ಬೆಂಗಳೂರು(ನ.11):  ಸ್ಯಾನಿಟೈಸರ್‌ ಉತ್ಪಾದಿಸುವ ಖಾಸಗಿ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಸುಟ್ಟು ಕರಕಲಾಗಿರುವ ಘಟನೆ ಮೈಸೂರು ರಸ್ತೆ ಸಮೀಪದ ಬಾಪೂಜಿ ನಗರದ ಮುಖ್ಯರಸ್ತೆಯಲ್ಲಿ ಮಂಗಳವಾರ ನಡೆದಿದೆ.

"

ಹೊಸಗುಡ್ಡದಹಳ್ಳಿ ಪ್ರದೇಶದ ಮಹದೇವ ಶಾಲೆ ಹತ್ತಿರದ ‘ರೇಖಾ ರಾಸಾಯನಿಕ ಫ್ಯಾಕ್ಟರಿ’ಯಲ್ಲಿ ದುರಂತ ಸಂಭವಿಸಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಗೋದಾಮಿಗೆ ಕ್ಲೋರೋ ಫಾರಂ ಸೇರಿ ರಾಸಾಯನಿಕ ವಸ್ತುಗಳನ್ನು ವಾಹನಗಳಿಂದ ಇಳಿಸುವ ಈ ವೇಳೆ ಈ ಘಟನೆ ನಡೆದಿದೆ. ಬೆಂಕಿಗೆ ರಾಸಾಯನಿಕ ಕಾರ್ಖಾನೆ ಹಾಗೂ ಅದರ ಪಕ್ಕದ ಎರಡು ಅಂತಸ್ತಿನ ಕಟ್ಟಡಕ್ಕೆ ಹಾನಿಯಾಗಿದೆ. ಏಳು ವಾಹನಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿವೆ. ಓರ್ವ ಕಾರ್ಮಿಕನಿಗೆ ಗಾಯವಾಗಿದೆ.

ಗೋದಾಮಿನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಕೆಲ ಕ್ಷಣಗಳಲ್ಲಿ ಇಡೀ ಕಟ್ಟಡವನ್ನು ಆವರಿಸಿದೆ. ಈ ವೇಳೆ ಕೆಲಸದಲ್ಲಿ ತೊಡಗಿದ್ದ ನಾಲ್ವರು ಕಾರ್ಮಿಕರು, ತಕ್ಷಣವೇ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ದಟ್ಟಹೊಗೆ ಕಂಡು ಆತಂಕ್ಕೀಡಾದ ಸ್ಥಳೀಯರು, ಪೊಲೀಸ್‌ ನಿಯಂತ್ರಣಕ್ಕೆ ಕೊಠಡಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ 10 ವಾಹನಗಳಲ್ಲಿ ಆಗಮಿಸಿದ್ದ ಅಗ್ನಿಶಾಮಕ ದಳ, ದಿನವಿಡೀ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇವಾಲಯಕ್ಕೆ ಹೋಗುತ್ತಿದ್ದಾಗ ನಡುರಸ್ತೆಯಲ್ಲೇ ಹೊತ್ತಿ ಉರಿದ ಓಮ್ನಿ

ನಿರ್ಲಕ್ಷ್ಯವೇ ಘಟನೆ ಕಾರಣ?

