ಕೊಪ್ಪಳ(ಜೂ.04): ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದು, ಒಬ್ಬರು ಸಂವಿಧಾನಿಕವಾಗಿ ರುಜು ಮಾಡುತ್ತಾರೆ, ಮತ್ತೊಬ್ಬರು ಅಸಂವಿಧಾ​ನಿಕವಾಗಿ ಆಡಳಿತ ಮಾಡುತ್ತಾರೆ. ಭ್ರಷ್ಟಾಚಾರ ಮಿತಿಮೀರಿದೆ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಸಂವಿಧಾನಿಕವಾಗಿ ಓರ್ವ ಸಿಎಂ ಅವರು ಆಡಳಿತ ಮಾಡುತ್ತಿದ್ದರೆ ಅಸಂವಿಧಾನಿಕವಾಗಿ ಮತ್ತೊಬ್ಬರು ಆಡಳಿತ ಮಾಡುತ್ತಿದ್ದಾರೆ ಎಂದರು. ಮತ್ತೊಬ್ಬರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರ.. ವಿಜಯೇಂದ್ರ.. ವಿಜಯೇಂದ್ರ ಎಂದು ಮೂರು ಬಾರಿ ಒತ್ತಿ ಒತ್ತಿ ಹೇಳಿದರು. ಒಮ್ಮೆ ಹೇಳಿ ಸಾಕಾ ಎಂದು ಮತ್ತೊಮ್ಮೆ ಹೇಳಿದರಲ್ಲದೆ ಎಷ್ಟು ಬಾರಿ ಬೇಕಾದರೂ ಹೇಳುತ್ತೇನೆ ಎಂದು ಮತ್ತೊಮ್ಮೆ ವಿಜಯೇಂದ್ರ... ವಿರಾಮ ನೀಡಿ, ಸಾಕಾ ಎಂದು ಮಾತು ಮುಂದುವರಿಸಿದರು.

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಇದರಿಂದ ಸ್ವತಃ ಬಿಜೆಪಿ ಶಾಸಕರೇ ಬಂಡಾಯ ಎದ್ದಿದ್ದಾರೆ. ವಿಜಯಪುರದ ಬಸನಗೌಡ ಪಾಟೀಲ ಯತ್ನಾಳ, ಯಡಿಯೂರಪ್ಪ ನಮ್ಮ ನಾಯಕ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಹೆಸರು ಅದೇನು ಇದೆಯಲ್ಲಾ? ಚಡ್ಡಾನೋ? ನಡ್ಡಾನೋ? ಎಂದರು) ನಮ್ಮ ನಾಯಕರು ಎಂದಿದ್ದಾರೆ. ಬಿಜೆಪಿಯಲ್ಲಿ ಬಂಡಾಯ ಇರುವುದು ದಿಟ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೌಕರರ ಸಂಬಳ ಕೊಡಲು ಆಗುತ್ತಿಲ್ಲ. ಅಷ್ಟು ದಿವಾಳಿಯಾಗಿ ಹೋಗಿವೆ. ಶಾಸಕರ ಅನುದಾನ ವಾಪಸ್‌ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಕೊರೋನಾ ಬಂದ ಮೇಲೆ ಅಲ್ಲ, ಅದಕ್ಕೂ ಮೊದಲೇ ಆರ್ಥಿಕ ಸಂಕಷ್ಟಎದುರಾಗಿದೆ. ಯುಪಿಎ ಸರ್ಕಾರ ಇದ್ದಾಗ 6.2 ಇದ್ದ ಜಿಡಿಪಿ ಎನ್‌ಡಿಎ ಸರ್ಕಾರದಲ್ಲಿ 4.2ಕ್ಕೆ ಇಳಿದಿತ್ತು. ಈಗ ಕೊರೋನಾ ಸಮಸ್ಯೆಯಿಂದಾಗಿ ಅದು ಋುಣಾತ್ಮಕ ಬೆಳವಣಿಗೆಯನ್ನು ಕಾಣುತ್ತಿರುವುದನ್ನು ನೋಡಿದರೆ ಅಧೋಗತಿಗೆ ಹೋಗಿದೆ ಎನಿಸುತ್ತದೆ. ರಾಜ್ಯ ಸರ್ಕಾರದ ಪರಿಸ್ಥಿತಿಯೂ ಭಿನ್ನವಾಗಿಲ್ಲ ಎಂದರು.

ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಣಕಾಸು ಸ್ಥಿತಿಯನ್ನು ಹಾಳು ಮಾಡಿದ್ದಾರೆ, ಅಧೋಗತಿಗೆ ಒಯ್ಯದಿದ್ದಾರೆ ಎಂದು ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನಾನು ಅನೇಕ ಬಾರಿ ಬಜೆಟ್‌ ಮಂಡನೆ ಮಾಡಿದ್ದೇನೆ, ಇಂಥ ಸ್ಥಿತಿ ಇರಲಿಲ್ಲ. ದೇಶದಲ್ಲಿಯೇ ಅತ್ಯುತ್ತಮ ಬಜೆಟ್‌ ಮಂಡನೆ ಮಾಡಲಾಗಿದೆ ಮತ್ತು ರಾಜ್ಯದ ಹಣಕಾಸು ಸ್ಥಿತಿಯೂ ಉತ್ತಮವಾಗಿತ್ತು. ಈ ಕುರಿತು ಸಚಿವ ಸೋಮಣ್ಣ ಅವರೇನು ಮಾತನಾಡುತ್ತಾರೆ? ಅವರಿಗೇನು ಜ್ಞಾನ ಇದೆಯಂತೆ ಮಾತನಾಡುವುದಕ್ಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ವಸತಿ ಸಚಿವರಾಗಿ ಎಷ್ಟು ಮನೆ ಕೊಟ್ಟಿದ್ದಾರೆ ಅವರು ಎಂದು ಪ್ರಶ್ನೆ ಮಾಡಿದರು.

