Asianet Suvarna News Asianet Suvarna News

ಹೊರಗೆ ಹೋದ್ರೆ ಕೊರೋನಾ ಭಯ, ಮನೆಯಲ್ಲಿದ್ದರೆ ಭೂ ಕುಸಿತದ ಭೀತಿ!

ತೀವ್ರ ಆತಂಕದಲ್ಲಿದ್ದಾರೆ ನರಗುಂದ ಪಟ್ಟಣದ ಜನತೆ, ನಿನ್ನೆ ಎರಡು ಕಡೆ ಭೂಕುಸಿತ| ನರಗುಂದ ಪಟ್ಟಣದಲ್ಲಿ ಕಳೆದ 6 ತಿಂಗಳಲ್ಲಿ 45 ಮನೆ ಮತ್ತು ಹಿತ್ತಲ ಜಾಗ ಕುಸಿತ| ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು: ಸಚಿವ ಸಿ.ಸಿ. ಪಾಟೀಲ|

Fear of land Slide in Naragund in Gadag District
Author
Bengaluru, First Published Mar 28, 2020, 7:14 AM IST

ಶಿವಕುಮಾರ ಕುಷ್ಟಗಿ

ಗದಗ(ಮಾ.28): ಕೊರೋನಾ ಮಹಾಮಾರಿಯಿಂದ ಪಾರಾಗಲು ಪ್ರಧಾನಿ ಮೋದಿ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ವಿನಂತಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಆದರೆ, ಜಿಲ್ಲೆಯ ನರಗುಂದ ಪಟ್ಟಣದ ಜನತೆಗೆ ದೇವರ ಅದೆಂತಹ ಆತಂಕ ಸೃಷ್ಟಿಸಿದ್ದಾನೆ ಎಂದರೆ ಹೊರಗಡೆ ಹೋದರೆ ಕೊರೋನಾ ಮನೆಯಲ್ಲಿಯೇ ಇದ್ದರೆ ಮನೆ ಕುಸಿದ ಭೀತಿ.

ಈ ರೀತಿಯ ವಿಷಮ ಪರಿಸ್ಥಿತಿಯಲ್ಲಿ ನರಗುಂದ ಪಟ್ಟಣದ ಜನತೆ ಕಾಲ ಕಳೆಯುವಂತಾಗಿದೆ. ಅದರಲ್ಲೂ 21 ದಿನ ಲಾಕ್‌ಡೌನ್‌ ಮಾಡಿದ ನಂತರವಂತೂ ಮನೆಯಲ್ಲಿಯೇ ಕುಳಿತುಕೊಳ್ಳುವುದು ಅನಿವಾರ್ಯ. ಆದರೆ, ಯಾವ ಕ್ಷಣದಲ್ಲಿ ಮನೆಯ ಯಾವ ಭಾಗ ಕುಸಿದು, ಯಾವುದೇ ಸಂದರ್ಭದಲ್ಲಿ 25 ಅಡಿ ಆಳಕ್ಕೆ ಬೀಳುತ್ತೇವೆ ಎನ್ನುವ ಕ್ಷಣ-ಕ್ಷಣದ ದುಗುಡವನ್ನು ಜನರು ಎದುರಿಸುತ್ತಿದ್ದಾರೆ.

ನರಗುಂದ: ಭೂಕುಸಿತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗ್ತಿಲ್ಲ, ಆತಂಕದಲ್ಲಿ ಜನತೆ

ನರಗುಂದ ಪಟ್ಟಣದಲ್ಲಿ ಕಳೆದ 6 ತಿಂಗಳಲ್ಲಿ 45 ಮನೆ ಮತ್ತು ಹಿತ್ತಲ ಜಾಗ ಕುಸಿದಿದ್ದು, ಅಂತರ್ಜಲ ಹೆಚ್ಚಳವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಶುಕ್ರವಾರ ಬೆಳಗಿನ ಜಾವ ನರಗುಂದ ಪಟ್ಟಣದ ಶಂಕರಲಿಂಗ ದೇವಸ್ಥಾನದ ಹತ್ತಿರವಿರುವ ರಾಚಪ್ಪ ಸುಣ್ಣಳಾ ಅವರ ಪತ್ನಿ ಬೆಳಗ್ಗೆ ಅಡುಗೆ ಮನೆ ಕಸಗುಡಿಸುವ ಸಮಯದಲ್ಲಿ ದಿಢೀರ್‌ ಭೂಮಿ ಕುಸಿದಿದ್ದು, ಭೂ ಕುಸಿತದಲ್ಲಿ ಕಸ್ತೂರೆವ್ವ 15 ಅಡಿಗೂ ಹೆಚ್ಚು ಆಳದಲ್ಲಿ ಸಿಲುಕಿಕೊಂಡಿದ್ದರು. ಅವರ ಪತಿಯೇ ಅವರನ್ನು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ. ಇನ್ನು ಹದಕಟ್ಟೆ ಓಣಿಯ ಶಂಕರಗೌಡ ಪಾಟೀಲ ಅವರ ಮನೆಯಲ್ಲೂ ಕುಸಿತವಾಗಿದ್ದು, ಆ ಮನೆಗಳಿಗೆ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಮನೆಯವರಿಗೆ ಧೈರ್ಯ ಹೇಳಿ ಈ ಭೂಸಿತದಿಂದ ಆದ ಗುಂಡಿಗಳನ್ನು ಮುಚ್ಚುವ ಕ್ರಮ ತೆಗೆದುಕೊಂಡಿದ್ದಾರೆ.

ನರಗುಂದದಲ್ಲಿ ದಿಢೀರ್‌ ಭೂ ಕುಸಿತ: ನಿದ್ದೇ ಮಾಡೋಕು ಭಯ ಪಡ್ತಿದ್ದಾರೆ ಜನ!

ಅಂತರ್ಜಲ ಹೆಚ್ಚಳದಿಂದಾಗಿ ಭೂಕುಸಿತವಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೇರಳ, ಬೆಂಗಳೂರು, ಗದಗ, ಕೊಪ್ಪಳ ಸೇರಿದಂತೆ ಹಲವಾರು ಭೂ ವಿಜ್ಞಾನಿಗಳನ್ನು ನರಗುಂದಕ್ಕೆ ಕರೆಯಿಸಿ ಭೂ ಕುಸಿತಕ್ಕೆ ನಿಖರವಾದ ಕಾರಣ ಕುರಿತು ತನಿಖೆ ನಡೆಸಲಾಗಿದೆ. ಆದರೆ, ಅದಕ್ಕೆ ನಿಖರವಾದ ಕಾರಣ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಎಂದು ಹೇಳಿದ್ದಾರೆ. 

Follow Us:
Download App:
  • android
  • ios