ಘಮ್ಮಿಡುವ ಕಾಫಿ ತೋಟದ ಹಾದಿಯಲ್ಲಿ.. ಮೊದಲ ಮಳೆಗೆ ಅರಳಿ ನಿಂತ ಹೂಗಳು!
ಮೊದಲ ಮಳೆ ಮಲೆನಾಡಿನ ತಂಪಿಗೆ ಕಾಫಿ ಹೂವಿನ ಕಂಪು ಬೆರೆತು ವಾತಾವರಣ ಮತ್ತಷ್ಟು ಆಹ್ಲಾದವಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಬಿದ್ದ ಮಳೆ ಹೂ ಅರಳಿಸಿ ಕಾಫಿ ತೋಟಗಳ ಕಳೆ-ವೈಭವ ಹೆಚ್ಚಿಸಿದೆ. ಹಾದಿ ಸಾಗಿದಲ್ಲೆಲ್ಲಾ ಮನವನ್ನು ಮುದಗೊಳಿಸುವ ಕಾಫಿ ಹೂವಿನ ಸುಗಂಧ ಯಾವುದೋ ಅತ್ತರಿನ ಲೋಕದಲ್ಲಿ ನಾವಿರುವಂತೆ ಭಾಸಗೊಳಿಸುತ್ತದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.28): ಮಲೆನಾಡಿನ ತಂಪಿಗೆ ಕಾಫಿ ಹೂವಿನ ಕಂಪು ಬೆರೆತು ವಾತಾವರಣ ಮತ್ತಷ್ಟು ಆಹ್ಲಾದವಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಬಿದ್ದ ಮಳೆ ಹೂ ಅರಳಿಸಿ ಕಾಫಿ ತೋಟಗಳ ಕಳೆ-ವೈಭವ ಹೆಚ್ಚಿಸಿದೆ. ಹಾದಿ ಸಾಗಿದಲ್ಲೆಲ್ಲಾ ಮನವನ್ನು ಮುದಗೊಳಿಸುವ ಕಾಫಿ ಹೂವಿನ ಸುಗಂಧ ಯಾವುದೋ ಅತ್ತರಿನ ಲೋಕದಲ್ಲಿ ನಾವಿರುವಂತೆ ಭಾಸಗೊಳಿಸುತ್ತದೆ.ತೋಟಗಳಲ್ಲಿ ಅರಳಿ ಘಮ್ಮಿಡುತ್ತಿರುವ ಹೂಗಳಿಂದ ಬೆಳೆಗಾರನೂ ದಿಲ್ಖುಷ್, ಜಿಲ್ಲೆಗೆ ಬರುವ ಪ್ರವಾಸಿಗರನ ಕಣ್ಣಿಗೆ ಆನಂದವೂ ಆನಂದ ಉಂಟಾಗಿದೆ.