ಒಳ್ಳೆ ಬಾಂಧವ್ಯವಿದೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ನನ್ನ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ನಾವು ಚೆನ್ನಾಗಿಯೇ ಇದ್ದು, ಯಾವುದೇ ವೈಮನಸ್ಸು ಇರುವ ಪ್ರಶ್ನೆಯೇ ಇಲ್ಲ. ನಮ್ಮ ನಡುವೆ ಯಾವುದೇ ಸಮರವೂ ನಡೆದಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನೆರಡು ತಿಂಗಳ ಶಾಲೆ ಪ್ರಾರಂಭ ಬೇಡ

ರಾಜ್ಯಾದ್ಯಂತ ಕೊರೋನಾ ಹಾವಳಿ ಇನ್ನು ಹೆಚ್ಚುತ್ತಲೇ ಇರುವುದರಿಂದ ಇನ್ನೆರಡು ತಿಂಗಳ ಕಾಲ ಶಾಲೆಯನ್ನು ಪ್ರಾರಂಭಿಸುವುದು ಸೂಕ್ತವಲ್ಲ. ಇನ್ನೆರಡು ತಿಂಗಳ ಆದ ಮೇಲೆಯೂ ಅಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಶುರು ಮಾಡುವುದು ಒಳಿತು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಶಾಲೆಯನ್ನು ಪ್ರಾರಂಭಿಸುವ ತಯಾರಿಯ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಜುಲೈನಲ್ಲಿ ಶಾಲೆಯನ್ನು ಪ್ರಾರಂಭಿಸುವ ಕುರಿತು ಪ್ರಸ್ತಾಪ ಮಾಡಿದೆ. ಆದರೆ, ನನ್ನ ಪ್ರಕಾರ ಇನ್ನೆರಡು ತಿಂಗಳು (ಜೂನ್‌, ಜುಲೈ) ಕಾಲ ಪ್ರಾರಂಭ ಮಾಡುವುದು ಸದ್ಯದ ಸ್ಥಿತಿಯಲ್ಲಿ ಸರಿಯಲ್ಲ ಎಂದರು.

ಹಾಗಂತ ಶಾಲೆಯನ್ನು ಪ್ರಾರಂಭಿಸದೆ ಇರಲು ಆಗುವುದಿಲ್ಲ. ಸದ್ಯಕ್ಕೆ ಎರಡು ತಿಂಗಳ ಕಾಲ ಮುಂದೂಡಿ, ಮುಂದಿನ ದಿನಗಳಲ್ಲಿ ಕೊರೋನಾ ಹಾವಳಿ ತಗ್ಗಿದರೆ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡು ಶಾಲೆಯನ್ನು ಪ್ರಾರಂಭಿಸಬೇಕು. ಮಾಸ್ಕ್‌ನ್ನು ಸರ್ಕಾರವೇ ವಿತರಣೆ ಮಾಡಬೇಕು, ಸ್ಯಾನಿಟೈಸರ್‌ ಬಳಕೆ, ಶಾಲೆಯಲ್ಲಿ ಡೆಸ್ಕ್‌ಗೆ ಎರಡೇ ಮಕ್ಕಳನ್ನು ಕೂಡಿಸುವ ವ್ಯವಸ್ಥೆ ಮಾಡಬೇಕು. ಆದರೂ ಇದ್ಯಾವುದು ಸದ್ಯದ ಸ್ಥಿತಿಯಲ್ಲಿ ಅಲ್ಲ, ಇನ್ನೆರಡು ತಿಂಗಳ ಕಳೆದ ಮೇಲೆ ಪರಿಸ್ಥಿತಿಯನ್ನು ನೋಡಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಹಾಗೆ ಹೇಳಿಲ್ಲ...

ಬಿಜೆಪಿ ಕೆಲವು ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದೇನೆಯೇ ಹೊರತು ನಾನು ಜನತಾ ಪರಿವಾರ (ಈಗ ಬಿಜೆಪಿಯಲ್ಲಿರುವ) ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿರುವಂತೆ ನಾನು ಹೇಳಿಲ್ಲ, ನಾನು ಹೇಳಿರುವುದು ಬಿಜೆಪಿಯ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದೇನೆ. ಈಗಲೂ ನನಗೂ ಬಿಜೆಪಿಯಲ್ಲಿನ ಕೆಲವು ಶಾಸಕರು ಸಂಪರ್ಕದಲ್ಲಿದ್ದು, ಅಲ್ಲಿಯ ಅಸಮಾಧಾನವನ್ನು ತೋಡಿಕೊಂಡಿದ್ದಾರೆ ಎಂದರು.