ಬೆಂಗಳೂರು(ಫೆ.26): ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನೀಡಿರುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ದೊರೆಸ್ವಾಮಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿರುವ ಯತ್ನಾಳ್‌ ಆಗಸಕ್ಕೆ ಉಗಿದು ತಮ್ಮ ಮುಖಕ್ಕೆ ಸಿಡಿಸಿಕೊಂಡಿರುವುದು ಎಂತಹ ಚೋದ್ಯ ಎಂದು ಟೀಕಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಒಡನಾಡಿಯಾಗಿದ್ದ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಅವಹೇಳನಕಾರಿ ಟೀಕೆ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಖಂಡನೀಯ ಎಂದು ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯನ್ನ ಪಾಕ್ ಏಜೆಂಟ್ ಎಂದ ಬಿಜೆಪಿ ಶಾಸಕ

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಅವರು ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದು, ಇದೀಗ ಸಿಎಎ ವಿರೋಧಿ ಹೋರಾಟದಲ್ಲಿಯೂ ಕಾಣಿಸಿಕೊಂಡಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಪಾಕಿಸ್ತಾನ್ ಜಿಂದಾಬಾದ್ ಎನ್ನುವರನ್ನು ಇನ್ಮಂದೆ ಜೈಲಿಗೆ ಕಳಿಸುವುದಿಲ್ಲ. ಗುಂಡೇಟು ನೀಡಿ ಕೊಲ್ಲಲಾಗುವುದು. ಇಂತಹ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ದೊರೆಸ್ವಾಮಿ ಅಂತಹ ಮುದುಕ ಪಾಕಿಸ್ತಾನ್ ಏಜೆಂಟ್ ಇದ್ದಂತೆ ಎಂದು ಹೇಳಿದ್ದರು.