ಹುಬ್ಬಳ್ಳಿ(ನ.22): ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸರ್ಕಾರ ಮಾಡಲು ಬರುತ್ತದೆ. ಆದರೆ, ನಿಮಗೆ ಮತ ನೀಡಿದ ಮತದಾರರ ಹಕ್ಕಿನ ಮಹದಾಯಿ ನೀರು ಕೊಡಿಸಲು ನಿಮ್ಮಿಂದ ಆಗುವುದಿಲ್ಲವೇ? ಜನರ ಋುಣ ತೀರಿಸಿ ಇಲ್ಲವಾದರೆ ಸಾಮೂಹಿಕ ರಾಜೀನಾಮೆ ನೀಡಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಎಲ್ಲ ಪಕ್ಷಗಳು ಹೋರಾಟ ನಡೆಸಿವೆ. ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದಾಗ ಇದಕ್ಕಾಗಿ ನಿರಂತರ ಹೋರಾಟ ಮಾಡುತ್ತಿತ್ತು. ಆದರೆ ನ್ಯಾಯಾಧಿಕರಣ ತೀರ್ಪು ನೀಡಿ ಇಷ್ಟು ದಿನಗಳಾದರೂ ನೋಟಿಫಿಕೇಶನ್‌ ಹೊರಡಿಸಲು ಸಾಧ್ಯವಾಗಿಲ್ಲವೇಕೆ? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಗಿಫ್ಟ್‌

ಕಾಂಗ್ರೆಸ್‌ನ ಕೆಲ ಶಾಸಕರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸುವಂತೆ ಮಾಡುವ ಮೂಲಕ ಗಿಫ್ಟ್‌ ನೀಡಿದ್ದಾರೆ. ಇನ್ನು ರಾಜ್ಯದ ಜನತೆ 25 ಸಂಸದರನ್ನು ಗೆಲ್ಲಿಸಿಕೊಡುವ ಮೂಲಕ ಬಿಜೆಪಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಆದರೂ ಬಿಜೆಪಿ ಸರ್ಕಾರ ಮಾತ್ರ ರಾಜ್ಯ ಹಿತ ಕಾಪಾಡುತ್ತಿಲ್ಲ. ಮಹದಾಯಿ ವಿಚಾರವಾಗಿ ಇದೀಗ ಪರಿಸರ ಇಲಾಖೆ ಕೊಟ್ಟಿರುವ ಅನುಮತಿ ಮರುಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದೆ. ಈ ಭಾಗದ ಸಂಸದರಾಗಲಿ, ಶಾಸಕರಾಗಲಿ ತುಟಿ ಪಿಟಿಕ್‌ ಎನ್ನುತ್ತಿಲ್ಲ. ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್‌, ಸುರೇಶ ಅಂಗಡಿ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ ಮಂತ್ರಿಗಳಾಗಿದ್ದಾರೆ. ಮಹದಾಯಿ ವಿಷಯ ಬಗೆಹರಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಎಲ್ಲರೂ ರಾಜೀನಾಮೆ ಕೊಡಲಿ ಎಂದು ನುಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಧಾನಮಂತ್ರಿ ಮನಸು ಮಾಡಿದ್ದರೆ ಒಂದೇ ದಿನದಲ್ಲಿ ನೋಟಿಫಿಕೇಶನ್‌ ಹೊರಡಿಸಬಹುದಿತ್ತು ಎಂದ ಅವರು, ಬಿಜೆಪಿಗರು ಅಧಿಕಾರಕ್ಕೆ ಬರುವ ಮುನ್ನ ಮಹದಾಯಿ ನೀರು ಕೊಡುತ್ತೇವೆ ಎಂದು ಹೇಳಿ ಇದೀಗ ಮರೆತುಬಿಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ 18 ಜನರನ್ನು ಮಂತ್ರಿ ಮಾಡುತ್ತೇವೆ ಎಂದೆಲ್ಲ ಹೇಳಿಕೊಂಡು ತಿರುಗುತ್ತಿದ್ದಾರೆ. ಮಂತ್ರಿ ಅಷ್ಟೇ ಏಕೆ ಎಲ್ಲರನ್ನು ಮುಖ್ಯಮಂತ್ರಿಗಳನ್ನಾಗಿಯೇ ಮಾಡಿಕೊಳ್ಳಲಿ ಬೇಡ ಎನ್ನುವುದಿಲ್ಲ. ಆದರೆ ಈ ರೀತಿ ನೀಡುವ ಭರವಸೆ, ಹುಮ್ಮಸ್ಸು ರಾಜ್ಯ ಹಿತ ಕಾಪಾಡಲು ಏಕಿಲ್ಲ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಮಂತ್ರಿ ಮಾಡುತ್ತೇವೆ ಗೆಲ್ಲಿಸಿಕೊಡಿ ಎಂದು ಹೇಳೋದು ಕೂಡ ಭ್ರಷ್ಟಾಚಾರವೇ? ಎಂದ ಅವರು, ಚುನಾವಣಾ ಆಯೋಗವೇಕೆ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಪ್ರಶ್ನಿಸಿದರು.

