ಭಟ್ಕಳ (ಫೆ.23):  ಕಾಡು ಕೋಣದ ಮಾಂಸವನ್ನು ಸಾಗಿಸುತ್ತಿದ್ದ ಕಾರೊಂದನ್ನು ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಬೆನ್ನಟ್ಟಿಹಿಡಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕಾರು ಚಾಲಕ ಪರಾರಿಯಾಗಿದ್ದು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಹೊನ್ನಾವರದಿಂದ ಕಪ್ಪು ಬಣ್ಣದ ಶವಾರ್ಲೆ ಕಾರಿನಲ್ಲಿ ಕಾಡುಕೋಣದ ಮಾಂಸವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಭಟ್ಕಳ ವಲಯ ಅರಣ್ಯಾಧಿಕಾರಿ ಸವಿತಾ ದೇವಡಿಗ ಹಾಗೂ ಸಿಬ್ಬಂದಿ ಶಿರಾಲಿ ಚೆಕ್‌ ಪೋಸ್ಟ್‌ನಲ್ಲಿ ಬ್ಯಾರಿಕೇಡ್‌ ಹಾಕಿ ಕಾಯುತ್ತಿದ್ದರು.

ನಾನ್‌ವೆಜ್‌ ಹೊಟೇಲ್‌ನಲ್ಲಿ ಲಿಕ್ಕರ್; ಬಾಡೂಟದ ಜೊತೆ ಭರ್ಜರಿ ಮದ್ಯ.! .

ಸುಳಿವು ಅರಿತ ಚಾಲಕ ಕಾರನ್ನು ಬ್ಯಾರಿಕೇಡ್‌ ಮೇಲೆ ಹಾರಿಸಿಕೊಂಡು ಪರಾರಿಯಾದ. ಈ ವೇಳೆ ಅರಣ್ಯ ಸಿಬ್ಬಂದಿಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಅಧಿಕಾರಿಗಳು ತಕ್ಷಣ ಕಾರನ್ನು ತಮ್ಮ ವಾಹನದಲ್ಲಿ ಬೆನ್ನಟ್ಟಿದ್ದಾರೆ. ಬಳಿಕ ಕಾರು ಚಾಲಕ ಒಳರಸ್ತೆಯಲ್ಲಿ ತಿರುಗಿ ಬದ್ರಿಯಾ ಕಾಲೋನಿ ಕಡೆಗೆ ಹೋಗಿದ್ದಾನೆ. ಕಾರನ್ನು ಮನೆಯೊಂದರ ಮುಂದೆ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.

ಅರಣ್ಯ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಸುಮಾರು 100 ಕೆ.ಜಿ. ಕಾಡುಕೋಣದ ಮಾಂಸ ಕಾರಲ್ಲಿ ಪತ್ತೆಯಾಗಿದೆ. ಕಾಡು ಕೋಣ ಐದು ವರ್ಷದ್ದು ಎಂದು ಅಂದಾಜಿಸಲಾಗಿದೆ. ಈ ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು ಅನಾಹುತ ಸಂಭವಿಸಿಲ್ಲ.