ಚಾಮರಾಜಪೇಟೆಯ ಉಮಾ ಚಿತ್ರಮಂದಿರದ ಹತ್ತಿರದ ನಿವಾಸಿ ಕಮಲ ಸಜ್ಜನ್‌ರಾಜ್‌ ಅವರು, ಬೊಮ್ಮಸಂದ್ರದಲ್ಲಿ ‘ರೇಖಾ ಕೆಮಿಕಲ್‌ ಇಂಡಸ್ಟ್ರೀಸ್‌ ಹಾಗೂ ರೇಖಾ ಕೆಮಿಕಲ್‌ ಕಾರ್ಪೋರೇಷನ್‌’ ಹೆಸರಿನ ಕಂಪನಿ ನಡೆಸುತ್ತಿದ್ದಾರೆ. ಮೈಸೂರು ರಸ್ತೆಯ ಬಾಪೂಜಿನಗರದ ಮುಖ್ಯರಸ್ತೆಯಲ್ಲಿ ಗೋದಾಮು ಮಾಡಿದ್ದರು. ಇದರಲ್ಲಿ ಸ್ಯಾನಿಟೈಸರ್‌ ಹಾಗೂ ಟಿನ್ನರ್‌ ತಯಾರಿಕೆಗೆ ಅಗತ್ಯವಾದ ಕ್ಲೋರಾ ಫಾರಂ ಸೇರಿದಂತೆ ಇತರೆ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಲಾಗುತ್ತಿತ್ತು. ಇತ್ತೀಚಿಗೆ ಸ್ಯಾನಿಟೈಸರ್‌ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಕೆಮಿಕಲ್‌ ಶೇಖರಿಸಿದ್ದರು. ಆದರೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅದೇ ರಾಸಾಯನಿಕ ಡಬ್ಬಿಗಳು ಸ್ಫೋಟಗೊಂಡಿದ್ದರಿಂದ ಅಗ್ನಿ ದುರಂತ ಸಂಭವಿಸಲು ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಂದಿನಂತೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಾಲ್ವರು ಕಾರ್ಮಿಕರು, ರಾಸಾಯನಿಕ ವಸ್ತುಗಳನ್ನು ಆನ್‌ಲೋಡ್‌ ಮಾಡುತ್ತಿದ್ದರು. ಆಗ ಬೆಂಕಿ ಕಿಡಿ ತಾಕಿ ರಾಸಾಯನಿಕ ತುಂಬಿದ್ದ ಪೆಟ್ಟಿಗೆಗಳು ಸ್ಫೋಟಗೊಂಡಿವೆ. ಇದರಿಂದ ಕ್ಷಣಾರ್ಧದಲ್ಲಿ ಕಟ್ಟಡವನ್ನು ಅಗ್ನಿ ಜ್ವಾಲೆ ಆವರಿಸಿದೆ. ಆಗ ನೆರೆಹೊರೆಯ ಕಟ್ಟಡಗಳಲ್ಲಿದ್ದ ಜನರಿಗೂ ಆತಂಕ ಉಂಟಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು, ಘಟನಾ ಸ್ಥಳದ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿದ್ದ ಕಟ್ಟಡಗಳ ನೆಲೆಸಿದ್ದ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿದರು. ಇದರಿಂದ ಪ್ರಾಣಹಾನಿ ತಪ್ಪಿದೆ.

ಈ ವೇಳೆ ಬಿಜು ಸಿಂಗ್‌ ಎಂಬುವರಿಗೆ ಗಾಯವಾಗಿದ್ದು, ಆತ ಸುರಕ್ಷಿತವಾಗಿದ್ದಾನೆ. ಕಾರ್ಖಾನೆ ಮುಂದೆ ನಿಲ್ಲಿಸಿದ್ದ ಬೈಕ್‌ ಹಾಗೂ ಕಾರುಗಳಿಗೆ ಬೆಂಕಿ ತಾಕಿ ಸುಟ್ಟು ಹೋಗಿವೆ. ಪೀಠೋಪಕರಣ ಮಳಿಗೆಯಲ್ಲಿನ ವಸ್ತುಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂವರು ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥ

ಈ ಕಾರ್ಯಾಚರಣೆ ವೇಳೆ ಅಸ್ವಸ್ಥರಾದ ಅಗ್ನಿಶಾಮಕ ದಳದ ರೇವಣಸಿದ್ದಪ್ಪ, ಸಿದ್ದೇಗೌಡ ಹಾಗೂ ಸಂಪತ್‌ ರಾಜ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸಿಬ್ಬಂದಿ ಆರೋಗ್ಯ ವಿಚಾರಿಸಿದ ಡಿಜಿಪಿ ಅಮರ್‌ ಕುಮಾರ್‌ ಪಾಂಡೆ, ಅಸ್ವಸ್ಥರಾದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

ಎಷ್ಟೇ ನೀರು ಸುರಿದರೂ ಬೆಂಕಿ ಆರಲಿಲ್ಲ. ಈ ಹಂತದಲ್ಲಿ ಮೂವರು ಸಿಬ್ಬಂದಿ ನಿತ್ರಾಣರಾದರು. ಹೆಚ್ಚುವರಿ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಮುಂದುವರೆಸಿದರು. ಬೆಳಗ್ಗೆ 10 ರಿಂದ ರಾತ್ರಿ 8 ಗಂಟವರೆಗೆ ಸತತ 10 ತಾಸುಗಳು ಕಾರ್ಯಾಚರಣೆ ಬಳಿಕ ಬೆಂಕಿ ನಂದಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನುಮತಿ ಕೊಟ್ಟಿದ್ದು ಯಾರು?