ಆಪರೇಷನ್‌ ಕಮಲದ ವಿಚಾರದಲ್ಲಿ ಎನೇನೂ ವ್ಯಾಪಾರ, ವ್ಯವಹಾರ ನಡೆದಿದೆ ಎಂಬುದೆಲ್ಲವೂ ಇದೀಗ ಬಹಿರಂಗಗೊಂಡಿದೆ ಎಂದ ಅವರು, ಮಹದಾಯಿ ನೀರು ಕೊಡದ, ರೈತರ, ರಾಜ್ಯದ ಹಿತ ಕಾಪಾಡದ ಬಿಜೆಪಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.

ಪಕ್ಷದ ಕೆಲಸ:

ಗೋಕಾಕ ಹಾಗೂ ಹೊಸಕೋಟೆ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಎರಡು ಕ್ಷೇತ್ರಗಳಲ್ಲೂ ದೊಡ್ಡವರು ನಿಂತಿದ್ದಾರೆ. ಆ ಬಗ್ಗೆ ಏನು ಮಾತನಾಡಲ್ಲ. ಉಪಚುನಾವಣೆಯಲ್ಲಿ ಪಕ್ಷದ ಕೆಲಸ ಮಾಡುತ್ತೇನೆ. ನೋಟಿಸ್‌ಗಳು ಸತತವಾಗಿ ಬರುತ್ತಿವೆ. ಕೋರ್ಟ್‌, ಕಚೇರಿ ಅಲೆದಾಡಬೇಕಿದೆ. ಪಕ್ಷದ ಕೆಲಸವನ್ನೂ ಮಾಡಬೇಕಿದೆ. ನನ್ನ ರಕ್ಷಣೆಯನ್ನೂ ಮಾಡಿಕೊಳ್ಳಬೇಕಿದೆ ಎಂದರು. ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟುಸ್ಥಾನಗಳನ್ನು ಗೆಲ್ಲಬಹುದು ಎಂಬ ಪ್ರಶ್ನೆಗೆ ನಾನು ಭವಿಷ್ಯ ಹೇಳುವ ಜೋತಿಷ್ಯಕಾರನಲ್ಲ ಎಂದರು.

ಆಕಾಂಕ್ಷಿಯಲ್ಲ:

ಕೆಪಿಸಿಸಿ ಅಧ್ಯಕ್ಷರಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಸದ್ಯ ದಿನೇಶ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನೇನು ಕೆಪಿಸಿಸಿ ಅಧ್ಯಕ್ಷಗಿರಿಯ ಆಕಾಂಕ್ಷಿಯಲ್ಲ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರು, ಪ್ರಕಾಶಗೌಡ ಪಾಟೀಲ, ಸದಾನಂದ ಡಂಗನವರ, ನಾಗರಾಜ ಛಬ್ಬಿ, ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರಿದ್ದರು.