ಕೃಷ್ಣರಾಜದಿಂದ ಮಾಜಿ ಶಾಸಕ ಎಂಕೆಎಸ್, ಚಾಮರಾಜದಿಂದ ಕೆ.ಹರೀಶ್‌ಗೌಡಗೆ ‘ಕೈ’ ಟಿಕೆಟ್
ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ತನ್ನ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದೆ. ಕೃಷ್ಣ ರಾಜದಿಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಚಾಮರಾಜದಿಂದ ಕೆ.ಹರೀಶ್‌ಗೌಡ ಕಣಕ್ಕಿಳಿಯಲಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ತನ್ನ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದೆ. ಕೃಷ್ಣ ರಾಜದಿಂದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಚಾಮರಾಜದಿಂದ ಕೆ.ಹರೀಶ್‌ಗೌಡ ಕಣಕ್ಕಿಳಿಯಲಿದ್ದಾರೆ.
ಸೋಮಶೇಖರ್ ಅವರಿಗೆ ಇದು ಸತತ ಆರನೇ ಚುನಾವಣೆ. 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತಿದ್ದರು. 2004ರಲ್ಲಿ ಜೆಡಿಎಸ್ ಟಿಕೆಟ್ ಮೇಲೆ ಗೆದ್ದಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತು, 2013ರಲ್ಲಿ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಎರಡು ಬಾರಿ ಪಾಲಿಕೆ ಸದಸ್ಯರಾಗಿ, ಕೆಎಸ್‌ಐಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಸೋಮಶೇಖರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾಬೆಂಬಲಿಗರು.
ಬ್ರಾಹ್ಮಣ್ಯ ಬಾಹುಳ್ಯದ ಕೃಷ್ಣರಾಜ ಕ್ಷೇತ್ರದಲ್ಲಿ ಅದೇ ಜನಾಂಗದವರಿಗೆ ಟಿಕೆಟ್ ನೀಡಬೇಕು ಎಂದು ಎಂಡಿಎ ಮಾಜಿ ಅಧ್ಯಕ್ಷ ಕೆ.ಆರ್. ಮೋಹನಕುಮಾರ್ ಪುತ್ರ ಎನ್.ಎಂ.ನವೀನ್‌ಕುಮಾರ್, ವೀರಶೈವ- ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್ ತೀವ್ರ ಲಾಬಿ ನಡೆಸಿದ್ದರು. ಇದಲ್ಲದೇ ಬಿಜೆಪಿಯಿಂದ ಯಾರಾದರೂ ಪ್ರಬಲ ಆಕಾಂಕ್ಷಿಗಳು ಬಂದಲ್ಲಿ ಅವರಿಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಟಿಕೆಟ್ ಸೋಮಶೇಖರ್ ಅವರ ಪಾಲಾಗಿದೆ.
ನಗರ ಜೆಡಿಎಸ್ ಮಾಜಿ ಅಧ್ಯಕ್ಷರಾದ ಕೆ.ಹರೀಶಗೌಡ ಅವರಿಗೆ ಇದು ಸತತ ಎರಡನೇ ಚುನಾವಣೆ. ಕಳೆದ ಬಾರಿ ಚಾಮರಾಜ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, 21 ಸಾವಿರ ಮತಗಳನ್ನು ಪಡೆದು, ಗಮನ ಸೆಳೆದಿದ್ದರು. ಪಾಲಿಕೆ ಚುನಾವಣೆಯಲ್ಲಿ ತಮ್ಮಿಬ್ಬರು ಬೆಂಬಲಿಗರಾದ ಶಿವಕುಮಾರ್ ಹಾಗೂ ಶ್ರೀನಿವಾಸ್ ಅವರನ್ನು ಗೆಲ್ಲಿಸಿಕೊಂಡಿದ್ದರು. ಅವರೊಂದಿಗೆ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಅಂದಿನಿಂದಲೂ ಟಿಕೆಟ್‌ಗಾಗಿ ಮಾಜಿ ಶಾಸಕ ವಾಸು ಅವರೊಂದಿಗೆ ಪೈಪೋಟಿ ನಡೆಸುತ್ತಿದ್ದರು.
