ಸಮಾಜದ ಪರವಾದ ನನ್ನ ಗಟ್ಟಿಧ್ವನಿ ಅಡಗಿಸಲು ದುಷ್ಟಶಕ್ತಿಗಳು ಪ್ಯಾಕೇಜ್ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ನೋವಿನಿಂದ ಹೇಳಿಕೊಂಡರು.

ಕೊಪ್ಪಳ (ಮೇ.23): ಸಮಾಜದ ಪರವಾದ ನನ್ನ ಗಟ್ಟಿಧ್ವನಿ ಅಡಗಿಸಲು ದುಷ್ಟಶಕ್ತಿಗಳು ಪ್ಯಾಕೇಜ್ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. ಕೆಲ ದುಷ್ಟ ಶಕ್ತಿಗಳು ಒಗ್ಗೂಡಿ, ಹಣ ಚೆಲ್ಲಿ, ನನ್ನ ವಿರುದ್ಧ ಷಢ್ಯಂತ್ರ ಮಾಡಿ ಸೋಲಿಸಿದ್ದಾರೆ ಎಂದು ನೋವಿನಿಂದ ಹೇಳಿಕೊಂಡರು.

Add Asianetnews Kannada as a Preferred SourcegooglePreferred

ನನ್ನನ್ನು ಕೆಲವರು ಮಾತ್ರ ಸೋಲಿಸಿಲ್ಲ, ಅನೇಕರು ಸೇರಿಕೊಂಡು ಸೋಲಿಸಿದ್ದಾರೆ. ನಾನು ಸಮಾಜದ ಪರ ಧ್ವನಿ ಎತ್ತುವುದು ನಮ್ಮ ಪಕ್ಷದವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ನನ್ನ ಸೋಲಿಗೆ ನನ್ನ ಪಕ್ಷದವರು ಕಾರಣವಾಗಿದ್ದಾರೆ. ಯಾರು ಏನು ಎಂದು ನಾನು ಹೇಳುವುದಿಲ್ಲ. ಬಿ.ಆರ್.ಅಂಬೇಡ್ಕರ್ ಅವರನ್ನೇ ಸೋಲಿಸಿದ್ದನ್ನು ನೋಡಿದ್ದೇವೆ. ನನ್ನಂತವನನ್ನು ಬಿಡುತ್ತಾರೆಯೇ ಎಂದು ಬೇಸರದಿಂದ ಹೇಳಿದರು.

ನಾನು ಶಾಸಕ, ಮಂತ್ರಿಯಾಗುವುದು ಮುಖ್ಯವಲ್ಲ. ನಾನು ಸಮಾಜದ ಪರವಾಗಿ ಜೀವ ಇರುವವರೆಗೂ ಹೋರಾಟ ಮಾಡುತ್ತೇನೆ. ಸಾಮಾಜಿಕ ನ್ಯಾಯದ ಪರವಾಗಿ ಯಾರು ಇರುತ್ತಾರೋ ಅವರು ಕೆಲವರಿಗೆ ಹಿಡಿಸುವುದು ಇಲ್ಲ. ಆದರೆ, ಇದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಮಾಜದ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ. ನನ್ನ ಸೋಲಿನಲ್ಲಿ ನನ್ನದು ಪಾತ್ರವಿದೆ. ಹುಚ್ಚು ಸ್ವಾಭಿಮಾನದಿಂದ ಕೆಲವರು ಕರೆದರು ನಾನು ಹೋಗಲಿಲ್ಲ. ಹಣ ಕೊಡುತ್ತೇನೆ ಎಂದರೂ ಅವರ ಬಳಿ ಹೋಗಲಿಲ್ಲ ಎಂದು ಚುನಾವಣೆಯ ಸಂದರ್ಭದ ವಿವರಣೆ ಮಾಡಿದರು.

ಈಗಲೇ ಏನು ಹೇಳುವುದಿಲ್ಲ

ನನಗೆ ಸ್ಪರ್ಧೆ ಮಾಡಬೇಡ ಎಂದಿದ್ದರು. ಆದರೂ ನಾನೇ ಹಠ ಹಿಡಿದು ಸ್ಪರ್ಧೆ ಮಾಡಿದ್ದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಅನ್ಯಾಯವಾಗಿದೆ. ಈ ಬಾರಿಯಾದರೂ ಸರಿ ಮಾಡಬೇಕಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜದವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಈಗಲೇ ಏನು ಹೇಳುವುದಿಲ್ಲ, ಇನ್ನು ವರ್ಷವಿದ್ದಾಗ ಈ ಕುರಿತು ತೀರ್ಮಾನ ಮಾಡುತ್ತೇನೆ ಎಂದರು. ಸಿಎಂ ಬದಲಾವಣೆ ಸೇರಿದಂತೆ ಯಾವುದೇ ವಿಷಯದ ಕುರಿತು ನಾನು ಮಾತಾಡುವುದಿಲ್ಲ ಎಂದರು.