ಖೊಟ್ಟಿ ದಾಖಲೆ ಸೃಷ್ಟಿ: ಬೆಳಗಾವಿ ಡಿಸಿ, ತಹಸೀಲ್ದಾರ್‌ ವಿರುದ್ಧ FIR

*  ಮೃತ ವ್ಯಕ್ತಿಯ ಖೊಟ್ಟಿ ಸಹಿ ಮಾಡಿ ಎಂಟು ಎಕರೆ 34 ಗುಂಟೆ ಕೃಷಿ ಜಮೀನನ್ನು ಎನ್‌ಎ ಮಾಡಿದ ಆರೋಪ
*  ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸೂಕ್ತ ತನಿಖೆ ನಡೆಸುವಲ್ಲಿ ವಿಫಲ
*  ಪರ-ವಿರೋಧದ ವಾದಗಳಿಗೆ ಮಹತ್ವದ ತಿರುವು 
 

FIR against Belagavi DC, Tahsildar For Created Duplicate Documents grg

ಬೆಳಗಾವಿ(ಏ.27):  ಖೊಟ್ಟಿ ದಾಖಲೆ ಸೃಷ್ಟಿಸಿ ಬೆಳಗಾವಿಯ(Belagavi) ಗಾಂಧಿನಗರದ ಬಳಿ ಸುಮಾರು 8 ಎಕರೆ 34 ಗುಂಟೆ ಕೃಷಿ ಜಮೀನನ್ನು ಎನ್‌ಎ (ಬಿನ್‌ ಶೇತ್ಕಿ) ಆಗಿ ಪರಿವರ್ತನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾಧಿಕಾರಿ, ತಹಸೀಲ್ದಾರ್‌, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ, ಜೈಕಿಸಾನ್‌ ಸಗಟು ತರಕಾರಿ ಮಾರುಕಟ್ಟೆ ಪದಾಧಿಕಾರಿಗಳ ವಿರುದ್ಧ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಧಾರವಾಡ ಉಚ್ಚ ನ್ಯಾಯಾಲಯದ(High Court of Karnataka, Dharwad Bench) ನಿರ್ದೇಶನದ ಅನ್ವಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತರಕಾರಿ ಮಾರುಕಟ್ಟೆವಿರುದ್ಧ ನಿರಂತರ ಧರಣಿ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ಸಿದಗೌಡ ಮೋದಗಿ ಅವರು ಈ ಕುರಿತಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಮೇಲ್ನೋಟಕ್ಕೆ ದಾಖಲೆಗಳು ಖೊಟ್ಟಿ ಎಂಬುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆಗಾಗಿ ದೂರು ದಾಖಲಿಸಿಕೊಳ್ಳಲು ನ್ಯಾಯಾಲಯವು ಪೊಲೀಸ್‌(Police) ಇಲಾಖೆಗೆ ನಿರ್ದೇಶನ ನೀಡಿದೆ. ಈ ಮೂಲಕ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಕುರಿತಾದ ಪರ-ವಿರೋಧದ ವಾದಗಳಿಗೆ ಮಹತ್ವದ ತಿರುವು ಸಿಕ್ಕಂತಾಗಿದೆ.

ಆದಿವಾಸಿ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ: ಬಿಜೆಪಿ ಮುಖಂಡ ಸೇರಿ 9 ಮಂದಿ ವಿರುದ್ಧ ಎಫ್‌ಐಆರ್‌