ವಾಸು ಅವರು ಎರಡು ಬಾರಿ ಪಾಲಿಕೆ ಸದಸ್ಯರು, ಮೇಯರ್, ರಾಜ್ಯ ಕೈಗಾರಿಕಾ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇದೇ ಕ್ಷೇತ್ರದಿಂದ 1999, 2008, 2018ರಲ್ಲಿ ಸೋತಿದ್ದರು. 2013 ರಲ್ಲಿ ಆಯ್ಕೆಯಾಗಿದ್ದರು. ಈ ಬಾರಿಯೂ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರ ಪರ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮತ್ತಿತರರು ಲಾಬಿ ಮಾಡಿದ್ದರು. ಜಿಲ್ಲೆಯವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಂಬಂಧ ಸರಿ ಇಲ್ಲದಿರುವುದು ಹಾಗೂ ತಮ್ಮ ಪುತ್ರ ವಿ.ಕವೀಶ್‌ಗೌಡ ಬಿಜೆಪಿ ಸೇರಿದ್ದು ಅವರಿಗೆ ಟಿಕೆಟ್ ತಪ್ಪಲು ಕಾರಣ ಎನ್ನಬಹುದು.
ಕಳೆದ ಬಾರಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ವರುಣದಿಂದ ಕಣಕ್ಕಿಳಿದಿದ್ದಾರೆ. ಹೀಗಾಗಿ ಅಲ್ಲಿನ ಹಾಲಿ ಶಾಸಕ ಡಾ.ಎಸ್. ಯತೀಂದ್ರ ಅವರಿಗೆ ಟಿಕೆಟ್ ನೀಡಿಲ್ಲ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನಿಂದ ವಲಸೆ ಬಂದ ಮೈಮುಲ್ ಮಾಜಿ ಅಧ್ಯಕ್ಷ ಎಸ್. ಸಿದ್ದೇಗೌಡರಿಗೆ ಟಿಕೆಟ್ ನೀಡಲಾಗಿದೆ.
ನಂಜನಗೂಡಿನಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಅಲ್ಲಿ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪೈಪೋಟಿಯಿಂದಾಗಿ ಕಳಲೆ ಹಿಂದೆ ಸರಿದಿದ್ದರು. ಧ್ರುವನಾರಾಯಣ ಹಠಾತ್ ನಿಧನರಾದರು. ಹೀಗಾಗಿ ಮಹದೇವಪ್ಪ ತಮ್ಮ ಹಳೆಯ ಟಿ.ನರಸೀಪುರ ಕ್ಷೇತ್ರಕ್ಕೆ ಮರಳಿದರು. ಇದರಿಂದ ಅಲ್ಲಿ ಅವರ ಪುತ್ರ ಸುನಿಲ್ ಬೋಸ್‌ಗೆ ಟಿಕೆಟ್ ತಪ್ಪಿತು.
ಉಳಿದಂತೆ ಹಾಲಿ ಶಾಸಕರಾದ ತನ್ವೀರ್ ಸೇಠ್- ನರಸಿಂಹರಾಜ, ಎಚ್.ಪಿ.ಮಂಜುನಾಥ್- ಹುಣಸೂರು, ಅನಿಲ್ ಚಿಕ್ಕಮಾದು- ಎಚ್.ಡಿ. ಕೋಟೆ, ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ವೆಂಕಟೇಶ್- ಪಿರಿಯಾಪಟ್ಟಣ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್- ಕೆ.ಆರ್.ನಗರದಿಂದ ಕಣಕ್ಕಿಳಿದಿದ್ದಾರೆ. ಇವರೆಲ್ಲಾ ಕಳೆದ ಬಾರಿ ಸ್ಪರ್ಧಿಸಿದ್ದರು.