'ವಿಜಯಪುರದಿಂದ ಶೀಘ್ರವೇ ವಿಮಾನ ಹಾರಾಟ'
ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಲು ಕೇಂದ್ರಕ್ಕೆ ಶಿಪಾರಸ್ಸು: ಡಾ.ಶೈಲೇಂದ್ರ ಬೆಲ್ದಾಳೆ ಮಾಹಿತಿ
ವಿಜಯಪುರ(ನ.18): ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಬಾಕಿ ಕಾಮಗಾರಿ ಪೂರ್ಣಗೊಂಡು ವಿಜಯಪುರ ಜನತೆ ವಿಮಾನದಲ್ಲಿ ಸಂಚರಿಸುವ ಅವಕಾಶ ಲಭ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್‌ಬಸ್- 320 ವಿಮಾನಗಳ ಹಾರಾಟಕ್ಕಾಗಿ ಅನುಕೂಲವಾಗುವಂತೆ ನಿರ್ಮಿಸಲು ಸರ್ಕಾರವು ಹೆಚ್ಚುವರಿ 127.29 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ತಾಂತ್ರಿಕ ಹಾಗೂ ಭೌತಿಕ ಕಾಮಗಾರಿಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದರು.
ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ
ಪ್ರವಾಸೋದ್ಯಮಕ್ಕೆ ಉತ್ತೇಜನ:
ವಿಜಯಪುರದಲ್ಲಿ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ದೊರಕಲಿದ್ದು, ಕೂಡಲಸಂಗಮ, ಆಲಮಟ್ಟಿ, ಕೊಲ್ಲಾಪೂರ, ಸೊಲ್ಲಾಪೂರ ಹೀಗೆ ಪ್ರಸಿದ್ಧ ತಾಣಗಳಿಗೆ ಹೋಗಲು ಈ ವಿಮಾಣ ನಿಲ್ದಾಣ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಡಾ.ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ವಿಮಾನ ನಿಲ್ದಾಣ ಎಂದು ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಡಾ.ಶೈಲೇಂದ್ರ ಬೆಲ್ದಾಳೆ ಮಾಹಿತಿ ನೀಡಿದರು.
ಪ್ರಧಾನಿ ಕನಸು ನನಸು :ಹವಾಯಿ ಚಪ್ಪಲವಾಲಾ ಭಿ ಹವಾಯಿ ಜಹಾಜ್ ಮೇ ಘೂಮನಾ ಸಾಮಾನ್ಯ ಮನುಷ್ಯನು ವಿಮಾನದಲ್ಲಿ ಹಾರಾಟ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕೆಎಸ್‌ಐಐಡಿಸಿಯಿಂದ ವಿಜಯಪುರ ಸೇರಿದಂತೆ ಶಿವಮೊಗ್ಗ, ಹಾಸನ, ರಾಯಚೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ ಹಾಗೂ ಕಾರವಾರ ಸೇರಿದಂತೆ 14 ಜಿಲ್ಲೆಗಳಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಸೀ-ಪ್ಲೇನ್‌ಗಳ ಸಂಚಾರ :
ಸೀ-ಪ್ಲೇನ್‌ಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಈ ಮಾದರಿಯ ಸೀ-ಪ್ಲೇನ್‌ಗಳ ಹಾರಾಟದ ಮೂಲಕ ಸಾಹಸ ಪ್ರವಾಸೋದ್ಯಮ (ಅಡ್ವೆಂಚರ್ ಟೂರಿಸಂ) ಉತ್ತೇಜಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಆಲಮಟ್ಟಿ ಜಲಾಶಯದಲ್ಲಿಯೂ ಸಹ ಸೀ-ಪ್ಲೇನ್ ಹಾರಾಟದ ಅವಕಾಶ ಕಲ್ಪಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಸಿ-ಪ್ಲೇನ್ ಹಾರಾಟ ಯೋಜನೆಗೆ ಪೂರಕವಾಗಲಿದೆ. ರಾಜ್ಯದ ಕಬಿನಿ, ಕೆಆರ್‌ಎಸ್, ಹಿಡಕಲ್ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸೀ-ಪ್ಲೇನ್ ಹಾರಾಟಕ್ಕೆ ಅವಕಾಶದ ಕುರಿತು ಸಮೀಕ್ಷೆ ನಡೆಸಲು ಈಗಾಗಲೇ ಕೆಎಸ್‌ಐಐಡಿಸಿ ಅಧ್ಯಯನ ನಡೆಸುತ್ತಿದೆ ಎಂದು ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ವಿಜಯಪುರ ವಿಮಾನ ನಿಲ್ದಾಣದಲ್ಲಿ ಎಟಿಆರ್-72 ಮಾದರಿಯ ವಿಮಾನಗಳ ಹಾರಾಟಕ್ಕಾಗಿ 220 ಕೋಟಿ ಮಂಜೂರಾಗಿದ್ದು, ಎರಡು ಹಂತದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಗಾಗಿ 95 ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗೆ 125 ಕೋಟಿಗಳನ್ನು ಕಾಯ್ದಿರಿಸಲಾಗಿದೆ, ಮೊದಲನೇ ಹಂತದ ಕಾಮಗಾರಿಯಲ್ಲಿ ಶೇ.64.75 ರಷ್ಟುಭೌತಿಕ ಹಾಗೂ ಶೇ.64.75ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಎರಡನೇ ಹಂತದ ಸಿವಿಲ… ಕಾಮಗಾರಿ ಭೌತಿಕ ಪ್ರಗತಿ ಶೇ.40.93 ರಷ್ಟಾಗಿದ್ದು, ಆರ್ಥಿಕ ಪ್ರಗತಿ ಶೇ.40.93 ರಷ್ಟುಸಾಧಿಸಲಾಗಿದೆ ಎಂದರು.
