ಹಾಸನ (ಅ.02): ರಾಜ್ಯದ ನೆರೆ ಪೀಡಿತರಿಗೆ ಕೇಂದ್ರದಿಂದ ನಯಾಪೈಸೆ ಅನುದಾನ ತರದೇ ಇರುವುದು ಸೇರಿದಂತೆ ರಾಜ್ಯ ಸರ್ಕಾರ ತನ್ನ ಅನೇಕ ವಿಫಲತೆಗಳನ್ನು ಮುಚ್ಚಿಕೊಳ್ಳಲು ಪೋನ್‌ ಕದ್ದಾಲಿಕೆ ಪ್ರಕರಣ ತೆಗೆದು ಚುಂಚನಗಿರಿ ಶ್ರೀಗಳ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಜೆಡಿಎಸ್‌ ಮುಖಂಡ, ಹಿರಿಯ ಸಚಿವ ಎಚ್‌.ಡಿ. ರೇವಣ್ಣ ವಾಗ್ದಾಳಿ ನಡೆಸಿದರು.

ಹಾಗಿದ್ದರೇ, ಮಾಜಿ ಸಿಎಂ ಕುಮಾರಸ್ವಾಮಿ, ನಿರ್ಮಲಾನಂದನಾಥ ಸ್ವಾಮೀಜಿ ಅವರೊಟ್ಟಿಗೆ ಅಮೇರಿಕಾಕ್ಕೆ ವಾರಗಟ್ಟಲೆ ಹೋಗುತ್ತಿದ್ದಾರಾ?, ಶ್ರೀಗಳು ಕುಮಾರಸ್ವಾಮಿಗಾಗಿ 3 ಬಾರಿ ಅಮಾವಾಸ್ಯೆ ಪೂಜೆ ಮಾಡುತ್ತಿದ್ದರಾ? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಅವರು, ನೆರೆ ಪರಿಹಾರ ಲೋಪ ಮುಚ್ಚಿ ಹಾಕಲು ಫೋನ್‌ ಟ್ಯಾಪಿಂಗ್‌ ಸೇರಿ ಬೇರೆ ಬೇರೆ ವಿವಾದ ಎತ್ತುತ್ತಿದ್ದಾರೆ ಟೀಕಿಸಿದರು.

ಶ್ರೀಗಳ ಪೋನ್‌ ಟ್ಯಾಪಿಂಗ್‌ ಮಾಡುವ ಅಗತ್ಯವಿಲ್ಲ, 7 ವರ್ಷಗಳಿಂದ ಅಧಿಕಾರ ಇಲ್ಲದ ಕಾರಣ ಖಾಲಿಯಾಗಿದ್ದ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಮುಖ್ಯಮಂತ್ರಿಗಳು ತಮ್ಮ ಸುಪುತ್ರ ವಿಜೇಂದ್ರರನ್ನು ಮುಂದೆ ಬಿಟ್ಟಿದ್ದಾರೆ. ತಂದೆ ಸೂಚನೆಯಂತೆ ವರ್ಗಾವಣೆ ದಂಧೆಯಲ್ಲಿ ನಿರತರಾಗಿರುವ ವಿಜೇಂದ್ರ, ಸ್ವಾಮೀಜಿಗಳ ಪೋನ್‌ ಕದ್ದಾಲಿಕೆ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ನಿಮ್ಮ ಜಿಲ್ಲೆಗಳ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದಿಚುಂಚನಗಿರಿ ಮಠಕ್ಕೆ ಒಕ್ಕಲಿಗರ ಜೊತೆ ಎಲ್ಲ ಜನಾಂಗಗಳ ಭಕ್ತರು ಇದ್ದಾರೆ. ಅವರು ಸ್ವಾಮೀಜಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಸ್ವಾಮೀಜಿ ಪೋನ್‌ ಕದ್ದಾಲಿಕೆ ಬಗ್ಗೆ ವಿಜೇಂದ್ರ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಬಿಜೆಪಿ ನಾಯಕರು ಮೊದಲು ಕೇಂದ್ರದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.

ಹಿಂದೆ ನಡೆದ ಲೋಕಸಭೆ ಚುನಾವಣೆ ವೇಳೆ ಕೇಂದ್ರ ಸರ್ಕಾರ, ಮಾಜಿ ಪಿಎಂ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಜೆಡಿಎಸ್‌ ನಾಯಕರ ಪೋನ್‌ ಕದ್ದಾಲಿಕೆ ಮಾಡಿದೆ. ಚುನಾವಣಾ ಆಯೋಗ, ತೆರಿಗೆ ಇಲಾಖೆಯವರು 3 ಜಿಲ್ಲೆಗಳನ್ನು ಬಿಟ್ಟರೇ ಬೇರೆ ಕಡೆ ಹೋಗಲೇ ಇಲ್ಲ ಎಂದು ಗಂಭೀರ ಆರೋಪ ಮಾಡಿದರು.

ಕೇಂದ್ರದಿಂದ ಬಿಡಿಗಾಸು ಬಂದಿಲ್ಲ

ರಾಜ್ಯದಲ್ಲಿ ಅತಿವೃಷ್ಟಿಹಾನಿಯಿಂದ ಕಷ್ಟಕ್ಕೆ ಈಡಾಗಿರುವ 12 ಜಿಲ್ಲೆಗಳ ಲಕ್ಷಾಂತರ ಕುಟುಂಬಗಳಿಗೆ ಈ ವರೆಗೂ ಕೇಂದ್ರದಿಂದ ಬಿಡಿಗಾಸು ಬಂದಿಲ್ಲ. ನೆರೆಯಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರು. ರಾಜ್ಯ ಸರ್ಕಾರವೇ ಕೇಂದ್ರಕ್ಕೆ ವರದಿ ನೀಡಿದೆ. ಕೇಂದ್ರದಿಂದ ಹಣ ತರಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಪರಿಹಾರ ತರದೇ ಇರುವ ಬಿಜೆಪಿಯವರಿಗೆ ಅಧಿಕಾರ ನಡೆಸಲು ನೈತಿಕತೆ ಇಲ್ಲ ಎಂದು ರೇವಣ್ಣ ಖಂಡಿಸಿದರು.

ಹಿಂಬಾಗಿಲಿನಿಂದ ಬಿಜೆಪಿ ಅಧಿಕಾರಕ್ಕೆ ಬಂದು ದ್ವೇಷ ರಾಜಕಾರಣ ಮಾಡಲಾಗುತ್ತಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್‌ ಮುಗಿಸಲು ರಾಷ್ಟ್ರೀಯ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಅದು ಅವರಿಗೆ ತಿರುಗು ಮುರುವಾಗಲಿದೆ. ವಿಧಾನಸಭೆ ಅಧಿವೇಶನವನ್ನು ಕನಿಷ್ಠ 15 ದಿನಗಳವರೆಗೆ ನಡೆಸಬೇಕೆಂದು ಒತ್ತಾಯಿಸಿದರು.