ಅಥಣಿ(ನ.30): ನನ್ನ ಬಳಿ ಈ ಕ್ಷಣದವರೆಗೆ 9 ತಾರೀಖಿನ ನಂತರದ ರಾಜಕೀಯ ಬೆಳವಣಿಗೆ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರ ಹೇಳಿಕೆಗಳನ್ನ ಗಮನಿಸಿದ್ದೇನೆ. ಯಾವ ನಾಯಕರೂ ನನ್ನ ಸಂಪರ್ಕಕಕ್ಕೆ ಬಂದಿಲ್ಲ, ನಾನು  ಮೊದಲೇ ಮಧ್ಯಂತರ ಚುನಾವಣೆಗಿಂತ ಜನರ ನೋವಿಗೆ ಸ್ಪಂದಿಸುವ ಮಾತು ಹೇಳಿದ್ದೇನೆ. ಅದು ಈಗ ಈ ನಾಯಕರ ಗಮನಕ್ಕೆ ಬಂದಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. 

ಶನಿವಾರ ಅಥಣಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ನಮ್ಮದೇ ಸರ್ಕಾರ ಬರುತ್ತೆ ಅಂತಾ ಸಿದ್ದರಾಮಯ್ಯ ಕೂಡ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಜನಸ್ಪಂದನೆ  ನೋಡಿ ಅವರು ಸರ್ಕಾರ ಪತನ ಆಗೋದಿಲ್ಲ ಮಧ್ಯಂತರ ಚುನಾವಣೆ ನಡೆಯೋದಿಲ್ಲ ಅಂತಾ ಹೇಳಿರಬಹುದು. ರೈತರ ಬದುಕು ಕಟ್ಟಿ ಕೊಡಲು ನಮ್ಮ ನಾಯಕರಿಗೆ ಮನವಿ ಮಾಡುವೆ. ನಾವೆಲ್ಲ ಈಗ ನಮ್ಮ ಆಸೆ, ಆಕಾಂಕ್ಷಿಗಳನ್ನು ಬಿಟ್ಟು ವಿಚಾರ ಮಾಡಬೇಕಿದೆ ಎಂದು ಹೇಳಿದ್ದಾರೆ. 
ಜೆಡಿಎಸ್ ಅಭ್ಯರ್ಥಿ ನಾನು ಆಯ್ಕೆಯಲ್ಲಿ ಎಡವಿಲ್ಲ, ಹಿರೆಕೆರೂರಿನಲ್ಲಿ ಶ್ರೀಗಳೇ ಮುಂದೆ ಬಂದು ಟಿಕೆಟ್ ಕೇಳಿದ್ದರು. ಆದರೆ ಆ ಮೇಲೆ ಅವರಿಗೆ ಒತ್ತಡಗಳು ಬಂದವು, ಅಥಣಿಯಲ್ಲಿಯೂ ಅಭ್ಯರ್ಥಿಯೇ ಮುಂದೆ ಬಂದಿದ್ದರು ಆದರೆ ಲಕ್ಷ್ಮಣ ಸವದಿ ಒತ್ತಡ ಹಾಕಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಫಲಿತಾಂಶ ಬಳಿಕ ಯಾರು ಜನರ ಬದುಕು ಕಟ್ಟಿಕೊಡಲು ತಯಾರಾಗಿದ್ದಾರೆ ನೋಡೋಣ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಿನ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಯಾವ ಸನ್ನಿವೇಶದಲ್ಲಿ ಏನು ಆಗುತ್ತದೆಯೋ ಹೇಳಲಾಗದು. ಪಕ್ಷ ನಿಷ್ಠೆ ಈಗ ಉಳಿದಿಲ್ಲ, ಆಯಾ ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. 

ರಮೇಶ ಜಾರಕಿಹೊಳಿ ಕ್ಷೇತ್ರಕ್ಕೆ ಎಷ್ಟು ಕೊಟ್ಟಿದ್ದೇನೆ ಅಂತಾ ಕ್ಯಾಬಿನೆಟ್‌ನಲ್ಲೇ ಹೇಳಿದ್ದೇನೆ.ಅವರವರ ಕ್ಷೇತ್ರದ ಬೇಡಿಕೆಗನುಸಾರ ಅನುದಾನ ಕೊಟ್ಟಿದ್ದೇನೆ. ಯಾರಿಗೂ ನನ್ನ ಸರ್ಕಾರದಲ್ಲಿ ತಾರತಮ್ಯ ಮಾಡಿಲ್ಲ, ಮಹೇಶ ಕುಮಟಳ್ಳಿ ಕ್ಷೇತ್ರಕ್ಕೂ ಅನುದಾನ ಕೊಟ್ಟಿದ್ದೇನೆ. ಆದರೆ ಅವರು ರಮೇಶ ಜಾರಕಿಹೊಳಿಗೆ ಬದ್ಧತೆ ತೋರಿಸಲು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.