ಕಾರ್ಖಾನೆ ರಾಸಾಯನಿಕ ನೀರಿನಿಂದ ಮೀನುಗಳ ಮಾರಣಹೋಮ

*  ಮೈಲಾರ ಸಕ್ಕರೆ ಕಾರ್ಖಾನೆ ರಾಸಾಯನಿಕ ನೀರು ಬಿಡುಗಡೆ
*  ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಖಾನೆಗೆ ನೋಟಿಸ್‌
*  ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸೇರಿದಂತೆ ಜಲಚರಗಳು ಸಾವು 
 

Fish Death Due to Chemical Water at Huvina Hadagali in Vijayanagara grg

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಮೇ.29):  ತಾಲೂಕಿನ ಬೀರಬ್ಬಿ ಬಳಿ ಇರುವ ಮೈಲಾರ ಸಕ್ಕರೆ ಕಾರ್ಖಾನೆಯಿಂದ ಹರಿಬಿಟ್ಟ ರಾಸಾಯನಿಕಯುಕ್ತ ನೀರು ಅರಳಿಹಳ್ಳಿ ಕೆರೆಯ ನೀರಿಗೆ ಸೇರಿದ ಪರಿಣಾಮ ಮೀನುಗಳ ಮಾರಣ ಹೋಮವಾಗಿದೆ.

ಕಾರ್ಖಾನೆಯಿಂದ ಬಳಕೆಯಾಗಿರುವ ನೀರು ಸಂಗ್ರಹಕ್ಕೆ ಹೊಂಡ ನಿರ್ಮಾಣ ಮಾಡಿದ್ದಾರೆ. ಆ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರು ಅಕ್ಕ ಪಕ್ಕದ ರೈತರ ಜಮೀನುಗಳ ಮೂಲಕ ಹಳ್ಳ ಸೇರಿ ಅರಳಿಹಳ್ಳಿ ಕೆರೆಯ ನೀರಿನಲ್ಲಿ ಸೇರಿಕೊಂಡಿದೆ. ಇದರ ಪರಿಣಾಮ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸೇರಿದಂತೆ ಜಲಚರಗಳು ಸತ್ತಿವೆ. ಜತೆಗೆ ಕೆರೆಯ ನೀರು ಕಲುಷಿತಗೊಂಡಿದೆ. ಈ ನೀರು ಕುಡಿದ ಕುರಿ, ಮೇಕೆಗಳು ಸತ್ತಿರುವ ಉದಾಹರಣೆಗಳಿವೆ.

ಕಾರ್ಖಾನೆಯ ನೀರು ರೈತರ ಜಮೀನುಗಳಲ್ಲಿ ಹರಿದಿರುವ ಹಿನ್ನೆಲೆಯಲ್ಲಿ ಭೂಮಿಯೂ ಬಂಜರಾಗಿದೆ. ನೀರು ಹರಿಯುವ ಜಾಗದಲ್ಲಿದ್ದ ಗಿಡ ಮರಗಳೆಲ್ಲ ಒಣಗಿವೆ. ಭೂಮಿಯಲ್ಲಿ ಸಂಪೂರ್ಣ ಅಪಾಯಕಾರಿಕ ರಾಸಾಯನಿಕ ಅಂಶಗಳು ಸೇರಿಕೊಂಡಿವೆ. ಜತೆಗೆ ಅಕ್ಕ ಪಕ್ಕದ ಕೊಳವೆಗಳ ಅಂತರ್ಜಲದಲ್ಲಿ ಸೇರಿಕೊಂಡಿದೆ. ಆ ನೀರನ್ನು ಗಿರಿಯಾಪುರದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಬೀರಬ್ಬಿ ಗ್ರಾಮಸ್ಥರು ಜಿಲ್ಲಾಧಿಕಾರಿ ಮುಂದೆ ಕಲುಷಿತ ನೀರನ್ನು ಪ್ರದರ್ಶನ ಮಾಡಿ, ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಸಭೆಯ ನಂತರದಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Vijayanagara: ಹೊಸಪೇಟೆ ಸರ್ಕಾರಿ ಕಾಲೇಜಿನಲ್ಲಿ 3 ಕೋಟಿ ರೂಪಾಯಿ ಗುಳುಂ!

