ಮಯೂರ ಹೆಗಡೆ

ಹುಬ್ಬಳ್ಳಿ(ಆ.03): ಏಷ್ಯಾದಲ್ಲೇ ಅತಿ ದೊಡ್ಡ ಎಪಿಎಂಸಿ ಎಂಬ ಖ್ಯಾತಿಯಿರುವ ಇಲ್ಲಿನ ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಬಿಲ್‌ ಕಟ್ಟಲೂ ಕಷ್ಟವಾಗುವಂತ ಆರ್ಥಿಕ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.

ಈಗಾಗಲೆ ಎಪಿಎಂಸಿ ಸಮಿತಿ ಶುಲ್ಕವನ್ನು ಶೇ. 35 ಪೈಸೆಗೆ ಇಳಿಸಿರುವ ಸರ್ಕಾರದ ನಿರ್ಧಾರ ಹಾಗೂ ಸಂಪೂರ್ಣ ಎಪಿಎಂಸಿ ಶುಲ್ಕವನ್ನು ಕೈಬಿಡುವಂತೆ ಬೇಡಿಕೆ ಇರುವುದೇ ಈ ಆತಂಕಕ್ಕೆ ಕಾರಣ. ಇದರಿಂದ ಇಲ್ಲಿನ ಎಪಿಎಂಸಿಯಿಂದ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯ, ರೈತರ ಕಲ್ಯಾಣ ಯೋಜನೆಗಳು, ಮಾತ್ರವಲ್ಲದೆ ಎಪಿಎಂಸಿ ನಿರ್ವಹಣೆಯೂ ಕೂಡ ಕಷ್ಟವಾಗುವಂತ ಸಾಧ್ಯತೆ ಇದೆ.

ಇಲ್ಲಿ ಸರಿಸುಮಾರು 2 ಸಾವಿರ ಪರವಾನಗಿ ಹೊಂದಿದ ದಲ್ಲಾಳಿ, ಏಜೆನ್ಸಿ, ಖರೀದಿದಾರರು ಇದ್ದಾರೆ. ಕಳೆದ 2019-20ರಲ್ಲಿ ಎಪಿಎಂಸಿಯಲ್ಲಿ ಬಳಕೆದಾರರದ್ದು 608.90 ಕೋಟಿ ಮೌಲ್ಯದ ವಹಿವಾಟಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಬಳಕೆದಾರರ ಶುಲ್ಕ 9.13 ಕೋಟಿ ಆದಾಯ ಎಪಿಎಂಸಿಗೆ ಬೊಕ್ಕಸಕ್ಕೆ ದಕ್ಕಿದೆ. ತರಕಾರಿ ವ್ಯಾಪಾರ 405 ಕೋಟಿ ಮೌಲ್ಯದ ವಹಿವಾಟು ಅಂದಾಜಿಸಿದ್ದು, ಇದರಿಂದ 4.5 ಕೋಟಿ ಸೇರಿ ಒಟ್ಟೂ 13.18 ಕೋಟಿ ಆದಾಯ ಎಪಿಎಂಸಿಗೆ ಬಂದಿದೆ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಸವರಾಜ ನೇಸರ್ಗಿ ತಿಳಿಸಿದ್ದಾರೆ.

ಹುಬ್ಬಳ್ಳಿ: ಗೋಕುಲ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶೆಟ್ಟರ್‌

ಇದರಲ್ಲಿ ಶೇ. 60ರಷ್ಟು ಮೊತ್ತ ಸರ್ಕಾರಕ್ಕೆ ಸೇರುತ್ತದೆ. ಕೃಷಿ ವಿವಿ, ರಾಜ್ಯ ಸಂಚಿತ ನಿಧಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸೇರಿ ಸರ್ಕಾರದ ವಿವಿಧ ಯೋಜನೆ ಕಡಿತವಾಗಿ ಎಪಿಎಂಸಿಗೆ ಸುಮಾರು 6.50 ಕೋಟಿ ಮಾತ್ರ ಸಿಗುತ್ತದೆ. ಈ ಮೊತ್ತದಲ್ಲಿ ಎಪಿಎಂಸಿ ನಿರ್ವಹಣೆ, ಯೋಜನೆಗಳ ಅನುಷ್ಠಾನ ಸಾಧ್ಯವಿತ್ತು. ಆದರೆ ಈಗ ಶುಲ್ಕವನ್ನು ಶೇ. 35 ಪೈಸೆಗೆ ಇಳಿಸಿರುವ ಕಾರಣ ಶೇ. 65 ರಷ್ಟು ಆದಾಯಕ್ಕೆ ಕತ್ತರಿ ಬೀಳುತ್ತದೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ಧನಗೌಡ್ರ ಅಭಿಪ್ರಾಯ ಪಡುತ್ತಾರೆ.