ಜಮೀನಿನ ಮೂಲ ಮಾಲೀಕ ಬಸಲಿಂಗಪ್ಪ ಭಾವಿ ಅವರು 21 ನವೆಂಬರ್‌ 2011 ರಂದು ಮೃತಪಟ್ಟಿದ್ದಾರೆ(Death). ಆದರೆ 2015ರಲ್ಲಿ ಸಗಟು ಮಾರುಕಟ್ಟೆಯ ಪದಾಧಿಕಾರಿಗಳು ಜಮೀನಿನ ಮಾಲೀಕ ಬದುಕಿದ್ದಾನೆಂದು ಬಿಂಬಿಸಿ, ಆತನ ಖೊಟ್ಟಿ ಹಸ್ತಾಕ್ಷರ ಮಾಡುವ ಮೂಲಕ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಎನ್‌ಎ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. 26 ಜೂನ್‌ 2015 ರಂದು ಮೃತರ ಹೆಸರಿನಲ್ಲಿ ಅಫಿಡವಿಟ್‌ ಮಾಡಿ ಅರ್ಜಿ ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಜಮೀನನ್ನು ಎನ್‌ಎ ಆಗಿ ಪರಿವರ್ತಿಸಿ ವಾಣಿಜ್ಯ ಬಳಕೆಗೆ ಅನುಮತಿ ನೀಡಿದರು. ಖೊಟ್ಟಿದಾಖಲೆಗಳನ್ನು ಸೃಷ್ಟಿಸಿಯೇ ಲೇಔಟ್‌ ಮತ್ತು ನಕಾಶೆ ತಯಾರು ಮಾಡಲಾಗಿದೆ ಎಂದು ಸಿದಗೌಡ ಮೋದಗಿ ಆರೋಪಿಸಿದ್ದಾರೆ. ಆದರೆ, ಈ ಜಮೀನಿನ ಮೃತ ಮಾಲೀಕ ಬಸಲಿಂಗಪ್ಪ ಭಾವಿ ಅವರ ಸಂಬಂಧಿಕರಿದ್ದರೂ, ಈವರೆಗೂ ಈ ವಿಚಾರವಾಗಿ ಯಾವುದೇ ತಕರಾರು ತೆಗೆದಿಲ್ಲ ಎಂದು ಹೇಳಲಾಗಿದೆ.

ಸರ್ವೆ ನಂ.677,678, 686/1, 685/2, 696/1, 697/2, 698/1 ಮತ್ತು 698/2 ಹೀಗೆ ಒಟ್ಟು ವಿಸ್ತೀರ್ಣ 8 ಎಕರೆ 34 ಗುಂಟೆಯ ಮಾಲೀಕರಾದ ದಿವಾಕರ ಪಾಟೀಲ, ಕರೀಂಸಾಬ್‌ ಬಾಗವಾನ್‌, ರಾಮ ನಾಗೇಶ ಹಾವಳ, ಉಮೇಶ ಕಲ್ಲಪ್ಪ ಪಾಟೀಲ ಹಾಗೂ ಇತರೆ ಪದಾಧಿಕಾರಿಗಳಾದ ಜೈಕಿಸಾನ ಹೋಲಸೇಲ್‌ ವೆಜಿಟೇಬಲ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಬೆಳಗಾವಿ ಹಾಗೂ ಅಂದಿನ ಜಿಲ್ಲಾಧಿಕಾರಿ, ತಹಸೀಲ್ದಾರ್‌, ಬುಡಾ ಅಧಿಕಾರಿಗಳು ಭೂ ಬಳಕೆ ಬದಲಾವಣೆ ಅರ್ಜಿ ಪ್ರಮಾಣ ಪತ್ರದಂತಹ ಪ್ರಮುಖ ದಾಖಲೆಗಳಲ್ಲಿ ನಕಲಿ ಸಹಿ ಮಾಡಿ, ನಕಲಿ ದಾಖಲೆ(Duplicate Records) ಸೃಷ್ಟಿಸಿದ್ದಾರೆ. ಇವರೆಲ್ಲರ ಸಹಕಾರ ಮತ್ತು ಒಪ್ಪಂದದ ಪ್ರಕಾರ ಲೇಔಟ್‌ ನಕ್ಷೆ, ತಾತ್ಕಾಲಿಕ ನಿರ್ಮಾಣ ಅನುಮತಿ ಮತ್ತು ಇತರೆ ಹಲವು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ಆಗ್ರಾದ ರಸ್ತೆಯಲ್ಲಿ ನಮಾಜ್, 150 ಜನರ ವಿರುದ್ಧ ಎಫ್ ಐಆರ್!

