ಗುಳೇದಗುಡ್ಡ(ಮೇ.03): ಮಹಾಮಾರಿ ಕೊರೋನಾದಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಇದರಿಂದ ಲಕ್ಷಾಂತರ ಜನರು ಅನ್ನ, ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹವರಿಗೆ ಹಲವರು ಸಹಾಯ ಹಸ್ತಚಾಚಿ ಮಾನವೀಯತೆ ಮೆರೆಯುತ್ತಿದ್ದಾರೆ. 

ಇನ್ನೂ ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನರು ಕೊರೋನಾ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿದ ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಕೊರೋನಾದಿಂದ ಕ್ಷೇತ್ರಕ್ಕೆ ಬಂದು ಜನರ ಕಷ್ಟಗಳಿಗೆ ಸ್ಪಂದಿಸಲು ಆಗದೇ ಇದ್ದರೂ, ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಮತ್ತು ಸಿದ್ದರಾಮಯ್ಯ ಅಭಿಮಾನಿ ಬಳಗದ ಮುಖಾಂತರ ಕ್ಷೇತ್ರಾದ್ಯಂತ ಕಷ್ಟದಲ್ಲಿ ಇದ್ದವರಿಗೆ ಆಹಾರ, ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ ಮಾಡುವ ಮೂಲಕ ಸದಾ ನಾನು ನಿಮ್ಮ ಕಷ್ಟಗಳಿಗೆ ಕಾವಲಾಗಿ ಇರುತ್ತೇನೆ ಎಂದು ತೋರಿಸಿಕೊಟ್ಟಿದ್ದಾರೆ.

ಕೊರೋನಾ ಕಾಲಿಟ್ಟಾಗಿನಿಂದ ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದಿಂದ ವತಿಯಿಂದ ನಗರದ ಯುವ ಮುಖಂಡ ಹೊಳಬಸು ಶೆಟ್ಟರ ನೇತೃತ್ವದಲ್ಲಿ ಬಾದಾಮಿ ಮತಕ್ಷೇತ್ರದ ಜನರ ಅನುಭವಿಸುತ್ತಿರುವ ಕಷ್ಟಕ್ಕೆ ಸ್ಪಂದಿಸಿ, ಕ್ಷೇತ್ರದಾದ್ಯಂತ ಜನರಿಗೆ ಆಹಾರಧಾನ್ಯ, ಊಟ, ಮಾಸ್ಕ್‌ ಸೇರಿದಂತೆ ವಿವಿಧ ಸಹಾಯ ಸೌಲಭ್ಯ ನೀಡುವ ಕಾರ್ಯ ಮುಂದುವರಿದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಪೌರ ಕಾರ್ಮಿಕರಿಗೆ ಕಿಟ್‌ ವಿತರಣೆ

2 ಲಕ್ಷ 47 ಸಾವಿರ ಮಾಸ್ಕ್‌ ವಿತರಣೆ:

ಗುಳೇದಗುಡ್ಡ ನಗರದಲ್ಲಿ 23 ಸಾವಿರ ಮಾಸ್ಕ್‌ ಸೇರಿದಂತೆ ಬಾದಾಮಿ ಕ್ಷೇತ್ರದ ಜನರಿಗೆ ಈಗಾಗಲೇ 2 ಲಕ್ಷ 47 ಸಾವಿರ ಮಾಸ್ಕ್‌ ಉಚಿತವಾಗಿ ವಿತರಣೆ ಮಾಡಲಾಗಿದೆ. ಬಾದಾಮಿ, ಕೆರೂರ, ಗುಳೇದಗುಡ್ಡ ಹೊಬಳಿಯ ಪ್ರತಿಗ್ರಾಮಗಳ ಮನೆ ಮನೆಗೆ ಉಚಿತ ರೇಷನ್‌ ವಿತರಿಸಲಾಗುತ್ತಿದ್ದು, ಈಗಾಗಲೇ ಕ್ಷೇತ್ರದ ಹಳ್ಳಿಗಳಿಗೆ ಹಾಗೂ ಕೆರೂರು ಪಟ್ಟಣದ ಪ್ರತಿಯೊಂದು ಮನೆ ಮನೆಗೆ ಆಹಾರ ಪದಾರ್ಥ ವಿತರಣೆ ಮಾಡಲಾಗಿದೆ. ಇದಲ್ಲದೇ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಪ್ರತಿನಿತ್ಯ ಸಿದ್ದರಾಮಯ್ಯನವರ ಬಳಗದ ವತಿಯಿಂದ ಅಡುಗೆ ಮಾಡಿಸಿ, ಊಟ ನೀಡುವ ವ್ಯವಸ್ಥೆ ಮಾಡಲಾಗಿದೆ.

