ಬೆಂಗಳೂರು(ಏ.11): ಸೀಲ್‌ಡೌನ್‌ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ. ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು ಎಂದು ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.  

ಇಂದು(ಶನಿವಾರ) ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು,  ಸೀಲ್‌ಡೌನ್‌ ಭೀತಿ ಜನರನ್ನು ಸಮೂಹಸನ್ನಿಗೆ ದೂಡಿರುವಾಗಲೇ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಹಾಗೇನಾದರೂ ದಿನಸಿ ಅಂಗಡಿಗಳು, ಔಷಧಾಲಯಗಳು ಭೀತಿಯಿಂದ ಮುಚ್ಚಿದರೆ, ಜನರಿಗೆ ಆಹಾರ, ಔಷಧಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ. 

ಲಾಕ್‌ಡೌನ್‌ಗಿಂತ ಸೀಲ್‌ಡೌನ್‌ ಫುಲ್‌ ಸ್ಟ್ರಿಕ್ಟ್‌: ಜನ ಹೊರಗಡೆ ಬರೋದೆ ಕಷ್ಟ ಕಷ್ಟ!

ಸೀಲ್‌ಡೌನ್‌ ಮಾಡಲು ಸರ್ಕಾರ ನಿರ್ಧರಿಸಿದೆಯೇ? ಮಾಡುವುದಿದ್ದರೆ ಯಾವ್ಯಾವ ಜಿಲ್ಲೆಗಳಿಗೆ ಇದು ಅನ್ವಯ? ಸೀಲ್‌ಡೌನ್‌ ಅವಧಿಯಲ್ಲಿ ಏನೆಲ್ಲ ಲಭ್ಯ, ಏನು ಲಭ್ಯವಿರದು ಎಂಬುದರ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿಗಳು ಜನರ ದಿಕ್ಕು ತಪ್ಪಿಸಲಿವೆ ಎಂದು ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.