Asianet Suvarna News Asianet Suvarna News

ಬೆಳಗಾವಿ: ಸಂತ್ರಸ್ತರಿಗೆ ತಲೆನೋವಾದ ಜಿಪಿಎಸ್ ಟ್ಯಾಗಿಂಗ್

ಸುರಕ್ಷಿತ ಸ್ಥಳದಲ್ಲಿ ಮನೆ ಕಟ್ಟಿಸಲು ಮುಂದಾದ ಸಂತ್ರಸ್ತರಿಗೆ ಜಿಪಿಎಸ್ ಟ್ಯಾಗಿಂಗ್ ಅಡ್ಡಗಾಲು| ಮತ್ತಷ್ಟು  ಅಧಿಕಾರಿಗಳ ಅಸಹಕಾರದಿಂದ ಕಂಗಾಲಾದ ಸಂತ್ರಸ್ತರು| ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರವಾಹದಿಂದ ಹಾನಿಗೀಡಾದ ಜಿಲ್ಲೆಗಳಲ್ಲಿ ಎದುರಾದ ಸಮಸ್ಯೆ|

Flood Victims Faces Problems for GPS Tagging in Belagavi
Author
Bengaluru, First Published Jan 17, 2020, 11:00 AM IST
  • Facebook
  • Twitter
  • Whatsapp

ಜಗದೀಶ ವಿರಕ್ತಮಠ 

ಬೆಳಗಾವಿ(ಜ.17): ಭೀಕರ ಪ್ರವಾಹದಿಂದ ಬದುಕು ಕಳೆದುಕೊಂಡ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮನೆ ನಿರ್ಮಾಣ ಹಂತದ ಜಿಪಿಎಸ್ ಟ್ಯಾಗಿಂಗ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಸಂತ್ರಸ್ತರು ಮತ್ತಷ್ಟು ಕಂಗಾಲಾಗಿದ್ದಾರೆ. 

