ಶಿವಾನಂದ ಗೊಂಬಿ

ಹುಬ್ಬಳ್ಳಿ(ಸೆ.04): ಕಳೆದ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ‘ಇನ್ವೆಸ್ಟರ್‌ ಮೀಟ್‌’ನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದ್ದ ಐದು ಕೈಗಾರಿಕೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಆದೇಶ ಹೊರಡಿಸುವುದೊಂದೇ ಬಾಕಿಯಿದೆ. ಇದರಿಂದ ಧಾರವಾಡ ಜಿಲ್ಲೆಗೆ ಕೈಗಾರಿಕೆ ಬಂಪರ್‌ ಬಂದಂತಾಗಿದೆ.

ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು ಬರಲು ಹಿಂಜರಿಯುತ್ತವೆ. ಇಲ್ಲಿ ಸೌಲಭ್ಯಗಳೇ ಇಲ್ಲ. ಇದರಿಂದಾಗಿ ಇಲ್ಲಿಂದ ಯುವಕರು ನೌಕರಿ ಪಡೆದುಕೊಳ್ಳಲು ದೂರದ ಬೆಂಗಳೂರು, ಪುಣೆ, ಸೇರಿದಂತೆ ಮತ್ತಿತರರ ಕಡೆ ಹೋಗಬೇಕಾಗುತ್ತಿತ್ತು. ಇದರಿಂದ ಪ್ರತಿಭಾ ಪಲಾಯನವಾಗುತ್ತೆ. ಇದನ್ನು ತಡೆಗಟ್ಟಲು ಕೈಗಾರಿಕೆಗಳು ಬರುವಂತಾಗಬೇಕು ಎಂಬ ಬೇಡಿಕೆ ಬಹುವರ್ಷಗಳದ್ದಾಗಿತ್ತು. ಅದರಂತೆ ಜಗದೀಶ ಶೆಟ್ಟರ್‌ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಖಾತೆ ವಹಿಸಿಕೊಂಡ ಬಳಿಕ ಟಯರ್‌- 2 ಸಿಟಿ, ಟಯರ್‌- 3 ಸಿಟಿಗೆ ಕೈಗಾರಿಕೆಗಳು ಬರುವಂತಾಗಲಿ ಎಂಬ ಮಹತ್ತರ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟರ್‌ ಮೀಟ್‌’ ಮಾಡಿದ್ದರು. ಅದರಲ್ಲಿ ಧಾರವಾಡ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಒಪ್ಪಂದ ಮಾಡಿಕೊಂಡ 5 ಕೈಗಾರಿಕೆಗಳಿಗೆ ಇದೀಗ ಸರ್ಕಾರದ ಅನುಮೋದನೆ ಸಿಕ್ಕಿದೆ. ಈ ಐದು ಕೈಗಾರಿಕೆಗಳಿಂದ 2265 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ. 2000ಕ್ಕೂ ಅಧಿಕ ಜನರಿಗೆ ನೇರವಾಗಿ ಉದ್ಯೋಗ ದೊರೆಯಲಿದೆ. ಇನ್ನೂ ಪರೋಕ್ಷವಾಗಿ 10 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಲಭಿಸಲಿದೆ.

ಯಾವ್ಯಾವ ಕೈಗಾರಿಕೆಗಳು?:

ಟಾಟಾ ಮೋಟ​ರ್ಸ್‌ 2200 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಇದಕ್ಕೆ ಮಮ್ಮಿಗಟ್ಟಿಯಲ್ಲಿ 340 ಎಕರೆ ಜಮೀನನ್ನು ಈಗಾಗಲೇ ನೀಡಲಾಗಿದೆ. ಇದೇ ಬಹುಪಾಲು ಹೂಡಿಕೆ ಮಾಡಲಿದ್ದು, ಎಲೆಕ್ಟ್ರಿಕ್‌ ಬಸ್‌, ಎಸಿ ಟೆಂಪೋ ಟ್ರಾವೆಲ್ಸ್‌, ಸ್ಕೂಲ್‌ ಬಸ್‌ ಸೇರಿದಂತೆ ಮತ್ತಿತರ ವಾಹನಗಳನ್ನು ತಯಾರಿಸುವ ಘಟಕವನ್ನು ಇಲ್ಲಿಗೆ ತರಲಿದೆ. ಇನ್ನೂ ಮೈಕ್ರೋಫಿನಿಶ್‌ ಪಂಫ್ಸ್‌ ಪ್ರೈವೇಟ್‌ ಲಿಮಿಟೆಡ್‌ 33.5 ಕೋಟಿ ಬಂಡವಾಳ ಹೂಡಲಿದೆ. ಈ ಉದ್ಯಮಕ್ಕೆ ಸ್ವಂತ ಜಮೀನಿದೆ. ಅದರಲ್ಲಿ ತನ್ನ ಘಟಕವನ್ನು ಸ್ಥಾಪಿಸಲಿದೆ. ಕಲರ್ಸ್‌ ಪ್ಲಸ್‌ 15.5 ಕೋಟಿ ಹೂಡಲಿದ್ದು, 1 ಎಕರೆ ಜಮೀನು ಬೇಕಾಗುತ್ತೆ ಎಂದು ಕೇಳಿಕೊಂಡಿದೆ. ಎಂವೈಕೆ ಪಾಲಿಮರ್ಸ್‌ 15 ಕೋಟಿ ಬಂಡವಾಳ ಹೂಡಲಿದ್ದು, ಇದಕ್ಕೆ 4 ಎಕರೆ ಜಮೀನನ್ನು ಮೀಸಲಿಡಲಿದೆ. ಇನ್ನೂ ಐಟಿ ಬಿಟಿ ಕಂಪನಿಯಾಗಿರುವ ಐಯೋನಿಡಿಯಾ ಎಂಟರ್‌ಪ್ರೈಸಿಸ್‌ ಸಲ್ಯೂಷನ್‌ ಕೂಡ ಇಲ್ಲಿಗೆ ಬರಲು ಒಪ್ಪಿಕೊಂಡಿದೆ. ಈ ಐದು ಕೈಗಾರಿಕೆಗಳು ಹುಬ್ಬಳ್ಳಿ ‘ಇನ್ವೆಸ್ಟರ್‌ ಮೀಟ್‌’ನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಇವುಗಳಿಗೆ ಇದೀಗ ಸರ್ಕಾರ ಅನುಮೋದನೆ ನೀಡಿ ಆಗಿದೆ. ಶೀಘ್ರದಲ್ಲೇ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಕೈಗಾರಿಕಾ ಇಲಾಖೆಯ ಮೂಲಗಳು ತಿಳಿಸುತ್ತವೆ.