ಗುಳೇದಗುಡ್ಡದಲ್ಲಿ 7500 ದಿನಸಿ ಕಿಟ್‌ ವಿತರಣೆ:

ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಬಾದಾಮಿಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮಾಸ್ಕ್‌ಗಳನ್ನು ಹಾಗೂ ಕ್ಷೇತ್ರದ ಬಾದಾಮಿ, ಕೆರೂರು ಭಾಗದ 114 ಗ್ರಾಮಗಳ ಜನರಿಗೆ ದಿನಸಿ ವಸ್ತುಗಳನ್ನು ವಿತರಿಸಲಾಗಿದೆ. ಪಟ್ಟಣದ ಎಲ್ಲ 7500 ಕುಟುಂಬಗಳಿಗೆ ಎರಡು ಕೆಜಿ ಗೋಧಿ, ಎರಡು ಕೆ.ಜಿ.ಜೋಳ, ಒಂದು ಕೆ.ಜಿ ಸಕ್ಕರೆ, ಅರ್ಧ ಕೆ.ಜಿ ಹುರಳಿಕಾಳು, ಒಂದು ಸಾಬೂನು ಸೇರಿದ ಕಿಟ್‌ನ್ನು ಪಕ್ಷದ ಪುರಸಭೆ ಸದಸ್ಯರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳಿಗೆ ಹಸ್ತಾಂತರಿಸಿ ವಿತರಣೆ ಮಾಡಲಾಗಿದೆ.

ಪತ್ರಕರ್ತರಿಗೂ ವಿತರಣೆ:

ಪಟ್ಟಣದ ಪತ್ರಕರ್ತರಿಗೆ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ವತಿಯಿಂದ ಮಾಸ್ಕ್‌ ಹಾಗೂ ದಿನಿಸಿ ಕಿಟ್‌ ವಿತರಣೆ ಕೂಡಾ ಮಾಡಲಾಗಿದೆ. ಮಾಜಿ ಸಿ.ಎಂ. ಸಿದ್ದರಾಮಯ್ಯನವರ ನಿರ್ದೇಶನದಂತೆ ಸಿದ್ದರಾಮಯ್ಯನವರ ಅಭಿಮಾನಿ ಬಳದ ವತಿಯಿಂದ ಕ್ಷೇತ್ರದ ಜನರಿಗೆ ಆಹಾರ, ದಿನಸಿಗಳನ್ನು ನೀಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಹೊಳಬಸು ಶೆಟ್ಟರ ಹೇಳುತ್ತಾರೆ.

ಕಲಾವಿದರಿಗೆ ರೇಷನ್‌ ವಿತರಣೆ:

ನಾಟಕದಲ್ಲಿ ಅಭಿನಯಿಸುವುದನ್ನೇ ವೃತ್ತಿಯಾಗಿ ಮಾಡಿಕೊಂಡಿರುವ ಹಂಸನೂರು ಗ್ರಾಮ್ಕಕೆ ಹೊಳಬಸು ಶೆಟ್ಟರ ನೇತೃತ್ವದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ತೆರಳಿ, ಕೆಲಸವಿಲ್ಲದೆ ಸಂಕಷ್ಟಕ್ಕೀಡಾದ ಗ್ರಾಮದ ಬಡ ಕಲಾವಿದರ ಪ್ರತಿಕುಟುಂಬಕ್ಕೆ ಅಕ್ಕಿ, ರವೆ, ಅವಲಕ್ಕಿ,ಎಣ್ಣೆ, ಬೆಲ್ಲ ವಿತರಿಸಿದರು.