ಈಗ್ಗೆ ನಾಲ್ಕು ತಿಂಗಳ ಹಿಂದೆ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಭೀಕರ ಪ್ರವಾಹದಿಂದ ಸಾವಿರಾರು ಮನೆಗಳು ಜಲಾವೃತವಾಗಿದ್ದವು. ಹಲವಾರು ಮನೆಗಳು ಕುಸಿದಿದ್ದವು. ಈ ವೇಳೆ ಮನೆಗಳನ್ನು ಕಳೆದುಕೊಂಡ ಜನರು ಬೀದಿಗೆ ಬಿದ್ದಿದ್ದರು. ತಕ್ಷಣ ಆಯಾ ಜಿಲ್ಲಾಡಳಿತ ಹಾಗೂ ಸರ್ಕಾರ ತುರ್ತು ಕ್ರಮವಾಗಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದವು. ಪ್ರವಾಹ ಇಳಿಮುಖವಾದ ನಂತರ ಮನೆಗಳ ಹಾನಿ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ಹಾನಿಗೀಡಾದ ಮನೆಯನ್ನು ಜಿಪಿಎಸ್ ಟ್ಯಾಗಿಂಗ್ ಮಾಡಿದ್ದಾರೆ. ಆದರೆ ಇದೀಗ ಸಂತ್ರಸ್ತರು, ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆಗಳು ಮತ್ತೆ ಎದುರಾಗಬಾರದೆಂಬ ಕಲ್ಪನೆಯಿಂದ ಹಾನಿಗೀಡಾದ ಸ್ಥಳದ ಬದಲಾಗಿ ತಮ್ಮ ಜಮೀನು ಅಥವಾ ಸುರಕ್ಷಿತ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಈ ಕಾರ್ಯಕ್ಕೆ ಜಿಪಿಎಸ್ ಟ್ಯಾಗಿಂಗ್ ಅಡ್ಡಗಾಲು ಹಾಕಿದಂತಾಗಿದ್ದರಿಂದ ಸಂತ್ರಸ್ತರು ದಿಕ್ಕು ತೋಚದೆ ಕಂಗೆಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಾನಿಗೀಡಾದ ಮನೆ ಅಥವಾ ಆಸ್ತಿಯನ್ನು ಒಮ್ಮೆ ಜಿಪಿಎಸ್ ಟ್ಯಾಗಿಂಗ್ ಮಾಡಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ತಂತ್ರಾಂಶದಲ್ಲಿ ಅಳವಡಿಕೆ ಮಾಡಿದ್ದಲ್ಲಿ, ಅದೇ ಜಾಗದಲ್ಲಿ ಮನೆಗಳನ್ನು ಪುನರ್ ನಿರ್ಮಾಣ ಮಾಡಿದ್ದಲ್ಲಿ ಮಾತ್ರ ಸರ್ಕಾರದಿಂದ ಪರಿಹಾರ ಸಿಗಲಿದೆ. ಆದರೆ ಬೇರೆ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಲು ಮುಂದಾಗುವ ಸಂತ್ರಸ್ತರಿಗೆ ಜಿಪಿಎಸ್ ಟ್ಯಾಗಿಂಗ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಅಥವಾ ತಾಲೂಕು ಮಟ್ಟದ ಅಧಿಕಾರಿಗಳು ಹಾನಿಗೀಡಾದ ಸ್ಥಳ ಹೊರತುಪಡಿಸಿ ಬೇರೆ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಲ್ಲಿ ಯಾವುದೇ ಕಾರಣಕ್ಕೂ ಪರಿಹಾರದ ಸೌಲಭ್ಯ ಸಿಗುವುದಿಲ್ಲ ಎಂದು ತಿಳಿಸಿದ್ದರಿಂದ ಸುರಕ್ಷಿತ ಸ್ಥಳಗಳತ್ತ ಮುಖ ಮಾಡಿದ ಸಂತ್ರಸ್ತರಿಗೆ ಜಿಪಿಎಸ್ ಟ್ಯಾಗಿಂಗ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರವಾಹದಿಂದ ಹಾನಿಗೀಡಾದ ಜಿಲ್ಲೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಒಂದು ವೇಳೆ ಸರ್ಕಾರದ ನಿಯಮದಂತೆ ಪ್ರವಾಹದಿಂದ ಹಾನಿಗೀಡಾದ ಸ್ಥಳದಲ್ಲಿಯೇ ಮನೆಗಳನ್ನು ಪುನರ್ ನಿರ್ಮಾಣ ಮಾಡಿದ್ದಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಪ್ರವಾಹ ಎದುರಾಗಬಹುದು. ಇದರಿಂದ ಸರ್ಕಾರ ನೀಡುವ ಪರಿಹಾರ ಧನದ ಜತೆಗೆ ಸ್ವತಃ ಸಂತ್ರಸ್ತರು ಸಾಲ ಮಾಡಿ ನಿರ್ಮಿಸಿದ ಮನೆಗಳು ಮತ್ತೆ ಜಲಾವೃತವಾಗಬಹುದು ಎಂಬ ಮುಂದಾಲೋ ಚನೆಯಿಂದ ಸುರಕ್ಷಿತ ಸ್ಥಳಗಳಲ್ಲಿ ಮನೆಗಳನ್ನು ನಿಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಾನಿಗೀಡಾದ ಸ್ಥಳದ ಬದಲಾಗಿ ಬೇರೆ ಜಾಗದ ಜಿಪಿಎಸ್ ಟ್ಯಾಗಿಂಗ್ ಮಾಡಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ತಂತ್ರಾಂಶದಲ್ಲಿ ಅಳವಡಿಸಲು ಅವಕಾಶ ಕಲ್ಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದು ಸಂತ್ರಸ್ತರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಈ ಮೊದಲು ಜನಪ್ರತಿನಿಧಿಗಳು ಸುರಕ್ಷಿತ ಸ್ಥಳದಲ್ಲಿ ಮನೆಗಳನ್ನು ಪುನರ್ ನಿರ್ಮಾಣ ಮಾಡುವಂತೆ ಸಂತ್ರಸ್ತರಿಗೆ ಸಲಹೆ ನೀಡಿದ್ದರಿಂದ ಸಾವಿರಾರು ಸಂಖ್ಯೆಯ ಕುಟುಂಬಗಳು ಹಾನಿಗೀಡಾದ ಸ್ಥಳದ ಬದಲಾಗಿ ಬೇರೆ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುತ್ತಿವೆ. ಈಗಾಗಲೇ ಪಾಯ (ಪ್ಲಿಂತ್) ಹಂತಕ್ಕೆ ಬಂದಿದ್ದು, ಜಿಪಿಎಸ್ ಮಾಡಲು ಸಂತ್ರಸ್ತರು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಬೇರೆ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿದ್ದಲ್ಲಿ ಜಿಪಿಎಸ್ ಟ್ಯಾಗಿಂಗ್ ಆಗುವುದಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ಬದಲಾವಣೆಗೆ ಅವಕಾಶ ನೀಡಬೇಕು. ಅಂದಾಗ ಮಾತ್ರ ನಿಮಗೆ ಪರಿಹಾರ ನೀಡಲು ಸಾಧ್ಯ. ಸದ್ಯದ ವ್ಯವಸ್ಥೆಯಲ್ಲಿ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ. 