ನಿರ್ವಹಣೆಯೇ ದುಸ್ತರ

ಎಪಿಎಂಸಿ ನಿರ್ವಹಣೆಗೂ ಸರ್ಕಾರದಿಂದ ಯಾವುದೆ ಅನುದಾನ ಬರಲ್ಲ. 434 ಎಕರೆ ವ್ಯಾಪ್ತಿಯ ಅಮರಗೋಳ ಎಪಿಎಂಸಿಗೆ ಪ್ರತಿ ತಿಂಗಳು 4 ರಿಂದ  5 ಲಕ್ಷ ವಿದ್ಯುತ್‌ ಬಿಲ್‌ ಬರುತ್ತದೆ. ವಾರ್ಷಿಕ ಸರಿ ಸುಮಾರು 50 ಲಕ್ಷ ವರೆಗೆ ತಲುಪುತ್ತದೆ. ತರಕಾರಿ ಮಾರುಕಟ್ಟೆಸ್ವಚ್ಛತಾ ಕಾರ್ಯಕ್ಕೆ 2.50 ಲಕ್ಷ ಬಿಲ್‌ ಆಗುತ್ತದೆ. ಇನ್ನು ಎಪಿಎಂಸಿ ಭದ್ರತಾ ಸಿಬ್ಬಂದಿ ಸಂಬಳ, ಅಧ್ಯಕ್ಷ ಉಪಾಧ್ಯಕ್ಷರ ಸಂಚಾರ ಭತ್ಯೆ, ಒಂದೆರಡು ತಿಂಗಳಿಗೆ ನಡೆಯುವ ಸಭೆಗೆ ಆಗಮಿಸುವ ಸದಸ್ಯರಿಗೆ ಭತ್ಯೆ ಇವೆಲ್ಲ ಸೇರಿ ವಾರ್ಷಿಕ 1 ರಿಂದ 1.50 ಕೋಟಿ ಮೊತ್ತ ನಿರ್ವಹಣೆಗೆ ಸಂದಾಯವಾಗುತ್ತದೆ. ಶುಲ್ಕ ಇಳಿಕೆಯಿಂದ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಬಿಲ್‌ ಭರಿಸಲು ಸಮಸ್ಯೆ ಆಗುವ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ಅಧ್ಯಕ್ಷ ಸಹದೇವಪ್ಪ ಸುಡಕೇನವರ.

ಯಾವ್ಯಾವ ಯೋಜನೆಗೆ ತೊಂದರೆ

ಎಪಿಎಂಸಿ ಆದಾಯದಲ್ಲಿ ಕೆಲವನ್ನು ರೈತ ಕಲ್ಯಾಣ ಯೋಜನೆಗಳಿಗೆ ಮೀಸಲಾಗಿದೆ. ರೈತ ಹಾವು ಕಡಿದು ಅಥವಾ ಇನ್ನಿತರೆ ಕಾರಣದಿಂದ ಆಕಸ್ಮಿಕ ನಿಧನರಾದರೆ ‘ರೈತ ಸಂಜೀವಿನಿ’ ಯೋಜನೆಯಡಿ 1 ಲಕ್ಷ ಮೊತ್ತವನ್ನು ಎಪಿಎಂಸಿ ನೀಡಬೇಕು. ‘60-ಸಿ ಆ್ಯಕ್ಟ್’ನಡಿ ಎಪಿಎಂಸಿ ಪ್ರಾಂಗಣದ ಹೊರಗೆ ಎಪಿಎಂಸಿ ರೈತ ಕಲ್ಯಾಣ ಯೋಜನೆ ಕೈಗೊಳ್ಳುತ್ತದೆ. ಅಂದರೆ ಎಪಿಎಂಸಿ ಸದಸ್ಯರ ಕ್ಷೇತ್ರ ಅಭಿವೃದ್ಧಿ ಕಾರ್ಯಕ್ಕೆ ಸುಮಾರು 60 ಲಕ್ಷ ಮೀಸಲಿಡಲಾಗಿರುತ್ತದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿರುವ 17 ಸದಸ್ಯರು ತಲಾ 3 ರಿಂದ 3.50 ಲಕ್ಷ ನಷ್ಟುಕಾಮಗಾರಿ ಕೈಗೊಳ್ಳಲು ಶಿಫಾರಸು ಮಾಡಿ ಕಾಮಗಾರಿ ಕೈಗೊಳ್ಳಬಹುದಾಗಿದೆ. ರೈತರ ಹೊಲಕ್ಕೆ ತೆರಳಲು ಕಚ್ಚಾ ರಸ್ತೆ ರೂಪಿಸುವುದು ಸೇರಿ ಇತರ ಕಾರ್ಯಗಳು ಈ ಹಣದಲ್ಲಿ ಮಾಡಲಾಗುತ್ತದೆ. ಅನುದಾನ ಕಡಿತದಿಂದ ರೈತರೇ ನಡೆಸುವ ನೇರ ಮಾರುಕಟ್ಟೆ ‘ರೈತಸಂತೆ’ಗಾಗಿ ಕೈಗೊಳ್ಳುವ ಅಭಿವೃದ್ಧಿಗೂ ತೊಂದರೆ ಆಗಲಿದೆ’ ಎಂದು ಮಾಜಿ ಅಧ್ಯಕ್ಷ ಜಗನ್ನಾಥಗೌಡ ಹೇಳುತ್ತಾರೆ.

ಶುಲ್ಕ ಇಳಿಕೆಯಿಂದ ಎಪಿಎಂಸಿ ಅದಾಯ ಕುಂಠಿತವಾಗಿ ಯೋಜನೆ ಜಾರಿ ಒತ್ತಟ್ಟಿಗಿರಲಿ, ಎಪಿಎಂಸಿ ನಿರ್ವಹಣೆಯೆ ಕಷ್ಟವಾಗಲಿದೆ. ಹೀಗಾಗಿ ಶೀಘ್ರವೆ ಎಪಿಎಂಸಿ ಹಮಾಲರು, ರೈತರು ಸೇರಿದಂತೆ ಎಲ್ಲರನ್ನೂ ಒಳಗೊಂಡು ಸಭೆ ನಡೆಸಿ ಸಾಧಕ ಬಾಧಕ ಚರ್ಚಿಸಿ ಸರ್ಕಾರಕ್ಕೆ ಎಪಿಎಂಸಿ ಉಳಿಸಲು ಕ್ರಮಕ್ಕಾಗಿ ಮನವಿ ಸಲ್ಲಿಸುತ್ತೇವೆ ಎಂದು ಅಮರಗೋಳ ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಅವರು ತಿಳಿಸಿದ್ದಾರೆ.