Asianet Suvarna News Asianet Suvarna News

ಉಡುಪಿಯ ವರ್ಲ್ಡ್ ನಂಬರ್ ವನ್ ಸೈಕ್ಲಿಂಗ್ ಬೀಚ್‌ಗೆ ವಿದೇಶಿಗರ ಮೆಚ್ಚುಗೆ

ನಾರ್ವೆ ದೇಶದಿಂದ ಬಂದ ಪ್ರವಾಸಿಯೊಬ್ಬ ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಟ್ಟು  ಕಡಲತೀರದಲ್ಲಿ ಸೈಕ್ಲಿಂಗ್ ಮಾಡಿ ರೋಮಾಂಚನಗೊಂಡಿದ್ದಾನೆ. ಈ ವಿಚಾರದಲ್ಲಿ ಆತ ಮಾಡಿರುವ ಟ್ವೀಟ್ ಸದ್ಯ ವೈರಲ್ ಆಗಿದ್ದು ಇಡೀ ಪ್ರಪಂಚವೇ ಇತ್ತ ಕಣ್ತೆರೆದು ನೋಡುವಂತಾಗಿದೆ.

Foreigners appreciate world top cycling Padukere Beach from Udupi gow
Author
First Published Sep 5, 2022, 4:26 PM IST

ವರದಿ; ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.5): ಹಿತ್ತಲ ಗಿಡ ಮದ್ದಲ್ಲ ಅಂತಾರೆ, ನಮ್ಮ ಸುತ್ತಮುತ್ತಲೇ ಇರುವ ಅದೆಷ್ಟೋ ಸುಂದರ ತಾಣಗಳು ನಮ್ಮ ಅರಿವಿಗೆ ಬರುವುದಿಲ್ಲ. ದೂರದ ನಾರ್ವೆ ದೇಶದಿಂದ ಬಂದ ಪ್ರವಾಸಿಯೊಬ್ಬ ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಟ್ಟು  ಕಡಲತೀರದಲ್ಲಿ ಸೈಕ್ಲಿಂಗ್ ಮಾಡಿ ರೋಮಾಂಚನಗೊಂಡಿದ್ದಾನೆ. ಈ ವಿಚಾರದಲ್ಲಿ ಆತ ಮಾಡಿರುವ ಟ್ವೀಟ್ ಸದ್ಯ ವೈರಲ್ ಆಗಿದ್ದು ಇಡೀ ಪ್ರಪಂಚವೇ ಇತ್ತ ಕಣ್ತೆರೆದು ನೋಡುವಂತಾಗಿದೆ. ಪ್ರಕೃತಿ ನಮ್ಮ ಕರ್ನಾಟಕ ಕರಾವಳಿಗೆ ಏನು ಕೊಟ್ಟಿಲ್ಲ ಹೇಳಿ!? 350 km ಗೂ ಅಧಿಕ ಇರುವ ಕರ್ನಾಟಕ ಕರಾವಳಿ ಈ ಪ್ರಪಂಚದ ಅದ್ಭುತಗಳ ಪಟ್ಟಿಗೆ ಸೇರುತ್ತೆ. ಉಡುಪಿ ಜಿಲ್ಲೆಯಲ್ಲಿ ಇಂತಹ ಅನೇಕ ಅಪರಿಚಿತ ತಾಣಗಳಿವೆ. ಇತ್ತೀಚಿಗೆ ನಾರ್ವೆ ದೇಶದಿಂದ ಬಂದಿದ್ದ ಪ್ರವಾಸಿಗ ಕಾಪು ತಾಲೂಕಿನ ಮಟ್ಟು- ಪಡುಕೆರೆ ಕಡಲ ತೀರದಲ್ಲಿ ಸೈಕ್ಲಿಂಗ್ ಮಾಡಿ ರೋಮಾಂಚನಗೊಂಡಿದ್ದಾನೆ. ಇದು ಪ್ರಪಂಚದಲ್ಲೇ ನಾನು ಕಂಡಿರುವ ಅತ್ಯಂತ ಉದ್ದದ ಮತ್ತು ಅದ್ಭುತವಾದ ಕಡಲ ತೀರದ ಸೈಕ್ಲಿಂಗ್ ತಾಣ ಎಂದು ಟ್ವಿಟರ್ ಮೂಲಕ ಬಣ್ಣಿಸಿದ್ದಾನೆ. ಈ ಟ್ವೀಟ್ ದೇಶದ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳು ಮಾತ್ರವಲ್ಲದೆ ಉತ್ತರ ಭಾರತದ ಅನೇಕ ಮಾಧ್ಯಮಗಳು ಈ ಬಗ್ಗೆ ಹಾಡಿ ಹೊಗಳಿವೆ. 

