ಬೆಳಗಾವಿ(ಡಿ.08): ಉಪಚುನಾವಣೆ ಸಮೀಕ್ಷೆಗಳನ್ನ ನಾನು ನಂಬುವುದಿಲ್ಲ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ‌ ಸಮೀಕ್ಷೆಗಳು ಏನಾಗಿವೆ?, ಅಂದಾಜು ಮೇಲೆ ಸಮೀಕ್ಷೆ ಮಾಡಿರುತ್ತಾರೆ. ನಾಳೆ ಚುನಾವಣೆಯ ಫಲಿತಾಂಶ ಬಂದ ಮೇಲೆ ಎಲ್ಲವೂ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ಪರಿಹಾರ ಬಗ್ಗೆ ಸರ್ಕಾರ ಇಂದಿನವರೆಗೂ ತಲೆಕೆಡಸಿಕೊಂಡಿಲ್ಲ. ಹತ್ತು ಸಾವಿರ ಮತ್ತು ಒಂದು ಲಕ್ಷ ರು. ಕೊಟ್ಟು ಕೈತೊಳೆದುಕೊಂಡಿದ್ದಾರೆ. ಅನೇಕ‌ ಜನರಿಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚುನಾವಣೆ ನಂತರ ಕಾಂಗ್ರೆಸ್ ಕಥೆ ಮುಗಿಯುತ್ತೆ ಎಂಬ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಹೇಳಿಕೆಗೆ‌ ತಿರುಗೇಟು ನೀಡಿದ ಸಿದ್ದರಾಮಯ್ಯ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತಾರೆ ಅದು ಅವರ ಭ್ರಮೆಯಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗೆ ನನ್ನ ಕಂಡರೆ ಭಯ ಅದಕ್ಕೆ‌ ಪದೇ ಪದೇ ನನ್ನ ಹೆಸರು ಪ್ರಸ್ತಾಪ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಮತ್ತು ಸರ್ಕಾರಿ ನೌಕರರ ಸಂಬಳ ಆಗಿಲ್ಲ‌ ಎಂಬ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದಲ್ಲಿ  ಆರ್ಥಿಕ‌ ಹಣಕಾಸು ಸರಿಯಾಗಿ ನಿಭಾಯಿಸಲು ಆಗದೆ ತೊಂದರೆ ಆಗಿದೆ. ಕೇಂದ್ರ ಸರ್ಕಾರದಿಂದ‌ ಜಿಎಸ್‌ಟಿ ದು 5600 ಕೋಟಿ ಬರಬೇಕು. ನಮ್ಮ ಪಾಲನ್ನ ಇನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ ಅದ್ರಿಂದ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ. 

ಯಡಿಯೂರಪ್ಪ ಸರ್ಕಾರ ಉಳಿಸಲು ಭಜನೆ ಮಾಡಿಕೊಂಡು ಕುಳಿತಿದ್ದಾನೆ. ಹಣಕಾಸು ಮತ್ತು ಪ್ರಧಾನಿ ಅವರ ಹತ್ತಿರ ಕುಳಿತು ಹಣ ತರಬೇಕು. ಪರಿಹಾರದ ಎರಡನೇ ಕಂತು ಇನ್ನೂ ಕೊಟ್ಟಿಲ್ಲ ಕೊಡೊದು ಇಲ್ಲ. ತಮ್ಮ‌ ಹುಳುಕು ಮತ್ತು ತಪ್ಪು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ಕೊಡಲಿಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಜಿಎಸ್‌ಟಿ ಕಲೆಕ್ಟ್ ಆಗಿಲ್ಲಾ ಅಂತಾ ರಾಜ್ಯಕ್ಕೆ ಕೇಂದ್ರ ಹಣ ಕೊಡ್ತಾರೋ ಇಲ್ಲವೋ ಗೊತ್ತಿಲ್ಲ, ಇದೇ ರೀತಿ ಆದ್ರೇ ರಾಜ್ಯದ ಜನರದ್ದು ಅಧೋಗತಿ, ದೇವರೇ ಗತಿ ಆಗಲಿದೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ‌ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯದಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.