ಬೆಂಗಳೂರು [ಸೆ.06]:  ಕುರುಬ ಸಮಾಜದ ಅಭಿವೃದ್ಧಿ ವಿಚಾರ ಬಂದಾಗ ಸಮುದಾಯದ ಪ್ರತಿಯೊಬ್ಬರೂ ರಾಜಕೀಯವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಡಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಮುದಾಯದ ಪ್ರಮುಖ ನಾಯಕರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನಕಶ್ರೀ ಚಾರಿಟಬಲ್‌ ಟ್ರಸ್ಟ್‌ ಗುರುವಾರ ನಗರದ ಹೊರವಲಯದ ಸೊಣ್ಣೇನಹಳ್ಳಿಯಲ್ಲಿ ಆಯೋಜಿಸಿದ್ದ ‘ಕನಕ ಸಂಕೀರ್ಣ’ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ಸಚಿವ ಎಚ್‌.ವಿಶ್ವನಾಥ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿದ್ದರ ಫಲವಾಗಿ ಇಂದು ಕುರುಬ ಸಮುದಾಯಕ್ಕೊಂದು ಕನಕ ಗುರುಪೀಠ ಸ್ಥಾಪನೆಯಾಗಿ ನಾಲ್ಕು ಸ್ವಾಮೀಜಿಗಳ ಯೋಗ ಸಿಕ್ಕಿದೆ. ಸಮಾಜದ ಬೆಂಬಲ ವಿಚಾರ ಬಂದಾಗ ರಾಜಕೀಯ ಅಡ್ಡ ಬರುತ್ತದೆ. ಆ ಸಂದರ್ಭದಲ್ಲಿ ರಾಜಕೀಯವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬಂದರೆ ಮಾತ್ರ ಸಮಾಜದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತವೆ. ಎಲ್ಲದರಲ್ಲೂ ರಾಜಕೀಯ ತರುವ ಪ್ರಯತ್ನ ನಡೆದಾಗ ಯಾವುದೇ ಸಮಾಜ ಉದ್ಧಾರ ಆಗುವುದಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೇರೆ ಸಮಾಜದವರು ಉದ್ಧಾರವಾಗಿರುವುದನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಕುರುಬ ಸಮಾಜ ಇನ್ನೂ ಅಭಿವೃದ್ಧಿಯಾಗಬೇಕಿದೆ. ಇಡೀ ಸಮಾಜ ಒಟ್ಟಾದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂದು ಉದ್ಘಾಟನೆಗೊಂಡಿರುವ ಕನಕ ಸಂಕೀರ್ಣವೇ ಸಾಕ್ಷಿ. ಸಮುದಾಯದ ಅಭಿವೃದ್ಧಿಗೆ ತಾವು ಪೂರ್ಣ ಸಹಕಾರ ನೀಡುತ್ತೇನೆ. ಕನಕಶ್ರೀ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷರ ಮನವಿಯಂತೆ ಕನಕ ಸಂಕೀರ್ಣದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಮೂರು ಕೋಟಿ ರು. ಅನುದಾನವನ್ನು ಸರ್ಕಾರದಿಂದ ಕೊಡಿಸಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಂಸ್ಥಾನದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಕಲಬುರಗಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಕೆ.ಆರ್‌.ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ರಘುನಾಥ ಮಲ್ಕಾಪುರೆ, ಮಾಜಿ ಸಚಿವ ಆರ್‌.ಕೃಷ್ಣಪ್ಪ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಕನಕ ಶ್ರೀಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಟಿ.ಬಿ. ಬಳಗಾವಿ, ಆಂಧ್ರ ಪ್ರದೇಶ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಂಕರ್‌ ನಾರಾಯಣ, ಸಂಸದ ಮಾಧವನ್‌, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜು, ಐಎಎಸ್‌ ಅಧಿಕಾರಿ ದಯಾನಂದ್‌ ಮತ್ತಿತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯಗೆ ವಿಶ್ವನಾಥ್‌ ಟಾಂಗ್‌

ಹಿಂದುಳಿದ ವರ್ಗಗಳನ್ನು ಜನಸಂಖ್ಯಾ ಆಧಾರದಲ್ಲಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿ .158 ಕೋಟಿ ವೆಚ್ಚ ಮಾಡಿ ರಾಜ್ಯದಲ್ಲಿ ಜಾತಿ ಜನಗಣತಿ ನಡೆಸಿ ವರದಿ ಪಡೆದವರು ಆ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವ ಧೈರ್ಯ ಮಾಡಲಿಲ್ಲ, ಆ ವರದಿ ಜಾರಿಯಾಗಿದ್ದರೆ ಕುರುಬ ಸಮುದಾಯ ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಮತ್ತಷ್ಟುಶಕ್ತಿ ಬರುತ್ತಿತ್ತು ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ಹಾವನೂರು ವರದಿ ಮಂಡಿಸಿದ ದೇವರಾಜ ಅರಸು ಅವರನ್ನು ಹೊರತು ಪಡಿಸಿದರೆ ನಂತರ ಬಂದ ಯಾವುದೇ ಸರ್ಕಾರ, ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಅಭಿವೃದ್ಧಿ ಕುರಿತು ಪಡೆದ ಯಾವೊಂದು ವರದಿಗಳನ್ನೂ ವಿಧಾನಸಭೆಯಲ್ಲಿ ಮಂಡಿಸುವ ಧೈರ್ಯ ತೋರಲಿಲ್ಲ ಎಂದರು.

ಹಿಂದುಳಿದ ವರ್ಗಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಕುರುಬ ಸಮುದಾಯ ಒಗ್ಗಟ್ಟಾಗಿದೆ ಎಂಬ ಕಾರಣದಕ್ಕೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿತ್ತು. ಆದರೆ, ಇಂದು ಎಲ್ಲೋ ಒಂದು ಕಡೆ ಒಗ್ಗಟ್ಟಿನ ವಿಚಾರದಲ್ಲಿ ವ್ಯತ್ಯಾಸ ಆಗುತ್ತಿದೆ ಎನಿಸುತ್ತಿದೆ. ಕುರುಬ ಸಮಾಜದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಬೇಕಾಗಿದೆ ಎಂದರು.

ಸೊಣ್ಣೇನಹಳ್ಳಿಯಲ್ಲಿ ಆಯೋಜಿಸಿದ್ದ ‘ಕನಕ ಸಂಕೀರ್ಣ’ ಕಟ್ಟಡ ಲೋಕಾರ್ಪಣೆ ಸಮಾರಂಭವನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಿದರು. ಎಚ್‌.ವಿಶ್ವನಾಥ್‌, ಎಚ್‌.ಎಂ.ರೇವಣ್ಣ, ರಘುನಾಥ ಮಲ್ಕಾಪುರೆ ಇತರರಿದ್ದರು.