ಚಿಕ್ಕಬಳ್ಳಾಪುರ(ಅ.03): ಸಾರ್ವಜನಿಕ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೆ? ಸಕಾಲದಲ್ಲಿ ನಿಮಗೆ ಪಡಿತರ ಸೇರುತ್ತಿದ್ದಿಯಾ? ಪಡಿತರ ಚೀಟಿಗೆ ಅರ್ಜಿ ಹಾಕಿದರೂ ನಿಮ್ಮ ಕುಟುಂಬಕ್ಕೆ ಪಡಿತರ ಸಿಗುತ್ತಿಲ್ಲವಾ? ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆಯೆ? ವಿತರಣೆ ಆಗುವ ಆಹಾರ ಪದಾರ್ಥಗಳಲ್ಲಿ ನೀವು ತೂಕ, ಗುಣಮಟ್ಟದಲ್ಲಿ ಮೋಸ ಹೋಗುತ್ತಿದ್ದೀರಾ? ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಸೌಲಭ್ಯದಡಿ ಅರ್ಜಿ ಹಾಕಿದರೂ ಪಿಂಚಣಿ ಬರುತ್ತಿಲ್ಲವಾ? ಬಂದರೆ ಪಿಂಚಣಿಯ ಪೂರ್ತಿ ಹಣ ನಿಮ್ಮ ಕೈ ಸೇರುತ್ತಿದೆಯೆ?

ಹೌದು, ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯದಡಿ ಮಾಸಿಕ ವಿವಿಧ ಪಿಂಚಣಿ ಯೋಜನೆಗಳ ಜೊತೆಗೆ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯ ಆಹಾರ ಆಯೋಗ ಫಲಾನುಭವಿಗಳಿಗೆ ಅಹವಾಲು ಸಲ್ಲಿಸಲು ವೇದಿಕೆ ಕಲ್ಪಿಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ಮಾದರಿಯಲ್ಲಿ ಆಹಾರ ಅದಾಲತ್‌ ನಡೆಸಲು ಆಯೋಗ ಮುಂದಾಗಿದ್ದು ಅ.5 ರಿಂದ ಅದಾಲತ್‌ಗೆ ಚಾಲನೆ ಸಿಗಲಿದೆ.

ಬಡವರಿಗೆ ನವೆಂಬರ್‌ವರೆಗೆ ಉಚಿತ ಪಡಿತರ ವಿತರಣೆ

ಇತ್ತೀಚಿನ ದಿನಗಳಲ್ಲಿ ರಾಜ್ಯದ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಅದರಲ್ಲೂ ಅನ್ನಭಾಗ್ಯ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಕೊಡದೇ ಕಡಿತ ಮಾಡುತ್ತಿರುವುದು, ಉಚಿತ ಅಕ್ಕಿಗೂ ನ್ಯಾಯ ಬೆಲೆ ಅಂಗಡಿ ಮಾಲಿಕರು ಹಣ ವಸೂಲಿ ಮಾಡುತ್ತಿರುವುದು, ತೂಕ, ಗುಣಮಟ್ಟದಲ್ಲಿ ಮೋಸ ಆಗುತ್ತಿರುವುದನ್ನು ರಾಜ್ಯದ ಆಹಾರ ಆಯೋಗ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲಿಯೆ ಪರಿಹಾರ ಒದಗಿಸಲು ಆಹಾರ ಆಯೋಗ ಮಹತ್ವಕಾಂಕ್ಷಿ ಅದಾಲತ್‌ಗೆ ಮುಂದಾಗಿದೆ.

ಆಯೋಗದ ಮುಂದೆ ಸಲ್ಲಿಕೆಯಾಗುವ ಯಾವುದೇ ದೂರನ್ನು ಬಗೆಹರಿಸುವವರೆಗೂ ಆಯೋಗ ಕೈ ಬಿಡುವುದಿಲ್ಲ. ಪ್ರತಿ ದೂರನ್ನು ವಿಚಾರಣಾ ಮಾದರಿಯಲ್ಲಿ ಕೈಗೆತ್ತಿಕೊಂಡು ಗ್ರಾಹಕರಿಗೆ ನ್ಯಾಯ ಒದಗಿಸಲು ರಾಜ್ಯ ಆಹಾರ ಆಯೋಗ ಸಿದ್ದತೆ ನಡೆಸಿಕೊಂಡಿದೆ. ವಿಶೇಷವಾಗಿ ಪಡಿತರ ಪೂರೈಕೆಯಾಗುವ ಹಾಸ್ಟಲ್‌, ಆಸ್ಪತ್ರೆ, ಮಕ್ಕಳ ಅಪೌಷ್ಠಿಕ ಕೇಂದ್ರಗಳಲ್ಲಿ ಅವ್ಯವಸ್ಥೆ, ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ಲೋಪದೋಷಗಳ ಬಗ್ಗೆಯು ಫಲಾನುಭವಿಗಳು ಆಯೋಗದ ಅದಾಲತ್‌ಗೆ ಅರ್ಜಿ ಅಥವ ಅಹವಾಲು ಸಲ್ಲಿಸಬಹುದಾಗಿದೆ.

ಪ್ರಾಯೋಗಿಕ ಜಾರಿ

ರಾಜ್ಯ ಆಹಾರ ಆಯೋಗವು ಪ್ರಾಯೋಗಿಕವಾಗಿ ಈ ಆಹಾರ ಅದಾಲತ್‌ನ್ನು ರಾಜ್ಯದಲ್ಲಿಯೆ ಮೊದಲ ಬಾರಿಗೆ ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಅದಾಲತ್‌ನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದೆಯೆಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಹೆಚ್‌.ವಿ.ಶಿವಶಂಕರ್‌, ಕನ್ನಡಪ್ರಭಕ್ಕೆ ತಿಳಿಸಿದರು. ರಾಜ್ಯದಲ್ಲಿ ಸಾರ್ವಜನಿಕ ಪಡಿತರ ವಿತರಣೆ, ಪಿಂಚಣಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಇದುವರೆಗೂ ಆಯೋಗಕ್ಕೆ 300 ಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ಸಮಸ್ಯೆಗಳನ್ನು ಸರಿಪಡಿಸಿ ಉತ್ತಮ ಆಹಾರ ಪಡಿತರ ವಿತರಣೆ ಆಗಬೇಕು ಎನ್ನುವುದೇ ಆಹಾರ ಅದಾಲತ್‌ ಉದ್ದೇಶ ಎಂದರು.