ರಾಸಾಯನಿಕ ಶೇಖರಿಸುವ ಗೋದಾಮಿನ ಸನಿಹದಲ್ಲೇ ಶಾಲೆ ಇದೆ ಹಾಗೂ ಜನರು ನೆಲೆಸಿದ್ದಾರೆ. ಇಂತಹ ಪ್ರದೇಶದಲ್ಲಿ ರಾಸಾಯನಿಕ ಸಂಗ್ರಹಕ್ಕೆ ಅನುಮತಿ ಕೊಟ್ಟವರು ಯಾರು, ಇದೊಂದು ಅಕ್ರಮ ಕಾರ್ಖಾನೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಕಿ ಹತ್ತಿದ್ದು ಹೇಗೆ?

ಗೋದಾಮಿನಲ್ಲಿ ಬ್ಯಾರಲ್‌ನಿಂದ ಮತ್ತೊಂದು ಬ್ಯಾರಲ್‌ಗೆ ಪೈಪ್‌ ಮೂಲಕ ರಾಸಾಯನಿಕ ದ್ರಾವಣವನ್ನು ತುಂಬುತ್ತಿದ್ದರು. ಆ ಹಂತದಲ್ಲಿ ಸ್ಪಾಟಿಕ್‌ ಚಾರ್ಜನಿಂದಾಗಿ ಬೆಂಕಿ ಕಿಡಿಗಳು ಹೊತ್ತಿಕೊಂಡಿದೆ. ಮೈಸೂರು ರಸ್ತೆಯ ಕೈಗಾರಿಕೆಗಳಿಗೆ ಪೂರೈಸಲು ಅವರು ರಾಸಾಯನಿಕ ಶೇಖರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಾಪೂಜಿನಗರ ಮುಖ್ಯರಸ್ತೆಯಲ್ಲಿ ರಾಸಾಯನಿಕ ಶೇಖರಣೆ ಮತ್ತು ಮಾರಾಟಕ್ಕೆ ರೇಖಾ ಕಂಪನಿ ಅನುಮತಿ ಪಡೆದಿರಲಿಲ್ಲ. ಸ್ಯಾನಿಟೈಸರ್‌ ಅನ್ನು ಬಯೋಕಾನ್‌ಗೆ ಪೂರೈಸಲಾಗುತ್ತಿತ್ತು ಎಂದು ಕಾರ್ಮಿಕರು ಹೇಳಿದ್ದಾರೆ. ಗೋದಾಮಿಗೆ 210 ಲೀಟರ್‌ ಬ್ಯಾರಲ್‌ ರಾಸಾಯನಿಕ ದ್ರಾವಣವನ್ನು ಸಾಗಿಸುತ್ತಿದ್ದರು. ಅದನ್ನು ಸಗಟು ದರದಲ್ಲಿ ಅವರು ಮಾರುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಕಂಪನಿ ಬಳಿ ಒಂದು ಸಾವಿರ ಬ್ಯಾರಲ್‌ ಕೆಮಿಕಲ್‌ ಇತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.  

ಮನೆ ಹತ್ತಿರದ ಕಟ್ಟಡದಲ್ಲಿ ದಟ್ಟಹೊಗೆ ಕಂಡು ಭಯವಾಯಿತು. ಕೂಡಲೇ ಅಲ್ಲಿಂದ ದೂರ ಹೋಗಿ ನಿಂತೆವು. ಹೇಳಲಾಗದಷ್ಟುಭೀಕರ ಅಗ್ನಿ ಜ್ವಾಲೆ ಇತ್ತು ಎಂದು ಸ್ಥಳೀಯ ನಿವಾಸಿ ರಾಧಮ್ಮ ತಿಳಿಸಿದ್ದಾರೆ. 
ಗೋದಾಮಿನ ಪಕ್ಕದ ಕಟ್ಟಡದಲ್ಲಿ ಪೀಠೋಪಕರಣ ಸಂಗ್ರಹಿಸಿಟ್ಟಿದ್ದೆ. ಆ ಕಟ್ಟಡಕ್ಕೆ ಕಾಣಿಸಿಕೊಂಡ ಬೆಂಕಿ ನಮ್ಮ ಮಳಿಗೆ ಹಬ್ಬಿದೆ. ಇದರಿಂದ ವಿವಿಧ ಬಗೆಯ 300 ಪೀಠೋಪಕರಣಗಳು ಅಗ್ನಿ ಆಹುತಿಯಾಗಿ ಲಕ್ಷಾಂತರ ನಷ್ಟವಾಗಿದೆ ಎಂದು ಪೀಠೋಪಕರಣ ವ್ಯಾಪಾರಿ ಮಣಿ ಹೇಳಿದ್ದಾರೆ.