ಮದ್ದೂರು(ಆ.21):  ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಯೊಂದಿಗೆ ಡಿ.ದೇವರಾಜ ಅರಸು ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿದ್ದರು. ಆದರೆ, ಇಂದಿನ ಬಿಜೆಪಿ ಸರ್ಕಾರ ಉದ್ಯಮಿಗಳೇ ಭೂಮಿಯ ಒಡೆಯ ಎಂದು ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಒಪ್ಪಿಸಲು ತಿದ್ದುಪಡಿ ತಂದಿದೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಜರಿದರು.

ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಯೋಗ್ಯ ಜಮೀನನ್ನು ರೈತರಿಂದ ಸರ್ಕಾರ ಕಸಿದುಕೊಳ್ಳುತ್ತಿದೆ. ವ್ಯವಸಾಯಕ್ಕೆ ಜಮೀನು ಇಲ್ಲದಂತೆ ಮಾಡಿ ಉದ್ಯಮಪತಿಗಳ ಪಾಲಾಗಿಸುತ್ತಿದೆ. ಕೃಷಿಕರಲ್ಲದ ಬಂಡವಾಳಶಾಹಿಗಳು ಖರೀದಿಸುವ ಭೂಮಿಯನ್ನು ವ್ಯವಸಾಯ ಉದ್ದೇಶಕ್ಕೆ ಎಂದಿಗೂ ಬಳಸುವುದಿಲ್ಲ. ಒಮ್ಮೆ ಮಾರಾಟವಾದ ಭೂಮಿಯನ್ನು ರೈತರು ಹಾಗೂ ಸಾಮಾನ್ಯ ಜನರು ಮತ್ತೆ ಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಕೃಷಿ ಭೂಮಿಯನ್ನು ಉದ್ಯಮಿಗಳ ಪಾಲಾಗಿಸಿ ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ಇದರ ಹಿಂದೆ ಅಡಗಿದೆ ಎಂದು ಟೀಕಿಸಿದರು.

ಚೌತಿ ಹಬ್ಬಕ್ಕೆ ಸಿಎಂ ಬಿಎಸ್‌ವೈ ಭರ್ಜರಿ ಉಡುಗೊರೆ.

ಕೃಷಿ ಯೋಗ್ಯ ಭೂಮಿಯನ್ನು ಶ್ರೀಮಂತರ ಪಾಲಾಗಿಸುವ ಕಾಯ್ದೆಯಿಂದ ಮುಂದೆ ಬೆಳೆ ಬೆಳೆಯಲು ಭೂಮಿ ಸಿಗದಂತಾಗಬಹುದು. ಆಹಾರದ ಕೊರತೆ ಎದುರಾಗುವ ಆತಂಕ ಈಗಲೇ ಸೃಷ್ಟಿಯಾಗುತ್ತಿದೆ. ತಕ್ಷಣವೇ ಬಿಜೆಪಿ ಸರ್ಕಾರ ಕಾಯ್ದೆಯನ್ನು ವಾಪಸ್‌ ಪಡೆಯುವಂತೆ ಆಗ್ರಹಪಡಿಸಿದರು.

ಯಾವುದೇ ಒಂದು ಕಾಯ್ದೆಯನ್ನು ಜಾರಿಗೊಳಿಸುವಾಗ ಮತ್ತು ತಿದ್ದುಪಡಿ ತರುವ ಸಮಯದಲ್ಲಿ ವಿರೋಧಪಕ್ಷಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಜಾರಿಗೊಳಿಸಬೇಕು. ಆದರೆ, ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ ಎಂದು ಟೀಕಿಸಿದರು.

ಈ ವಿಷಯವಾಗಿ ಅಧಿವೇಶನದಲ್ಲಿ ಪ್ರಬಲವಾಗಿ ಧ್ವನಿ ಎತ್ತಲಾಗುವುದು. ಕೊರೋನಾ ಸಂಕಷ್ಟಸಮಯದಲ್ಲಿ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.

ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿ...

ಮೈಷುಗರ್‌ ಕಾರ್ಖಾನೆ ಆರಂಭ ವಿಚಾರದಲ್ಲಿ ರಾಜ್ಯಸರ್ಕಾರ ಶೀಘ್ರ ತೀರ್ಮಾನ ಕೈಗೊಂಡು ಕಾರ್ಯಾರಂಭಕ್ಕೆ ಕ್ರಮ ಜರುಗಿಸಬೇಕು. ಒ ಅಂಡ್‌ ಎಂ ಮೂಲಕ ಚಾಲನೆ ಕೊಡುವುದಾಗಿ ಭರವಸೆ ನೀಡಿದೆ. ಕೂಡಲೇ ಆ ಪ್ರಕ್ರಿಯೆ ಆರಂಭಿಸಬೇಕು. ಕಟಾವಿಗೆ ಬಂದಿರುವ ಕಬ್ಬನ್ನು ಶೀಘ್ರ ನುರಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.