ಬೆಂಗ​ಳೂರು(ಅ.13): ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಪ್ರವಾಹದಾತಂಕ ಕಾಣಿಸಿಕೊಂಡಿದೆ. ಡೋಣಿ, ಘಟಪ್ರಭಾ, ಮಲಪ್ರಭಾ, ಕಾಗಿಣಾ ನದಿಗಳು, ಬೆಣ್ಣಿಹಳ್ಳ, ಹಿರೇಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧೆಡೆ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಮಳೆಯಬ್ಬರಕ್ಕೆ 200ಕ್ಕೂ ಹೆಚ್ಚು ಮನೆಗಳು ಕುಸಿದುಬಿದ್ದಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ.

ಕಲಬುರಗಿಯ ಶಹಾಬಾದ್‌ನಲ್ಲಿ ಹಳ್ಳ ದಾಟಲು ಹೋಗಿ ಬಾಲಕರಿಬ್ಬರು ನೀರುಪಾಲಾದ ದುರಂತದ ಬೆನ್ನಲ್ಲೇ ಸೀತಾಫಲ ಹಣ್ಣು ತರಲೆಂದು ಗುಡ್ಡಕ್ಕೆಹೋಗಿದ್ದ ಹೋಗಿದ್ದ ಮಹಿಳೆ ಶಾಂತಾಬಾಯಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೆ, ಬೆಳಗಾವಿಯಲ್ಲಿ ಗ್ಯಾರೇಜ್‌ ಕುಸಿದು ಬಿದ್ದು ಅಸ್ಲಂ ಮೀರಾಸಾಬ್‌ ಅಲ್ಲಾಖಾನ್‌ (52) ಮೃತಪಟ್ಟಿದ್ದಾರೆ.

ಕುಸಿದ ಕೋಟೆ, ದೇಗುಲಕ್ಕೆ ಜಲದಿಗ್ಬಂಧನ: ಬೆಳಗಾವಿ ಜಿಲ್ಲೆಯಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಸವದತ್ತಿ ಪಟ್ಟಣದಲ್ಲಿರುವ 18ನೇ ಶತಮಾನದ ಕೋಟೆಯ ಒಂದು ಭಾಗ ಕುಸಿದು ಬಿದ್ದಿದೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ಬಬಲೇಶ್ವರ ತಾಲೂಕಿನಲ್ಲಿ ನಾಲ್ಕೈದು ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಬಾಗಲಕೋಟೆಯಲ್ಲಿ ಮಲಪ್ರಭಾ, ಘಟಪ್ರಭಾ ಪ್ರವಾಹದಿಂದಾಗಿ ಮಾಚಕನೂರಿನ ಹೊಳೆಬಸವೇಶ್ವರ, ಸಂಗಮನಾಥ ಸೇರಿ ನದಿತಟದ ಹಲವು ದೇಗುಲಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಯಾದಗಿರಿ, ರಾಯಚೂರು ನಗರದ ಸಿಯಾತಲಾಬ್‌ ಬಡಾವಣೆ ಸೇರಿ ಹಲವು ಸ್ಲಂ ಏರಿಯಾಗಳು, ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಬಾಗಲಕೋಟೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಬೆಳೆಗಳು; ರೈತನ ಕಣ್ಣೀರು

ನಿರಂತರ ಮಳೆಯಿಂದಾಗಿ ಕಲಬುರಗಿಯ ಆಳಂದ, ಅಫಜಲಪುರ, ಕಮಲಾಪುರ, ಚಿಂಚೋಳಿ, ಸೇಡಂ, ಚಿತ್ತಾಪುರ ತಾಲೂಕಿನ ಹಲವೆಡೆ ನೂರಾರು ಎಕರೆ ಪ್ರದೇಶ ಜಲಾವೃತವಾಗಿದೆ. ಬಳ್ಳಾರಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಸಿರುಗುಪ್ಪದಲ್ಲಿ ರಾರಾವಿ ಬಳಿ ನಿರ್ಮಿಸಿದ್ದ ಸಂಪರ್ಕ ಸೇತುವೆಯೊಂದು ಕೊಚ್ಚಿ ಹೋಗಿದೆ. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಗದಗ, ಧಾರವಾಡ ಹಾಗೂ ಮಲೆನಾಡಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ.
ಜೀವ ಉಳಿಸಿದ ಮೊಬೈಲ್‌ ಕರೆ

ವಿಜಯಪುರದ ಅತ್ತಾಲಟ್ಟಿಗ್ರಾಮದಲ್ಲಿ ಹಳ್ಳದಾಟುವಾಗ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯೊಬ್ಬ ಮೊಬೈಲ್‌ ಕರೆ ಮಾಡಿ ಜೀವ ಉಳಿಸಿಕೊಂಡಿದ್ದಾನೆ. ಬಂದೇನವಾಜ ಮೊಕಾಶಿ ಎಂಬ ವ್ಯಕ್ತಿ ತುಂಬಿ ಹರಿಯುತ್ತಿದ ಹಳ್ಳದಾಟುತ್ತಿದ್ದಾಗ ಪ್ರವಾಹದ ಆರ್ಭಟಕ್ಕೆ ಸೋಮವಾರ ಸುಮಾರು 200 ಮೀಟರ್‌ ಕೊಚ್ಚಿಕೊಂಡು ಹೋಗಿದ್ದಾರೆ. ಹೀಗೆ ಕೊಚ್ಚಿಕೊಂಡು ಹೋಗುವಾಗ ಹುಲ್ಲುಕಡ್ಡಿ ಹಿಡಿದುಕೊಂಡು ನೀರಿನ ಮಧ್ಯೆ ಜೀವ ಉಳಿಸಿಕೊಂಡಿದ್ದ ಅವರು ಅಲ್ಲಿಂದಲೇ ಮೊಬೈಲ್‌ ಕರೆ ಮಾಡಿ ಆತ್ಮೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಸ್ಥಳೀಯರು ಮೊಕಾಜಿ ಅವರನ್ನು ರಕ್ಷಿಸಿದ್ದಾರೆ.