ಎರಡನೇ ಹಂತದ .125 ಕೋಟಿ ಅನುದಾನವನ್ನು ಎರಡು ಉಪಕಾಮಗಾರಿಗಳಾಗಿ ವಿಂಗಡಿಸಿ .106 ಕೋಟಿಗಳ ವೆಚ್ಚದಲ್ಲಿ ಸಿವಿಲ್ ಕಾಮಗಾರಿ .19 ಕೋಟಿ ವೆಚ್ಚದಲ್ಲಿ ಏವಿಯೋನಿಕ್ಸ್, ಸೆಕ್ಯೂರಿಟಿ ಇಕ್ಸೂಪಮೆಂಟ್ಸ್ ಉಪಕಾಮಗಾರಿಗೆ ವಿಂಗಡನೆ ಮಾಡಲಾಗಿದೆ. ಈ ಉಪಕಾಮಗಾರಿ ಅಡಿಯಲ್ಲಿ ಬ್ಯಾಗೇಜ್ ಹ್ಯಾಂಡಲಿಂಗ್, ಸೆಕ್ಯೂರಿಟಿ ಸ್ಕ್ಯಾನರ್, ಲ್ಯಾನ್, ಎ.ಸಿ. ಪ್ಲೆಬಚ್ ಇನಾರ್ಫಾಮೇಷನ್ ಡಿಸಪ್ಲೇ ಇತರೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್‌ಓಎ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಸತೀಶ ಜಾರಕಿಹೊಳಿ ಅಂತ್ಯ ಕಾಲ ಸನ್ನಿಹಿತ: ಯತ್ನಾಳ
ಈ ವೇಳೆ ಎಸ್‌ಪಿ ಎಚ್.ಡಿ.ಆನಂದಕುಮಾರ, ಜಿ.ಪಂ ಸಿಇಒ ರಾಹುಲ್ ಶಿಂಧೆ, ಕೆಎಸ್‌ಐಐಡಿಸಿ ಕಾರ್ಯಕಾರಿ ನಿರ್ದೇಶಕ ಡಿ.ಪಿ.ಪ್ರಕಾಶ, ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಭಿಷ್ಟ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಂದಾರ, ಇ.ಬಿ.ಚಿಕ್ಕಲಕಿ, ರವಿ ಪವಾರ, ರೇವಣ್ಣ ಮಸಳಿ, ಜೋಸ್ ಥಾಮಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆ
ಬಳಿಕ ಕೆಎಸ್‌ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿಮಾನ ನಿಲ್ದಾಣಕ್ಕೆ ದಿನದ ಇಪ್ಪತ್ನಾಲ್ಕು ಗಂಟೆ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ. 2000 ಕೀ.ವಿ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ತಾಂತ್ರಿಕ ಅನುಮೋದನೆಯ ಹಂತಲ್ಲಿದೆ. ಪರಿಷ್ಕೃತ ಅಂದಾಜು ಪತ್ರಿಕೆಯು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಂದ ಅನುಮೋದನೆಯಾಗಿದ್ದು, ಬೆಳಗಾವಿ ಮುಖ್ಯ ಅಭಿಯಂತರರಿಂದ ತಾಂತ್ರಿಕ ಅನುಮೋದನೆ ಪಡೆಯಬೇಕು. ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಿ ಇತರೆ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು. ವಿಮಾನ ನಿಲ್ದಾಣ ಕಾಮಗಾರಿಗೆ ಸರ್ಕಾರ ನೀಡುವ ಹೆಚ್ಚುವರಿ ಅನುದಾನಕ್ಕೆ ಪಡೆಯಲು ತಾಂತ್ರಿಕ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಜಮೀನಿನ ಭೂಸ್ವಾಧೀನ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ವಿಳಂಬ ಮಾಡದೇ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಡಾ.ಶೈಲೇಂದ್ರ ಬೆಲ್ದಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.