ಮಂಗಳೂರು(ಏ.22): ಮೂಡುಬಿದಿರೆಯಲ್ಲಿ ಕ್ಲೀನಪ್‌ ಬೆದ್ರ ವಾರದ ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ಈಗಾಗಲೇ 107 ವಾರಗಳ ನಿರಂತರ ಸ್ವಚ್ಛತಾ ಕಾರ್ಯಕ್ರಮ ಪೂರೈಸಿರುವ ಜವನೆರ್‌ ಬೆದ್ರ ಸಂಘಟನೆ, ಪೇಟೆಯ ಹತ್ತಾರು ಕಡೆ ನೂರಾರು ಬೀದಿ ನಾಯಿಗಳಿಗೆ ಅನ್ನ ಹಾಕುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದೆ.

ಚಿಕನ್‌ ಸಾರು ಬೆರೆಸಿದ ಅನ್ನ ಜತೆಗೆ ಬೇಯಿಸಿದ ಒಣಮೀನಿನ ಊಟ ನಾಯಿಗಳ ಹಸಿವು ತಣಿಸುತ್ತಿದೆ. ಜವನೆರ್‌ ಬೆದ್ರ ತಂಡದ ಅಮರ್‌ ಕೋಟೆ ಬಳಗ ದಿನವೂ ರಾತ್ರಿ 7ರಿಂದ 9ರ ಹೊತ್ತಿಗೆ ಬಸ್‌ ಸ್ಟ್ಯಾಂಡ್, ಮಾರ್ಕೆಟ್‌, ಅರಮನೆ ಬಾಗಿಲು, ವಿಜಯನಗರ, ರಿಂಗ್‌ ರೋಡ್‌, ಜೈನ ಪೇಟೆ, ಮೆಸ್ಕಾಂ ಬಳಿ, ಹೀಗೆ ಹತ್ತಾರು ತಾಣಗಳನ್ನು ಗುರುತಿಸಿ ನಾಯಿಗಳಿಗೆ ಅನ್ನ ಹಾಕುತ್ತಿದೆ.

ಇಷ್ಟೂಸಾಲದೆಂಬಂತೆ ಅನಾಥ ಬೆಕ್ಕು- ಮರಿಗಳಿಗೂ ಈ ಊಟ ದೊರೆಯುತ್ತಿದೆ. ಅಮರ್‌ ಕೋಟೆ ಬಳಗ, ಮೂಡುಬಿದಿರೆಯಲ್ಲಿ ಅಗತ್ಯವಿರುವ 400ಕ್ಕೂ ಅಧಿಕ ಕುಟುಂಬಗಳಿಗೆ ಈಗಾಗಲೇ ದಿನಸಿ ಕಿಟ್‌ ವಿತರಿಸಿದೆ.