ಕಾಪು ತಾಲೂಕಿನ ಒಂದು ಮೂಲೆಯಲ್ಲಿ, ಕಡಲ ಬದಿಯಲ್ಲಿದ್ದ ಮಟ್ಟು ಬೀಚ್ ಈಗ ಮುನ್ನೆಲೆಗೆ ಬಂದಿದೆ. ಸುಮಾರು 16 ಕಿಲೋಮೀಟರ್ ನಷ್ಟು ನೇರ ರಸ್ತೆಯಲ್ಲಿ ಸಾಗಬಹುದಾದ ಈ ಮಾರ್ಗ, ಸೈಕ್ಲಿಂಗ್ ಮಾಡುವವರಿಗೆ ಒಂದು ಅಪೂರ್ವ ಅನುಭವ ನೀಡುತ್ತೆ. ಇಕ್ಕೆಲಗಳ ಸಂಚಾರ ಸೇರಿ ಸುಮಾರು 32 ಕಿಲೋಮೀಟರ್ ನಷ್ಟು ದೂರವನ್ನು ಕ್ರಮಿಸುವುದೇ ಒಂದು ರೋಮಾಂಚಕ ಅನುಭವ. ಎಡಬದಿಯಲ್ಲಿ ಅಬ್ಬರಿಸುವ ಕಡಲು, ಬಲಬದಿಯಲ್ಲಿ ಹರಿಯುವ ಪಾಪನಾಶಿನಿ ನದಿ , ನಡುವಲ್ಲಿ ಸಾಲು ಸಾಲು ತೆಂಗಿನ ತೋಟ, ಇವೆಲ್ಲದರ ನಡುವೆ ಅಗಲ ಕಿರಿದಾದ ಸುಂದರ ಡಾಮರು ರಸ್ತೆ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು ಎಂದು ಪ್ರವಾಸಿಗರಿಗೆ ಅನಿಸದೆ ಇರೋದಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರಾವಳಿ ತೀರದ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಖಚಿತ ಭರವಸೆಗಳನ್ನು ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ಮೂಲಭೂತ ಸೌಕರ್ಯ ಒದಗಿಸಲು ಹಸಿರು ನಿಶಾನೆ ತೋರಿದ್ದಾರೆ. ನಾರ್ವೆ ದೇಶದ ವಿದೇಶಿ ಪ್ರವಾಸಿಗನಿಗೆ ಕಂಡ ಕರ್ನಾಟಕ ಕರಾವಳಿಯ ಮಟ್ಟು ಬೀಚ್ (mattu beach) ನಮ್ಮನ್ನಾಳುವ ಸರ್ಕಾರಗಳಿಗೆ ಕಾಣದೆ ಇರುವುದು ಬೇಸರದ ಸಂಗತಿ. 

ಭಾರತದ ಈ ಸುಂದರ ಕರಾವಳಿ ಪ್ರದೇಶ ವಿಸಿಟ್ ಮಾಡಿದ್ದೀರಾ?

ಈ ಭಾಗದಲ್ಲಿ ವೀಕೆಂಡ್ ಬಂದರೆ ಸೈಕ್ಲಿಂಗ್ ನಡೆಸುವ ಅನೇಕ ಹವ್ಯಾಸಿಗಳಿದ್ದಾರೆ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ದೇಶ ಮಾತ್ರವಲ್ಲ ವಿದೇಶಗಳಿಂದಲೂ ಲಕ್ಷಾಂತರ ಜನ ಇಲ್ಲಿಗೆ ಭೇಟಿ ಕೊಡುವ ಸಾಧ್ಯತೆ ಇದೆ.

Udupi; ಸಮುದ್ರದಲ್ಲಿ ರಾಶಿ ರಾಶಿ ಹೊಳೆ ಮೀನುಗಳು, ರಾತ್ರಿ ಹಗಲೆನ್ನದೆ ಕಾಯೋ ಜನ

ಉಡುಪಿಯ (Udupi) ಮಟ್ಟು ಗ್ರಾಮ ಈ ಮೊದಲು ಮಟ್ಟು ಗುಳ್ಳಕ್ಕೆ ಪ್ರಸಿದ್ಧವಾಗಿತ್ತು. ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್ ಪಡೆದಿರುವ ಈ ಅಪರೂಪದ ಸ್ಥಳೀಯ ಬದನೆಯ ಮೂಲಕ ದೇಶದ ಗಮನ ಸೆಳೆದಿತ್ತು. ಇದೀಗ ಪ್ರಪಂಚದ ಅತ್ಯಂತ ಸುಂದರ ಮತ್ತು ಸುಧೀರ್ಘ ಸಂಚರಿಸಬಹುದಾದ ಸೈಕ್ಲಿಂಗ್ (cycling) ತಾಣವಾಗಿಯೂ ಮಟ್ಟು ಪಡುಕೆರೆ ಪ್ರದೇಶ ಲೋಕ ಪ್ರಸಿದ್ಧಿ ಪಡೆಯುತ್ತಿದೆ.

Follow Us:
Download App:
  • android
  • ios