ಹೊಸ ಕೈಗಾರಿಕೆ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ: ಸಚಿವ ಶೆಟ್ಟರ್‌

ಕೊರೋನಾದಿಂದ ವಿಳಂಬ:

ಈ ಎಲ್ಲ ಕೈಗಾರಿಕೆಗಳಿಗೆ ಈ ಹಿಂದೆಯೇ ಅನುಮೋದನೆ ಸಿಗಬೇಕಿತ್ತು. ಆದರೆ ಕೊರೋನಾದಿಂದಾಗಿ ಕೊಂಚ ವಿಳಂಬವಾಗಿದೆ. ಇದೀಗ ಶೀಘ್ರದಲ್ಲೇ ಈ ಉದ್ಯಮಗಳು ತನ್ನ ಘಟಕ ಪ್ರಾರಂಭಕ್ಕೆ ಚಾಲನೆ ನೀಡಲಿವೆ ಎಂದು ಅಧಿಕಾರಿ ವಲಯ ತಿಳಿಸುತ್ತದೆ.

ಈ ಹಿಂದೆ ಬೆಂಗಳೂರಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಹುತೇಕ ಉದ್ಯಮಗಳು ಒಪ್ಪಂದಕಷ್ಟೇ ಸೀಮಿತವಾಗಿದ್ದವು. ಆದರೆ ‘ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ’ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡ ಕೈಗಾರಿಕೆಗಳು ಬರಲು ಒಪ್ಪಿಗೆ ಸೂಚಿಸಿ ಇದೀಗ ಪ್ರಕ್ರಿಯೆ ಶುರುವಾಗಿರುವುದು ಸಂತಸಕರ ಸಂಗತಿ ಎಂಬ ಮಾತು ಇಲ್ಲಿನ ಕೈಗಾರಿಕೋದ್ಯಮಿಗಳದ್ದು. ಒಟ್ಟಿನಲ್ಲಿ ಹುಬ್ಬಳ್ಳಿಯತ್ತ ಕೈಗಾರಿಕೆಗಳು ಬರುತ್ತಿರುವುದು ಯುವ ಸಮೂಹದಲ್ಲಿ ಸಂತಸವನ್ನುಂಟು ಮಾಡಿರುವುದಂತೂ ಸತ್ಯ.

ಕೊರೋನಾದಿಂದಾಗಿ ‘ಇನ್ವೆಸ್ಟರ್‌ ಮೀಟ್‌’ನಲ್ಲಿ ಒಪ್ಪಂದ ಮಾಡಿಕೊಂಡ ಕೈಗಾರಿಕೆಗಳ ತರುವ ಕೆಲಸಕ್ಕೆ ಕೊಂಚ ವಿಳಂಬವಾಗಿತ್ತು. ಇದೀಗ ಮತ್ತೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಒಪ್ಪಂದ ಮಾಡಿಕೊಂಡ ಬಹುತೇಕ ಕೈಗಾರಿಕೆಗಳು ಸ್ಥಾಪನೆಯಾಗುವುದು ಖಚಿತ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲೇ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಅಂದಾಗ ಇಲ್ಲಿನ ನಿರುದ್ಯೋಗ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಇದೀಗ ನಡೆಯುತ್ತಿರುವ ಚಟುವಟಿಕೆ ನಿಜಕ್ಕೂ ಖುಷಿ ನೀಡುತ್ತಿದೆ. ‘ಇನ್ವೆಸ್ಟರ್‌ ಮೀಟ್‌’ನಲ್ಲಿ ಒಪ್ಪಂದ ಮಾಡಿಕೊಂಡ ಎಲ್ಲ ಉದ್ಯಮಗಳು ಇಲ್ಲಿಗೆ ಬರಬೇಕು ಎಂದು ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ಫೋರಂನ ಕಾರ್ಯದರ್ಶಿ ಜಗದೀಶ ಹಿರೇಮಠ ಅವರು ತಿಳಿಸಿದ್ದಾರೆ.