ಹಾಸನ(ಅ.03): ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. 25 ಲಕ್ಷ ನೀಡಿ ಹುದ್ದೆ ಪಡೆದು ಜಿಲ್ಲೆಗೆ ಬರುತ್ತಾರೆ. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಗಮನ ಹರಿಸದೇ ಹಣ ಮಾಡಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಜೆಡಿಎಸ್‌ ಮುಖಂಡ ಹೆಚ್‌.ಡಿ ರೇವಣ್ಣ ಆರೋಪಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಅಧಿಕಾರ ಸ್ವೀಕರಿಸಿದ ಪೊಲೀಸ್ ಅಧಿಕಾರಿಗೆ ರೌಡಿಗಳು ಸ್ವಾಗತಿಸಿದ್ದಾರೆ. ಪೊಲೀಸರನ್ನ ರೌಡಿಗಳು ಹೂವಿನ ಮಳೆ ಸುರಿಸಿ ಸ್ವಾಗತ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವರು, ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡುತ್ತೇನೆ. ಜಿಲ್ಲೆಯಲ್ಲಿ ಯಾವುದೇ ಅನಾಹುತಗಳಾದರೆ ದಕ್ಷಿಣ ವಲಯ ಐಜಿಪಿ ಅವರೇ ನೇರ ಹೊಣೆ ಎಂದು ಹೇಳಿದ್ದಾರೆ.

ಕೊರೋನಾ ಕಾಟ: ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಹಾಸನಾಂಬೆ ದರ್ಶನ ಭಾಗ್ಯ 

ಈಗಾಗಲೇ ನಾನು ಗೃಹ ಸಚಿವರೊಂದಿಗೆ ದೂರವಾಣಿ ಮೂಲಕ‌ ಮಾತನಾಡಿದ್ದೇನೆ. ಪ್ರತಿ ಇಲಾಖೆಯಲ್ಲೂ ವರ್ಗಾವಣೆ ನಡೆಯುತ್ತಿದೆ ಎಂದು ಆರೋಪಿಸಿದ ಹೆಚ್‌.ಡಿ ರೇವಣ್ಣ ಅವರು ಯಕಶ್ಚಿತ್ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಸರ್ಕಾರವೇ ಗುಲಾಮರಾದಂತಾಗಿದೆ. ನನಗೆ ಗೃಹ ಸಚಿವ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ. ವರ್ಗಾವಣೆ ದಂಧೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನನ್ನ ತಾಯಿ ಮೇಲೂ ಆಸಿಡ್ ದಾಳಿ ನಡೆದಿತ್ತು. ಅಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಆಗಲಿ. ಒಂದು ಸಮಾಜದವರನ್ನ ಗುರಿ ಮಾಡಿ ನಿನ್ನೆ ಸಬ್‌ಇನ್ಸ್‌ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯ ಆಗುಹೋಗುಗಳಿಗೆ ದಕ್ಷಿಣ ವಲಯ ಐಜಿಪಿಯೇ ನೇರ ಹೊಣೆಯಯಾಗಿದ್ದಾರೆ. ಮಾಜಿ ಪ್ರಧಾನಮಂತ್ರಿಯ ಸ್ವಂತ ಜಿಲ್ಲೆಯಲ್ಲಿ ಈ ರೀತಿ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರಿಗೂ ದೂರು ನೀಡುತ್ತೇನೆ. ಈ ಬಗ್ಗೆ ಹೈಕೋರ್ಟ್‌ನಲ್ಲೂ ದಾವೆ ಹೂಡುತ್ತೇನೆ ಎಂದು ಹೇಳಿದ್ದಾರೆ.