ಬಾದಾಮಿ ಕ್ಷೇತ್ರದಲ್ಲಿ ಬಡವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಡಿತರ ವಿತರಣೆ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಾದಾಮಿ ಕ್ಷೇತ್ರದಲ್ಲಿ ಜನರಿಗೆ ಮಾಸ್ಕ್‌ ಹಾಗೂ ದಿನಸಿ ವಸ್ತುಗಳ ಕಿಟ್‌ ವಿತರಣೆಯನ್ನು ನಮ್ಮ ಅಭಿಮಾನಿ ಬಳಗ ಮಾಡುತ್ತಿದೆ. ಸಾರ್ವಜನಿಕರು ಈ ಸಂಕಷ್ಟದ ಸಮಯದಲ್ಲಿ ಕೊರೋನಾ ಬಗ್ಗೆ ಎಚ್ಚರಿಸಬೇಕು, ಲಾಕ್‌ಡೌನ್‌ ನಿಯಮವನ್ನು ಪಾಲಿಸಬೇಕು ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಕ್ಷೇತ್ರದ ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರ ಎಲ್ಲ ಜನರಿಗೆ ಅಗತ್ಯ ವಸ್ತುಗಳಾದ ಜೋಳ, ಗೋಧಿ, ಹುರಳಿ, ಸಕ್ಕರೆ ಹಾಗೂ ಸಾಬೂನು ಇರುವ ಸುಮಾರು 22 ಸಾವಿರ ಕಿಟ್‌ ವಿತರಿಸಲಾಗಿದೆ. ಅಲ್ಲದೆ ಗೋವಾ ರಾಜ್ಯದಲ್ಲಿ ಸಿಲುಕಿರುವ ಬಾದಾಮಿ ಕ್ಷೇತ್ರದ 1000 ಜನರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲಾಗಿದೆ. ಕ್ಷೇತ್ರದ 114 ಗ್ರಾಮಗಳಲ್ಲಿ 400 ಕಿಂಟ್ವಲ್‌ ಆಹಾರ ತಯಾರು ಮಾಡಿ ವಿತರಿಸಲಾಗಿದೆ. ಕ್ಷೇತ್ರದಲ್ಲಿ 2 ಲಕ್ಷ 46 ಸಾವಿರ ಮಾಸ್ಕ್‌ ವಿತರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಜನರು ಹಸಿವಿನಿಂದ ಬಳಲಬಾರದು ಎಂಬು ಶ್ರೀ ಸಿದ್ದರಾಮಯ್ಯನವರ ಮುಖ್ಯ ಆಶಯವಾಗಿದ್ದು, ಅವರ ಅಭಿಮಾನಿಗಳಾದ ನಾವು ಸಿದ್ದರಾಮಯ್ಯನವರ ನಿರ್ದೇಶನದ ಮೇರೆಗೆ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದು ಗುಳೇದಗುಡ್ಡದ ಕಾಂಗ್ರೆಸ್‌ ಪಕ್ಷದ ಮುಖಂಡ ಹೊಳಬಸು ಶೆಟ್ಟರ ಅವರು ತಿಳಿಸಿದ್ದಾರೆ. 