ಮನೆ ಕಳೆದುಕೊಂಡು ನಾಲ್ಕು ತಿಂಗಳಾದರೂ ಬದುಕು ಕಳೆದುಕೊಂಡು ಬೀದಿಯಲ್ಲಿ ಜೀವನ ಸಾಗಿಸುತ್ತಿರುವ ಸಂತ್ರಸ್ತರ ಮನೆಗಳ ನಿರ್ಮಾಣಕ್ಕೆ ನೆರವಾಗಬೇಕಿದ್ದ ಸರ್ಕಾರದ ನಿಯಮ ಹಾಗೂ ಅಧಿಕಾರಿಗಳ ಅಸಹಕಾರದಿಂದ ಸಂತ್ರಸ್ತರು ಕಂಗಾಲಾಗಿದ್ದಾರೆ. 

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಹಾನಿಗೀಡಾದ ಸ್ಥಳದ ಬದಲಾಗಿ ಬೇರೆ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಜಿಪಿಎಸ್ ಟ್ಯಾಗಿಂಗ್ ಸಮಸ್ಯೆ ಎದುರಾಗಿರುವ ಬಗ್ಗೆ ಸಂತ್ರಸ್ತರು ಗಮನಕ್ಕೆ ತಂದಿದ್ದಾರೆ. ಸಂತ್ರಸ್ತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತ ಕೆಲಸ ಆಗಿದ್ದು, ಬೇರೆ ಜಾಗದಲ್ಲಿ ಮನೆ ನಿರ್ಮಿಸುವ ಸಂತ್ರಸ್ತರಿಗೆ ಜಿಪಿಎಸ್ ಬದಲಾವಣೆಗೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಸ್ಪಂದಿಸಿದ್ದು, ಶೀಘ್ರವೇ ಆದೇಶ ಬರುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರವಾಹ ಸಂದರ್ಭದಲ್ಲಿ ಮನೆ ಗೋಡೆ ಸಂಪೂರ್ಣವಾಗಿ ಕುಸಿದಿವೆ. ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದು, ಜಿಪಿಎಸ್ ಟ್ಯಾಗಿಂಗ್ ಸಮಸ್ಯೆ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಂತ್ರಸ್ತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಬೈಲಹೊಂಗಲ ಸಂತ್ರಸ್ತ ಬಸವರಾಜ ತೋರಣಗಟ್ಟಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios