ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗಿನ ನಡುವಿನ ವೇಳೆಯಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದ್ದಾರೆ.

 ತುಮಕೂರು : ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗಿನ ನಡುವಿನ ವೇಳೆಯಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಆಯೋಗ ನಿರ್ದೇಶನ ನೀಡಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಚುನಾವಣಾ ಪ್ರಚಾರಕ್ಕಾಗಿ ಧ್ವನಿವರ್ಧಕಗಳನ್ನು ಬಳಸಬಹುದಾಗಿದೆ. ಈ ನಿರ್ದೇಶನವನ್ನು ಉಲ್ಲಂಘಿಸಿ ನಿಗಧಿಪಡಿಸಿದ ಅವಧಿಗಿಂತ ಮೀರಿ ಬಳಸುವ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಕಾರ್ಯಕರ್ತರು ಚುನಾವಣಾ ಆಯೋಗವು ಅನುಮತಿಸಿರುವ ಅವಧಿಯಲ್ಲಿ ಬಳಸಬಹುದಾಗಿದ್ದು, ಆಯೋಗ ನೀಡಿರುವ ನಿರ್ಬಂಧವನ್ನು ಉಲ್ಲಂಘಿಸುವಂತಿಲ್ಲ. ಧ್ವನಿವರ್ಧಕಗಳನ್ನು ಬಳಸುವ ಅವಧಿಯು ವೇದಿಕೆ ಕಾರ್ಯಕ್ರಮವಲ್ಲದೆ ಟ್ರಕ್‌, ಟೆಂಪೋ, ಕಾರು, ಟ್ಯಾಕ್ಸಿ, ವ್ಯಾನ್‌, ಮೂರು ಚಕ್ರದ ಸ್ಕೂಟರ್‌, ಸೈಕಲ್‌ ರಿಕ್ಷಾ, ಮತ್ತಿತರ ವಾಹನಗಳಿಗೆ ಅಳವಡಿಸಿ ಬಳಸುವುದಕ್ಕೂ ಅನ್ವಯಿಸುತ್ತದೆ. ಈ ವಾಹನಗಳು ರಸ್ತೆ/ಬೀದಿ/ಕಾಲೋನಿ/ಮೊಹಲ್ಲಾ/ಹಳ್ಳಿ/ಪಟ್ಟಣ/ ನಗರ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಸಿ ಚುನಾವಣಾ ಪ್ರಚಾರ ಮಾಡುವುದರಿಂದ ಅಲ್ಲಿ ವಾಸಿಸುವ ಜನರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತದೆಯಲ್ಲದೆ ಧ್ವನಿವರ್ಧಕಗಳಿಂದಾಗುವ ಶಬ್ದಮಾಲಿನ್ಯದಿಂದ ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಅಧ್ಯಯನಕ್ಕೆ ತೀವ್ರ ತೊಂದರೆಯಾಗುವುದನ್ನು ಮನಗಂಡು ಆಯೋಗ ಈ ಸೂಚನೆಯನ್ನು ನೀಡಿದೆ. ಈ ಶಬ್ದಮಾಲಿನ್ಯದಿಂದ ಆಸ್ಪತ್ರೆ/ಸಂಸ್ಥೆಗಳಿಗೆ ತೊಂದರೆಯಾಗುವುದಲ್ಲದೆ ಮನೆಯಲ್ಲಿರುವ ವಯೋವೃದ್ಧರು/ಅಶಕ್ತರು/ರೋಗಿಗಳೂ ಸಹ ತೀವ್ರ ಅಸ್ವಸ್ಥತೆಗೊಳಗಾಗುವ ಸಾಧ್ಯತೆ ಇರುತ್ತದೆ.

ಚುನಾವಣಾ ಪ್ರಚಾರಕ್ಕಾಗಿ ಬಳಸುವ ಸೌಲಭ್ಯಗಳಲ್ಲಿ ಧ್ವನಿವರ್ಧಕಗಳೂ ಒಂದಾಗಿರುವುದರಿಂದ ಚುನಾವಣಾ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದಿಲ್ಲ. ಆದ ಕಾರಣ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ಚುನಾವಣಾ ಪ್ರಚಾರಕ್ಕಾಗಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಆದರೆ ಸಾರ್ವಜನಿಕ ಸಭೆ/ಸಮಾರಂಭಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಎಲ್ಲಾ ರಾಜಕೀಯ ಪಕ್ಷ/ ಅಭ್ಯರ್ಥಿಗಳು/ ಇತರೆ ವ್ಯಕ್ತಿಗಳು ಟ್ರಕ್‌, ಟೆಂಪೋ, ಕಾರು, ಟ್ಯಾಕ್ಸಿ, ವ್ಯಾನ್‌, ಮೂರು ಚಕ್ರದ ಸ್ಕೂಟರ್‌, ಸೈಕಲ್‌ ರಿಕ್ಷಾ ಸೇರಿದಂತೆ ಚಲಿಸುವ ವಾಹನಗಳ ಮೇಲೆ ಲೌಡ್‌ ಸ್ಪೀಕರ್‌ ಬಳಸಲು ಅನುಮತಿ ಇದೆ. ಆದರೆ ಧ್ವನಿವರ್ಧಕಗಳನ್ನು ಬಳಸುವ ಮುನ್ನ ವಾಹನದ ನೋಂದಣಿ ಸಂಖ್ಯೆಯನ್ನು ಚುನಾವಣಾಧಿಕಾರಿಗಳಿಗೆ ಒದಗಿಸಿ ಅನುಮತಿ ಪಡೆಯಬೇಕು. ಮತದಾನ ಮುಕ್ತಾಯಗೊಳ್ಳುವ 48 ಗಂಟೆ ಮುಂಚಿನ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಪ್ರಚಾರಕ್ಕಾಗಿ ಬಳಸುವಂತಿಲ್ಲ. ಆಯೋಗದ ನಿರ್ದೇಶನವನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ನಿರ್ದೇಶನಗಳ ಪಾಲನೆಯಲ್ಲಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.