ಈ ಜಮೀನಿಗೆ ಬಸಲಿಂಗಪ್ಪ ಸಿದ್ದನಯಕಪ್ಪ ಭಾವಿ ಮಾಲೀಕರಾಗಿದ್ದು, ಇವರು 29.11.2011ರಂದು ನಿಧನರಾಗಿದ್ದಾರೆ. ಜೈ ಕಿಸಾನ್‌ ಹೋಲಸೆಲ್‌ ವೆಜಿಟೆಬಲ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ವ್ಯಾಪಾರಿ ಸಂಘದ ಪದಾಧಿಕಾರಿಗಳು, ಖಾಸಗಿ ತರಕಾರಿ ಮಾರುಕಟ್ಟೆ ಸ್ಥಾಪಿಸುವ ಉದ್ದೇಶದಿಂದ ಗಾಂಧಿ ನಗರದಲ್ಲಿರುವ ದಿ. ಬಸಲಿಂಗಪ್ಪ ಭಾವಿ ಅವರ ನಕಲಿ ಸಹಿ ಮಾಡಿ ಯಾಮಾರಿಸಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಮೃತ ಮಾಲೀಕ ಬದುಕಿರುವಂತೆ ತೋರಿಸಿ ಸರ್ವೆ ನಂ.698/1ರ ಭೂ ಪರಿವರ್ತನಾ ಬದಲಾವಣೆಗೆ ಜಿಲ್ಲಾಧಿಕಾರಿಗೆ 25.11.2015ರಂದು ಅರ್ಜಿ ಸಲ್ಲಿಸಲಾಗಿದೆ. ಖಾಸಗಿ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಅನುಮತಿ ಮತ್ತು ಭೂ ಪರಿವರ್ತನೆ ಮತ್ತು ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ಮೃತ ಬಸಲಿಂಗಪ್ಪ ಭಾವಿ ಅವರ ನಕಲಿ ಸಹಿಯನ್ನು ಸಾಮೂಹಿಕವಾಗಿ ತಪ್ಪಾಗಿಸುವ ಮೂಲಕ ದುರ್ಬಳಕೆ ಮಾಡಿಕೊಂಡಿದ್ದಾರೆ. 26.5.2015ರಂದು ಮೃತ ಬಸಲಿಂಗಪ್ಪ ಅವರ ಹೆಸರಿನಲ್ಲಿ ಅಫಿಡವಿಟ್‌ ಸಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಂದಿನ ಜಿಲ್ಲಾಧಿಕಾರಿ ಕೃಷಿಯೇತರ ಜಮೀನನ್ನು ಭೂ ಪರಿವರ್ತನೆ ಮಾಡಿ ವಾಣಿಜ್ಯ ಉದ್ದೇಶಕ್ಕೆ ಬದಲಾಯಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ನಕಲಿ ದಾಖಲೆಗಳ ಆಧಾರದ ಮೇಲೆ ಲೇಔಟ್‌ ನಕ್ಷೆಯನ್ನು ಸಹ ಸಿದ್ಧಪಡಿಸಲಾಗಿದೆ. ಲೇಔಟ್‌ ನಕ್ಷೆಯಲ್ಲೂ ಮೃತ ಬಸಲಿಂಗಪ್ಪ ಭಾವಿ ಅವರ ಸಹಿಯಿದೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸೂಕ್ತ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಅಂದಿನ ತಹಸೀಲ್ದಾರ್‌ ಜೈ ಕಿಸಾನ್‌ ಹೋಲಸೆಲ್‌ ವೆಜಿಟೆಬಲ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಸಂಘದ ಪದಾಧಿಕಾರಿಗಳು ಮತ್ತು ಇತರರು ಪದಾಧಿಕಾರಿಗಳೊಂದಿಗೆ ಶಾಮೀಲಾಗಿ ಜಿಲ್ಲಾಧಿಕಾರಿ ಮುಂದೆಯೇ 10.9.2015 ರಂದು ಸುಳ್ಳು ವರದಿ ಸಲ್ಲಿಸಿದ್ದಾರೆ. ಈ ವ್ಯಕ್ತಿಗಳು ಸುಳ್ಳು ದಾಖಲೆಗಳು, ಸುಳ್ಳು ಅಫಿಡವಿಟ್‌ ಸಲ್ಲಿಸಿ, ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಿದಗೌಡ ಮೋದಗಿ ಆರೋಪಿಸಿದ್ದಾರೆ.
 

Latest Videos
Follow Us:
Download App:
  • android
  • ios