ಕಾರ್ಖಾನೆ ರಾಸಾಯನಿಕ ನೀರು ಬಿಡುಗಡೆ ಕುರಿತು ಪತ್ರಿಕೆಯಲ್ಲಿ ವರದಿಯಾಗುತ್ತಿದಂತೆಯೇ ತಹಸೀಲ್ದಾರ್‌ ಪ್ರತಿಭಾ ಕಂದಾಯ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಂದ ವರದಿ ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಇದರ ಪರಿಣಾಮ ಮೇ 25ರಂದು ಮೈಲಾರ ಸಕ್ಕರೆ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿಯವರಿಂದ ನೋಟಿಸ್‌ ಜಾರಿ ಆಗಿದೆæ. ಈ ಕುರಿತು ಕಾರ್ಖಾನೆ ನೀರು ಸಂಗ್ರಹ ಮಾಡಿರುವ ಹೊಂಡದ ಮೂಲಸ್ಥಿತಿ ಸೇರಿದಂತೆ ಇನ್ನಿತರ ಸೂಕ್ತ ಮಾಹಿತಿಯನ್ನು ಜೂ. 2ರಂದು ಕಾರ್ಖಾನೆಯವರು ತಿಳಿಸಬೇಕಿದೆ. ವಿಳಂಬವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಖಾನೆ ನೀರು ಬಿಡುಗಡೆಯಿಂದ ಕೆರೆಯಲ್ಲಿ ಸಾಕಿದ್ದ ಲಕ್ಷಾಂತರ ಜಲಚರಗಳು ಸತ್ತು ಹೋಗಿವೆ. ಕಾರ್ಖಾನೆ ನೀರಿನಿಂದ ಮೀನಿನ ಉತ್ಪಾದನೆಗೆ ದೊಡ್ಡ ನಷ್ಟಉಂಟಾಗಿದೆ. ಕೆರೆ ಟೆಂಡರ್‌ ಪಡೆದಿರುವವರಿಗೆ ಅಪಾರ ನಷ್ಟವಾಗಿದೆ.
ಗಿರಿಯಾಪುರ ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ಮೈಲಾರ ಸಕ್ಕರೆ ಕಾರ್ಖಾನೆ ನೀರು, ಬಿಡುಗಡೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್‌ ನೀಡಲಿದ್ದಾರೆ. ಅವರ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ಹೂವಿನಹಡಗಲಿ ತಹಸೀಲ್ದಾರ್‌ ಪ್ರತಿಭಾ ತಿಳಿಸಿದ್ದಾರೆ.  

ಅರಳಿಹಳ್ಳಿ ಕೆರೆಯಲ್ಲಿ ಮೀನು ಸಾಕಾಣಿಗೆ ಸರ್ಕಾರದಿಂದ ಉಚ್ಚೆಂಗೆಪ್ಪಗೆ ಟೆಂಡರ್‌ ಆಗಿದೆ. ಮೈಲಾರ ಸಕ್ಕರೆ ಕಾರ್ಖಾನೆಯ ರಾಸಾಯನಿಕ ಸೇರ್ಪಡೆಯಾಗಿರುವ ನೀರಿನಿಂದ ಮೀನುಗಳು ಸತ್ತಿವೆ. ಇದರಿಂದ ವರ್ಷಕ್ಕೆ 7-8 ಲಕ್ಷ ಆದಾಯ ನಷ್ಟವಾಗಿದೆ. ಅದಕ್ಕೆ ಕಾರ್ಖಾನೆಯವರೇ ಪರಿಹಾರ ನೀಡಬೇಕು ಅಂತ ಹಿರೇಹಡಗಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಸುರೇಶ ಶಿವಪುರ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios