ರಾಮನಗರ(ಏ.19): ಕೊರೋನಾ ಲಾಕ್‌ಡೌನ್‌ನಿಂದಾಗಿ ಸಂಕ​ಷ್ಟ​ದ​ಲ್ಲಿ​ರುವ ಜನ​ರಿಗೆ ಕಾಂಗ್ರೆಸ್‌ ಮಕ್ಕಳು ಬೀದಿ​ಯ​ಲ್ಲಿ​ ಸ್ಪಂದಿ​ಸು​ತ್ತಿದ್ದರೆ, ಮಣ್ಣಿನ ಮಕ್ಕಳು ಮನೆ​ಯ​ಲ್ಲಿ​ದ್ದಾರೆ ಎಂದು ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಜೆಡಿ​ಎಸ್‌ ನಾಯ​ಕರ ವಿರುದ್ಧ ವಾಗ್ದಾಳಿ ನಡೆ​ಸಿ​ದ್ದಾರೆ.

ಬಿಡದಿ ಹೋಬಳಿಯ ವೃಷಭಾವತಿಪುರ ಗ್ರಾಮದ ಜನರಿಗೆ 2 ಕೆ.ಜಿ ತೂಕದ ಮಿಕ್ಸ್‌ ಕಿಟ್‌ ವಿತರಿಸಿ ಮಾತ​ನಾ​ಡಿದ ಅವ​ರು, ಮಾತು ಮಾತಿಗೂ ನಾವು ಮಣ್ಣಿನ ಮಕ್ಕಳು ಎಂದು ಎದೆಯುಬ್ಬಿಸಿಕೊಂಡು ಹೇಳಿಕೊಳ್ಳುತ್ತಿದ್ದ ಯಾರೊ​ಬ್ಬ​ರೂ ಕೊರೋನಾ ಲಾಕ್‌ಡೌನ್‌ ಸಂಕಷ್ಟದ ಸಮಯದಲ್ಲಿ ಜನರ ಕೈ ಹಿಡಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತನ ಬಗ್ಗೆಯಾಗಲಿ, ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರ ಬಗ್ಗೆಯಾಗಲಿ ಯಾವುದೇ ಕಾಳಜಿ ಇಟ್ಟುಕೊಳ್ಳದ ಒಂದು ಕುಟುಂಬಕ್ಕೆ ಮಾತ್ರ ಸಿಮೀತವಾಗಿರುವ ಆ ಪಕ್ಷವನ್ನು ಬೆಂಬಲಿಸಬೇಕೆ? ಬೇಡವೇ? ಎಂಬುದನ್ನು ಮುಂದಿನ ದಿನಗಳಲ್ಲಿ ಜನರೇ ನಿರ್ಧರಿಸಬೇಕು ಎಂದರು.

ತಬ್ಲಿಘಿಗಳಿಂದ ಕರ್ನಾಟಕದ ಮತ್ತೊಂದು ಜಿಲ್ಲೆಗೆ ತಗುಲಿದ ಕೊರೋನಾ ನಂಜು..!

ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ರೈತ​ರಿಂದ ಬೆಳೆ ಖರೀ​ದಿಸಿ, ಸಂಕ​ಷ್ಟ​ದ​ಲ್ಲಿ​ರುವ ಜನ​ರಿಗೆ ಹಂಚುವ ಕೆಲಸ ಮಾಡು​ತ್ತಿ​ದ್ದಾರೆ. ಚುನಾ​ವಣೆ ಸಂದ​ರ್ಭ​ಗ​ಳಲ್ಲಿ ಕಣ್ಣೀರು ಸುರಿ​ಸಿ​ದರೆ ಜನರು ಎಲ್ಲ​ವನ್ನು ಮರೆತು ಹೋಗು​ತ್ತಾ​ರೆಂದು ಜೆಡಿ​ಎಸ್‌ ನಾಯ​ಕರೇ ಹೇಳು​ತ್ತಿ​ದ್ದಾರೆ. ಇದೆ​ಲ್ಲ​ವನ್ನು ಜನರು ಸೂಕ್ಷ್ಮ​ವಾಗಿ ಗಮ​ನಿ​ಸ​ಬೇಕು ಎಂದು ಹೇಳಿ​ದ​ರು.

ಕೊರೋನಾ ಲಾಕ್‌ಡೌನ್‌ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಸಮಿತಿ ಮೂಲಕ ಜನ ಸೇವೆ ಮಾಡುತ್ತಿದೆ. ಸ್ಥಳೀಯವಾಗಿ ಕಾರ್ಯಕರ್ತರು ಹಾಗೂ ಮುಖಂಡರು ಕೈ ಜೋಡಿಸುತ್ತಿದ್ದು, ನೊಂದವರಿಗೆ ನೆರವು ನೀಡುವುದರ ಜೊತೆಗೆ, ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಬಾಲಕೃಷ್ಣ ತಿಳಿಸಿದರು.

ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ:

ಕನ್ನಡಪರ, ಸಮಾಜಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಮಾಡುತ್ತಿರುವಷ್ಟು ಜನ ಸೇವೆಯನ್ನು ಸರ್ಕಾರದ ಸ್ಥಳೀಯ ಆಡಳಿತ ಮಾಡುತ್ತಿಲ್ಲ. ನಿರಾಶ್ರಿತರು, ನಿರ್ಗತಿಕರು ಹಾಗೂ ವಲಸಿಗರಿಗೆ ದಿನಸಿ ಪದಾರ್ಥಗಳನ್ನು ಮಾತ್ರ ವಿತರಿಸಿ ಕೈತೊಳೆದುಕೊಂಡರೆ ಸಾಲುವುದಿಲ್ಲ. ಅವರಿಗೆ ಬೇಕಾದ ಪಾತ್ರೆ-ಪಗಡೆ ಹಾಗೂ ಅಡುಗೆ ಅನಿಲದ ಬಗ್ಗೆ ಯಾರಾದರೂ ಚಿಂತಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಸ್ಥಳೀಯ ಆಡಳಿತಗಳು ಇವೆಲ್ಲವನ್ನು ಗಮನಿಸಿ, ಅಗತ್ಯ ಎನಿಸಿದರೆ ಸಮೀಕ್ಷೆ ನಡೆಸಿ ಒಂದು ಕುಟುಂಬ ನಿರ್ವಹಣೆ ಮಾಡಲು ಬೇಕಾದ ಮೂಲ ಸವಲತ್ತುಗಳನ್ನು ಒದಗಿಸುವ ಬದ್ಧತೆಯನ್ನು ತೋರಬೇಕಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯಿ​ತಿ ಅಧ್ಯಕ್ಷ ಗಾಣಕಲ್‌ ನಟರಾಜು, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ದಿಶಾ ಸದಸ್ಯೆ ಕಾವ್ಯಾ, ಪುರಸಭೆ ಸದಸ್ಯ ಸಿ.ಮಂಜುನಾಥ್‌, ಮುಖಂಡರಾದ ಎಲ್‌ ಚಂದ್ರಶೇಖರ್‌, ಅಬ್ಬನಕುಪ್ಪೆ ರಮೇಶ್‌ ಉಪಸ್ಥಿತರಿದ್ದರು.