ನೊಂದವರ ಕಣ್ಣೀರು ಒರೆಸಿದರು

ಕೊರೋನಾ ಸಮಯದಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಬಾದಾಮಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯ ಮಾತ್ರ ಅನನ್ಯ. ಬಾದಾಮಿ ಮತಕ್ಷೇತ್ರದ ಜನರಿಗೆ ಒಟ್ಟು 2.46 ಲಕ್ಷ ಮಾಸ್ಕ್‌ ವಿತರಣೆ, ಬಾದಾಮಿ, ಗುಳೇದಗುಡ್ಡದ ಜನರಿಗೆ ಜೋಳ, ಗೋಧಿ, ಸಕ್ಕರೆ, ಹುರಳಿ, ಸಾಬೂನ ಹೊಂದಿದ 17000 ಕಿಟ್‌ ವಿತರಣೆ, ಕೆರೂರು ಪಟ್ಟಣದ ಜನರಿಗೆ ಗೋಧಿ, ಅಕ್ಕಿ, ಎಣ್ಣೆ, ಸಕ್ಕರೆ, ಬೇಳೆ ಹೊಂದಿದ ಒಟ್ಟು 6000 ಆಹಾರ ದಿನಸಿ ಕಿಟ್‌ ವಿತರಣೆ, ಕ್ಷೇತ್ರದ 114 ಹಳ್ಳಿಗಳಿಗೆ 400 ಕ್ವಿಂಟಲ್‌ ಪಲಾವ್‌ ಹಂಚಿಕೆ, ಲಾಕ್‌ಡೌನ್‌ನಿಂದಾಗಿ ಗೋವಾ ರಾಜ್ಯದಲ್ಲಿ ಸಿಲುಕಿರುವ ಬಾದಾಮಿ ಮತಕ್ಷೇತ್ರದ ಜನರಿಗೆ 1000 ದಿನಸಿ ಕಿಟ್‌ಗಳನ್ನು ಹಾಗೂ ತರಕಾರಿ ಕಿಟ್‌ನ್ನು ಕಳುಹಿಸಲಾಗಿದೆ. 

ಹಂಸನೂರು ಕಲಾವಿದರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆ, ಬಾದಾಮಿ ಹಾಗೂ ಗುಳೇದಗುಡ್ಡದಲ್ಲಿನ ಸರಕಾರಿ ಆಸ್ಪತ್ರೆ, ಪೊಲೀಸ್‌ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿ, ಕಾರ್ಮಿಕರಿಗೆ ಎನ್‌-95 ಮಾಸ್ಕ್‌ ವಿತರಣೆ, ಗುಳೇದಗುಡ್ಡದ ಪತ್ರಿಕಾ ವಿತರಕರಿಗೆ ದಿನಸಿ ಕಿಟ್‌ ವಿತರಣೆ, ಗುಳೇದಗುಡ್ದ , ಬಾದಾಮಿ ಪುರಸಭೆ ಪೌರಕಾರ್ಮಿಕರಿಗೆ ದಿನಸಿ ಕಿಟ್‌ ವಿತರಣೆ, ಮಾಧ್ಯಮ ಪ್ರತಿನಿಧಿಗಳಿಗೆ ದಿನಸಿ ಕಿಟ್‌ ಹಾಗೂ ಮಾಸ್ಕ್‌ ವಿತರಣೆ, ಬಾದಾಮಿಯಲ್ಲಿನ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಿಗೆ ದಿನಸಿ ಕಿಟ್‌ ವಿತರಣೆ, ಮಾಸ್ಕ್‌ ಹಾಗೂ ದಿನಸಿ ಕಿಟ್‌ ತಯಾರಿಸಿದ ಸ್ವಯಂ ಸೇವಕರಿಗೆ ಶಾಲುಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನ, ಗುಳೇದಗುಡ್ಡದಲ್ಲಿ ಕೊರೊನಾ ವಾರಿಯ​ರ್‍ಸ್ಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿದೆ. ಈ ರೀತಿಯಾಗಿ ಸಿದ್ದರಾಮಯ್ಯನವರು ತಮ್ಮ ಅಭಿಮಾನಿ ಬಳಗದ ಮುಖಾಂತರ ನೊಂದವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.