ಮಳೆಯಿಂದ ಕಾಫಿ ತೋಟದಲ್ಲಿ ಅರಳಿ ನಿಂತಿರುವ ಹೂ
ಸಾಮಾನ್ಯವಾಗಿ ಕಾಫಿ ತೋಟ ಹೆಚ್ಚಾಗಿರುವ ಮಲೆನಾಡಿನ ಭಾಗದಲ್ಲಿ ಬೆಳೆಗಾರರು ಬೇಸಿಗೆ ಆರಂಭಕ್ಕೂ ಮುನ್ನವೇ ಕಾಫಿ ಕೊಯ್ಲನ್ನು ಮುಗಿಸಿಕೊಂಡು. ಮುಂದಿನ ಬೆಳೆಗೆ ಪೂರಕವಾದ ಹದಗಾರಿಕೆ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಬೆಳೆಗೆ ಅಗತ್ಯವಿರುವ ನೀರನ್ನು ಸ್ಪ್ರಿಂಕ್ಲರ್ ಮೂಲಕ ಪೂರೈಸುವಂತದ್ದು ಈ ಹಂತದ ಸಾಮಾನ್ಯ ಪ್ರಕ್ರಿಯೆ. ಇದಕ್ಕೆ ಲಕ್ಷಾಂತರ ಹಣವನ್ನಾತ ಖರ್ಚು ಮಾಡಬೇಕಾಗುತ್ತದೆ.ಇದೇ ವೇಳೆ ಮಳೆ ಸುರಿಯಿತೆಂದರೆ ಬೆಳೆಗಾರನಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಒಂದೆರೆಡು ಬಾರಿ ಮಳೆ ಹೊಯ್ತೆಂದರೆ ಬೆಳೆಯ ಇಳುವರಿ ಹಾಗೂ ಲಾಭದ ಲೆಕ್ಕಾಚಾರ ಆರಂಭ ವಾಗುತ್ತದೆ. ಬಿರುಬೇಸಿಗೆಯಲ್ಲೂ ಸುರಿದ ಮಳೆ ಬೆಳೆಗಾರನ ಅದೃಷ್ಟ ಖುಲಾಯಿಸಿದೆ ಎಂದರೆ ತಪ್ಪಾಗದು. .ಕಳೆದ ವಾರ ಸುರಿದ ಮಳೆಗೆ ಕಾಫಿ ತೋಟಗಳಲ್ಲಿ ಹೂ ಅರಳಿ ನಿಂತಿದೆ. ಇದು ಮುಂದಿನ ವರ್ಷದ ಬೆಳೆಯನ್ನು ನಿರ್ಧಾರ ಮಾಡುತ್ತೆ, ತೋಟಗಳಲ್ಲಿ ಹೂ ಅರಳಿದ ಸಮಯದಲ್ಲಿ ಎರಡು ,ಮೂರು ಸಲ ಮಳೆಯಾದ್ರೆ ಮುಂದಿನ ವರ್ಷ ಕಾಫಿ ಫಸಲು ಬಂಪರ್ ಆಗುತ್ತೆ ಎನ್ನುವು ಲೆಕ್ಕಾಚಾರ ಕಾಫಿ ಬೆಳೆಗಾರರಲ್ಲಿ ಇದೆ.
ದತ್ತಪೀಠದಲ್ಲಿ 100 ಅಡಿ ಕೆಳಕ್ಕೆ ಉರುಳಿಬಿದ್ದ ಪ್ರವಾಸಿ ಬಸ್!
ಮೊಗ್ಗಿನ ಜಡೆಯಂತೆ ಅರಳಿನಿಂತಿರುವ ಕಾಫಿ ಹೂ :
ಕಾಫಿ ತೋಟಗಳನ್ನು ಬಳಸಿಕೊಂಡು ಸಾಗುವ ಮಲೆನಾಡಿನ ರಸ್ತೆಗಳ ತುಂಬೆಲ್ಲಾ ಮೊಗ್ಗಿನ ಜಡೆಯಂತೆ ಕಾಫಿ ಹೂಗಳು ಗಿಡದ ತುಂಬೆಲ್ಲಾ ಬಳುಕುತ್ತಿವೆ. ಕಿಮೀಗಟ್ಟಲೇ ಪಸರಿಸಿರುವ ಇದರ ಸುವಾಸನೆ ಈ ಮಾರ್ಗದಲ್ಲಿ ಸಾಗುವ ಎಂಥವರನ್ನೂ ಒಂದು ಕ್ಷಣ ಕುತೂಹಲದಿಂದ ನಿಂತು ಇದರ ಆನಂದವನ್ನು ಆಸ್ವಾದಿಸುವಂತೆ ಮಾಡುತ್ತದೆ. ಉತ್ತಮ ಫಸಲಿನ ಭವಿಷ್ಯವನ್ನು