾರ ನೀಡಿದ್ದೀರಿ. ಸೋಲನ್ನು ಸ್ಫೂರ್ತಿಯಾಗಿ ಸ್ವೀಕರಿಸಿ. ಪ್ರತಿ ತಾಲೂಕಿಗೆ ಹೋಗಿ ಧನ್ಯವಾದ ಹೇಳಬೇಕು. ಅದಕ್ಕಾಗಿ ಕಾರ್ಯಕ್ರಮ ರೂಪಿಸುವಂತೆ ಗುಬ್ಬಿ ಶಾಸಕ ವಾಸುಗೆ ಹೇಳಿದ್ದೆ. ಈಗ ತುಮಕೂರು ಜಿಲ್ಲೆಗೆ ಬಂದಿದ್ದೇನೆ. ಪ್ರತಿ ತಾಲೂಕಿಗೆ ಹೋಗಿ ಮತದಾರರ ಕಷ್ಟಸುಖ ಆಲಿಸುತ್ತೇನೆ ಎಂದು ಹೇಳಿದರು.

ನೆರೆ ಪರಿಹಾರಕ್ಕೆ ಪತ್ರ ಬರೆದರೂ ಉತ್ತರವಿಲ್ಲ

ದೇಶದಲ್ಲಿ ಆರ್ಥಿಕ ಸಂಕಷ್ಟವಿದೆ. ನೆರೆ ಬಂದು ಎರಡು ತಿಂಗಳಾದರೂ ರಾಜ್ಯಕ್ಕೆ ಪರಿಹಾರ ನೀಡಲಿಲ್ಲ, ಕೇಂದ್ರ ಸರ್ಕಾರ ರಿಸವ್‌ರ್‍ ಬ್ಯಾಂಕಿನಿಂದ ಹಣ ಪಡೆದು ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾನಿ ಪರಿಹಾರಕ್ಕಾಗಿ .5 ಸಾವಿರ ಕೋಟಿ ಮಧ್ಯಂತರ ಪರಿಹಾರ ನೀಡುವಂತೆ ಮೋದಿ ಅವರಿಗೆ ಪತ್ರ ಬರೆದರೂ ಉತ್ತರ ಬರಲಿಲ್ಲ, ರಾಜ್ಯಕ್ಕೆ ನೆರೆ ಪರಿಹಾರವನ್ನು ನೀಡದೇ ಹೋದರೆ ಅಧಿವೇಶನವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಖಂಡರಿಗೆ ಕರೆ ನೀಡಿದರು, ಪ್ರತಿಭಟನೆಗೆ ಸ್ಪಂಧಿಸದೇ ಹೋದರೆ ಪಾರ್ಲಿಮೆಂಟ್‌ ಚಲೋ ಹಮ್ಮಿಕೊಳ್ಳಲಾಗುವುದು ಎಂದರು.

ಫಾರಂಗೆ ನುಗ್ಗಿದ ಮಳೆ ನೀರು: 7 ಟನ್‌ ಕೋಳಿಗಳು ಜಲಾವೃತ

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ಶಾಸಕ ಸತ್ಯನಾರಾಯಣ್‌, ವಿಧಾನ ಪರಿಷತ್‌ ಸದಸ್ಯರಾದ ಚೌಡರೆಡ್ಡಿ, ತಿಪ್ಪೇಸ್ವಾಮಿ, ಮಾಜಿ ಸದಸ್ಯ ರಮೇಶ್‌ ಬಾಬು, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಸುಧಾಕರ್‌ ಲಾಲ್‌, ಜಿಪಂ ಅಧ್ಯಕ್ಷೆ ಲತಾ, ಮೇಯರ್‌ ಲಲಿತಾ, ತುಮುಲ್‌ ಅಧ್ಯಕ್ಷ ಮಹಾಲಿಂಗಪ್ಪ, ಮುಖಂಡರಾದ ಗೋವಿಂದರಾಜು, ಬೋರೇಗೌಡ, ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ, ಉಪಾಧ್ಯಕ್ಷ ದೇವರಾಜು, ಕಾರ್ಯಾಧ್ಯಕ್ಷ ಟಿ.ಆರ್‌.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಎಸ್‌ಸಿ ಘಟಕದ ಅಧ್ಯಕ್ಷ ಶಿವಕುಮಾರ್‌, ಸಿ.ಆರ್‌.ಉಮೇಶ್‌, ಬೆಳ್ಳಿ ಲೋಕೇಶ್‌, ಹಾಲನೂರು ಅನಂತ್‌ ಕುಮಾರ್‌, ಸಾಯಿರಾಭಾನು, ಲಕ್ಷ್ಮಮ್ಮ ವೀರಣ್ಣಗೌಡ, ಲೀಲಾವತಿ ಸೇರಿದಂತೆ ಇದ್ದರು.