ಕಡೂರು(ಮೇ.11):ಮಾಜಿ ಶಾಸಕ ವೈಎಸ್‌ವಿ ದತ್ತ ಬೆಳೆಗಳನ್ನು ನೇರವಾಗಿ ಖರೀದಿಸುವ ಮೂಲಕ, ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಭಾನುವಾರ ಕಡೂರು ವಿಧಾನಸಭಾ ಕ್ಷೇತ್ರದ ವಿ.ಸಿದ್ದರಹಳ್ಳಿಯಲ್ಲಿ ರೈತ ರಮೇಶ ಬೆಳೆದಿರುವ 15 ಟನ್‌ ಕಲ್ಲಂಗಡಿ ಮತ್ತು ಗೌಡನಕಟ್ಟೆಹಳ್ಳಿಗಳ ರೈತರಾದ ಲಕ್ಷಮ್ಮ ಮತ್ತು ಆಕೆಯ ಮಗ ಪ್ರಭು ಸೇರಿ ಬೆಳೆದಿರುವ 15 ಟನ್‌ ಟೊಮೆಟೋವನ್ನು ರೈತರ ಜಮೀನುಗಳಿಗೆ ತಮ್ಮ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ತೆರಳಿ ನೇರವಾಗಿ ಖರೀದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ದತ್ತ ಅವರು, ಕೊರೋನಾ ಲಾಕ್‌ಡೌನ್‌ ಸಂಕಷ್ಟದಿಂದಾಗಿ ರೈತರು ಬೆಳೆದ ವಿವಿಧ ಹಣ್ಣು, ತರಕಾರಿ ಮತ್ತಿತರ ಬೆಳೆಗಳನ್ನು ಖರೀದಿಸುವವರು ಬಾರದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ರೈತರ ಪರವಾದ ಸ್ಪಂದನೆಗೆ ಪ್ರತಿಪಕ್ಷಗಳು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ರೈತರ ಬೆಳೆಗಳನ್ನು ಸರ್ಕಾರವೇ ನೇರವಾಗಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ತಾವು ಕೂಡ ಹಾಕಿ ಸಾಂಕೇತಿಕವಾಗಿ ಜೆಡಿಎಸ್‌ದಿಂದ ರೈತರಿಂದ 15 ಟನ್‌ ಕಲ್ಲಂಗಡಿ ಮತ್ತು ಹಾಗೂ 15 ಟನ್‌ ಟೊಮೆಟೋ ಖರೀದಿ ಮಾಡಲಾಗಿದೆ ಎಂದರು.

ವಾಮಮಾರ್ಗದಲ್ಲಿ ಬರುವವರ ಬಗ್ಗೆ ಎಚ್ಚರ: ಸೈಕಲ್‌ನಲ್ಲಿ ನಗರ ಸುತ್ತಿದ ಸಚಿವ ಸಿ.ಟಿ.ರವಿ

ಖರೀದಿಸಿದ ಕಲ್ಲಗಂಡಿಯನ್ನು ಕಡೂರು ಮತ್ತು ಬೀರೂರು ಪಟ್ಟಣದ ಬಡಜನರಿಗೆ ಹಂಚಲಾಗುವುದು. ಟೊಮೆಟೋವನ್ನು ಮನೆ ಮನೆಗೆ ಮಂಗಳವಾರದಿಂದ ಹಂಚಲು ಪ್ಯಾಕೆಟ್‌ ಮಾಡಲಾಗುತ್ತಿದೆ. ಅನೇಕ ರೈತರು ತಮ್ಮ ಬೆಳೆಗಳ ಖರೀದಿಗೂ ಅವಕಾಶ ಮಾಡಿಕೊಡಿ ಎಂಬ ಬೇಡಿಕೆ ಹಿನ್ನೆಲೆ ತಾವು ಒಂದು ಹೆಜ್ಜೆ ಮುಂದೆ ಹೋಗಿ ತೋಟಗಾರಿಕಾ ಇಲಾಖೆಯ ಹಾಪ್‌ ಕಾಮ್ಸ್‌ನ ರಾಜ್ಯ ನಿರ್ದೇಶಕರನ್ನು ಸಂಪರ್ಕಿಸಿ, ರೈತರ ಪರಿಸ್ಥಿತಿ ವಿವರಿಸಿದ್ದರಿಂದ ರೈತರ ಉತ್ಪನ್ನಗಳ ಖರೀದಿಗೆ ಒಪ್ಪಿ ಕಡೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಖರೀದಿಸುವಂತೆ ಆದೇಶ ನೀಡಿದ್ದಾರೆ. ಇದು ಸ್ವಲ್ಪಮಟ್ಟಿಗೆ ರೈತರಿಗೆ ಸಹಾಯ ಆಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಇದು ತಮ್ಮ ಕೈಲಾದ ಸಣ್ಣ ಪ್ರಯತ್ನವಾಗಿದೆ. ರಾಜ್ಯ ಸರ್ಕಾರವು ರೈತರ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನಮಗೆ ಗೌರವವಿದೆ. ಜೊತೆಯಲ್ಲಿ ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ. ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಪುರಸಭಾ ಸದಸ್ಯ ಮೋಹನ್‌, ರವಿ, ಮುಖಂಡರಾದ ಶೂದ್ರ ಶ್ರೀನಿವಾಸ್‌, ಬಿದರೆ ಜಗದೀಶ್‌, ಚಂದ್ರಪ್ಪ, ದೊಡ್ಡಯ್ಯ, ಕುಮಾರಪ್ಪ, ಚಂದನ್‌, ವಿನಯ್‌ ದಂಡಾವತಿ, ವೆಂಕಟೇಶಮೂರ್ತಿ, ನಂಜಪ್ಪ ದೇವೇಂದ್ರ ಮತ್ತಿತರಿದ್ದರು.

ಉತ್ಪನ್ನಗಳಿದ್ದರೆ ನೀಡಿ

ತೋಟಗಾರಿಕೆಯ ರಾಜ್ಯ ನಿರ್ದೇಶಕರು ತಿಳಿಸಿದಂತೆ ರೈತರು ತಾವು ಬೆಳೆದ ಹಣ್ಣು ತರಕಾರಿ ತೋಟಗಾರಿಕಾ ಬೆಳೆಗಳನ್ನು ತೋಟಗಾರಿಕಾ ಇಲಾಖೆಯಿಂದ ಖರೀದಿಸಲು ರೈತರು ಕಡೂರಿನ ಹಿರಿಯ ಸಹಾಯಕ ನಿರ್ದೇಶಕ ಲಿಂಗರಾಜು ಅವರ ಮೊ. 84950- 29318 ನಂಬರ್‌ಗೆ ಪೋನ್‌ ಮಾಡಿ ತಮ್ಮ ಉತ್ಪನ್ನಗಳನ್ನು ನೀಡಬಹುದು ಎಂದು ವೈಎಸ್‌ವಿ ದತ್ತ ತಿಳಿಸಿದ್ದಾರೆ.