ಹೇಳುವ ಈ ಕಾಫಿ ಹೂಗಳ ಅರಳುವಿಕೆ ಬೆಳೆಗಾರನನ್ನು ಹಿಗ್ಗುವಂತೆ ಮಾಡಿದರೆ, ನೋಡುಗರಿಗೆ ಹಾಗೂ ಪ್ರಕೃತಿಪ್ರಿಯರಿಗೆ ವಿಶೇಷ ಅನುಭವ ದೊರಕಿಸಿಕೊಡುತ್ತದೆ. ಗಿಡಗಳ ತುಂಬೆಲ್ಲಾ ಮಲ್ಲಿಗೆಯಂತೆ ಅರಳಿ ನಿಂತಿರೋ ಕಾಫಿಯ ಹೂವುಗಳನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ, ಜೊತೆಗೆ ಝೇಂಕರಿಸುತ್ತಾ ಸುಮಗಳಿಂದ ಮಕರಂದ ಹೀರ್ತಿರೋ ದುಂಬಿಗಳ ನಿನಾದ ಸದ್ದು ಪ್ರವಾಸಿಗರ ಜೊತೆಗೆ ಸ್ಥಳೀಯರನ್ನ ಅರೆಕ್ಷಣ ಮಂತ್ರಮುಗ್ದರನ್ನಾಗಸುತ್ತೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಹಣ ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲಿ: ಸಿಟಿ ರವಿ
ಮಲೆನಾಡ ತಣ್ಣನೆಯ ವಾತಾವರಣದೊಂದಿಗೆ ಶ್ವೇತ ಪುಷ್ಪಗಳ ಚೆಲುವು, ಒಲವಿನ ಚಿತ್ತಾರವನ್ನೇ ಬಿಡಿಸಿದಂತಿದ್ದು ಕಾಫಿಯ ಪರಿಮಳ ನಿಜಕ್ಕೂ ಪರಿಸರ ಪ್ರಿಯರಿಗೆ ವಿಶೇಷ ಅನ್ನಿಸ್ತಿದೆ. ಇನ್ನೊಂದೆಡೆ ಹೂವುಗಳ ಅರಳಿವಿಕೆಗಾಗಿ ಕಾದಿದ್ದ ಜೇನು ನೋಣಗಳ ಮಕರಂದ ಹೀರಲು ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಜಿಲ್ಲೆಯ ಮಲೆನಾಡು ಭಾಗದ ರಸ್ತೆಗಳ ಇಕ್ಕೆಲಗಳಲ್ಲಿನ ಕಾಫಿಯ ತೋಟಗಳಲ್ಲಿ ಮಲ್ಲಿಗೆಯಂತೆ ಅರಳಿರೋ ಕಾಫಿಯ ಹೂವುಗಳು ಜನರನ್ನ ತನ್ನತ್ತ ಸೆಳೆಯುತ್ತಿವೆ. ಮಳೆ ಬಿದ್ದ ಸಂದರ್ಭದಲ್ಲಿ ಕಾಫಿ ಗಿಡಗಳ ಮೇಲೆ ಮಂಜುಗಡ್ಡೆ ಪೋಣಿಸಿದಂತೆ ಅರಳಿಕೊಳ್ಳುವ ಹೂಗಳನ್ನು ನೋಡಿದರೆ ಪ್ರಕೃತಿ ಪ್ರೇಮ ಅರಳುತ್ತದೆ.ಇನ್ನೊಂದೆಡೆ ಹೂ ಅರಳುವ ಕ್ಷಣಗಳನ್ನೇ ಚಾತಕಪಕ್ಷಿಯಂತೆ ನಿರೀಕ್ಷಿಸುತ್ತಿದ್ದ ಜೆನ್ನೋಣಗಳು ಮಕರಂದ ಹೀರಲು ಗುಂಪುಗುಂಪಾಗಿ ಕಾಫಿ ತೋಟಗಳಿಗೆ ಲಗ್ಗೆಯಿಡುತ್ತಿವೆ.ಇಂಥಾ ನಯನಮನೋಹರ ದೃಶ್ಯವನ್ನು ಕಾಫಿ ನಾಡಿಗೆ ಬರುತ್ತಿರುವ ಯಾರೊಬ್ಬ ಮಿಸ್ ಮಾಡಿಕೊಳ್ಳದಿರುವಂತದ್ದು ವಿಶೇಷ.