ಶ್ರೀರಂಗಪಟ್ಟಣ: ದೇಗುಲದ ಗೇಟ್ ಬಿದ್ದು ಐದು ವರ್ಷದ ಬಾಲಕ ದುರಂತ ಸಾವು
ಈ ಸಂಬಂಧ ಪೋಷಕರು ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶ್ರೀರಂಗಪಟ್ಟಣ(ನ.14): ಎರಡನೇ ಕಾರ್ತಿಕ ಮಾಸದ ಪೂಜೆ ನಿಮಿತ್ತ ಪೋಷಕರ ಜೊತೆ ಪೂಜೆಗೆ ತೆರಳಿದ್ದ 5 ವರ್ಷದ ಬಾಲಕನ ಮೇಲೆ ದೇಗುಲದ ಗೇಟ್ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ಹುಂಜ ನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಎಚ್.ಜೆ ಸಿದ್ದರಾಜು ಸುಮಿತ್ರ ದಂಪತಿ ಪುತ್ರ ಎಚ್.ಎಸ್.ಎಸ್. ಜಿಷ್ಣು (5) ಸಾವನ್ನಪ್ಪಿದ ದುರ್ದೈವಿ
ಚಿನ್ಮಯ ವಿದ್ಯಾಲಯದಲ್ಲಿ ಎಲ್‌ಕೆಜಿ ಓದುತ್ತಿದ್ದ ಜಿಷ್ಣು ಸ್ವಗ್ರಾಮ ಹುಂಜನಕೆರೆ ಚೆನ್ನ ಕೇಶವ ದೇವಾಲಯದಲ್ಲಿ ಎರಡನೇ ಕಾರ್ತಿಕ ಸೋಮವಾರದ ವಿಶೇಷ ಪೂಜೆ ಇದ್ದುದ್ದರಿಂದ ಪೋಷಕರ ಜೊತೆ ದೇವಾಲಯಕ್ಕೆ ತೆರಳಿದ್ದನು. ದೇವಾಲಯದ ಆವರಣ ಗೋಡೆಯ ಕಬ್ಬಿಣದ ಗೇಟ್ ಶಿಥಿಲಾವಸ್ಥೆ ಗೊಂಡಿದ್ದು, ಅದನ್ನು ದುರಸ್ತಿ ಮಾಡಿರಲಿಲ್ಲ. ದೇವಾಲಯ ಆವರಣದಲ್ಲಿ ಮಗು ಆಟವಾಡುತ್ತಿದ್ದಾಗ ಪೋಷಕರು ದೇವರ ಪೂಜೆ ಕಡೆ ಹೆಚ್ಚು ಗಮನಹರಿಸಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು ಜಿಕೆವಿಕೆ ಕೃಷಿಮೇಳ ನ.14ರಿಂದ ಆರಂಭ; ನಾಲ್ಕು ಹೊಸ ತಳಿಗಳ ಬಿಡುಗಡೆ!
ಮೃತ ಮಗು ಜಿಷ್ಣು ಇದೇ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಗೇಟ್ ಬಳಿ ತೆರಳಿ ಅದನ್ನು ಹಿಡಿದು ಕೊಂಡಾಗ ಮಗುವಿನ ಮೇಲೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಗಾಯಗೊಂಡ ಬಾಲಕನ ಚೀರಾಟ ಯಾರಿಗೂ ಕೇಳಿಸಿಲ್ಲ. ಸ್ವಲ್ಪ ಹೊತ್ತಿನ ನಂತರ ಮಗು ಕಾಣದಿದ್ದಾಗ ಪೋಷಕರ ಹುಡುಕಿದಾಗ ಗೇಟಿನ ಕೆಳಗಡೆ ಮಗು ಸಿಲುಕಿರುವುದು ಕಂಡು ಬಂದಿದೆ.
ತಕ್ಷಣ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಅಷ್ಟರಲ್ಲಿ ಮೃತ ಪಟ್ಟಿದ್ದಾನೆ. ಈ ಸಂಬಂಧ ಪೋಷಕರು ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.