ಚನ್ನರಾಯಪಟ್ಟಣ [ನ.27]:  ಮಚ್ಚಿನಿಂದ ಹಲ್ಲೆಗೊಳಿಸಿ ಕೊಲೆ ಮಾಡಿದ್ದ ಅಪ್ಪ-ಮಗನಿಗೆ ಚನ್ನರಾಯಪಟ್ಟಣದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.

ತಾಲೂಕಿನ ಸಾತೇನಹಳ್ಳಿ ಗ್ರಾಮದ ಹಾಲಿ ಸೋರೇಕಾಯಿಪುರ ನಿವಾಸಿ ರಾಜೇಗೌಡ ಮತ್ತು ಅವರ ದ್ವಿತೀಯ ಪುತ್ರ ಲೋಕೇಶ್‌ ಎಂಬವರೇ ಶಿಕ್ಷೆಗೆ ಒಳಗಾದವರು.

ಪ್ರಕರಣದ ವಿವರ:

ತಾಲೂಕಿನ ಸೋರೇಕಾಯಿಪುರ ಗ್ರಾಮದ ಬಳಿ ಕಲ್ಕೆರೆ ವ್ಯಾಪ್ತಿ ಹೊರವಲಯದಲ್ಲಿ 2016 ಸೆ.19ರಂದು ರಾತ್ರಿ 9ರ ಸುಮಾರಿನಲ್ಲಿ ದೂರುದಾರನಾದ ಮಹೇಶ್‌ ಹಾಗೂ ಅದೇ ಗ್ರಾಮದ ನಿಂಗೇಗೌಡ ಇಬ್ಬರು ಬೈಕಿನಲ್ಲಿ ಕೆಲಸ ನಿಮ್ಮಿತ್ತ ಗ್ರಾಮದ ಕೆಂಗಟ್ಟೆಬಳಿ ಹೋಗುವಾಗ ತೋಟದ ಮನೆಯ ಬಳಿ ಗಲಾಟೆ ನಡೆಯುತ್ತಿರುವ ಶಬ್ದ ಕೇಳಿ ಅಲ್ಲಿಗೆ ಬಂದಿದ್ದಾರೆ.

ಸಾತೇನಹಳ್ಳಿ ಗ್ರಾಮದ ಹಾಲಿ ಸೋರೇಕಾಯಿಪುರ ನಿವಾಸಿ ರಾಜೇಗೌಡ ಹಾಗೂ ಎರಡನೇ ಮಗ ಲೋಕೇಶ್‌ ಸೇರಿಕೊಂಡು ರಾಜೇಗೌಡನ ಮೊದಲನೇ ಮಗ ರಮೇಶನ ಮೇಲೆ ಮಚ್ಚಿನಿಂದ ಮಾರಾಣಾಂತಿಕ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ. ಲೋಕೇಶನ ತಾಯಿ ರಂಗಮ್ಮ ಹಾಗೂ ಹೆಂಡತಿ ಸುನೀತಾ ಸೇರಿಕೊಂಡು ರಮೇಶನನ್ನು ಸಾಯಿಸಿ ಎಂದು ಕುಮ್ಮಕ್ಕು ನೀಡಿದ್ದು, ಜತೆಗೆ ಸಂಬಂಧಿ ಸುರೇಶ್‌ ಎಂಬಾತ ರಮೇಶ್‌ ಆಗಮನದ ಸಮಯ ನೋಡಿ ಸಿಳ್ಳೆ ಹೊಡೆದು ಆರೋಪಿಗಳಿಗೆ ಸೂಚನೆ ನೀಡಿದ್ದ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಮೇಶ್‌ ಹಾಗೂ ಲೋಕೇಶ್‌ ಇಬ್ಬರು ಸ್ವಂತ ಅಣ್ಣ-ತಮ್ಮಂದಿರಾಗಿದ್ದು, ಇಬ್ಬರಿಗೂ ಸಂಬಂಧಿಸಿದಂತೆ ಜಮೀನು ವಿಚಾರವಾಗಿ ನ್ಯಾಯಾಲಯದಲ್ಲಿ ಸಿವಿಲ್‌ ಕೇಸು ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ವೈಮನಸ್ಸಿಟ್ಟುಕೊಂಡು ರಸ್ತೆಗೆ ಅಡ್ಡಲಾಗಿ ತಂತಿ ಕಟ್ಟಿಎಡವಿ ಬೀಳುವಂತೆ ಮಾಡಿ ರಮೇಶನನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ಸಂಚು ರೂಪಿಸಿದ್ದರು.

ಸ್ಥಳಕ್ಕಾಗಮಿಸಿದ ರಮೇಶನ ಪತ್ನಿ ರಾಧಾ, ಮಹೇಶ್‌ ಹಾಗೂ ನಿಂಗೇಗೌಡ ಸೇರಿಕೊಂಡು ರಮೇಶನನ್ನು ಹಲ್ಲೆಯಿಂದ ಬಿಡಿಸಲು ಮುಂದಾಗಿದ್ದು, ಮಚ್ಚಿನ ಏಟಿಗೆ ರಮೇಶ ಕುಸಿದು ಬೀಳುತ್ತಿದ್ದಂತೆಯೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಮಚ್ಚಿನ ಏಟುಗಳಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ರಮೇಶನನ್ನು ಮಹೇಶ್‌ ಹಾಗೂ ಪತ್ನಿ ರಾಧಾ ಅವರು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಂದು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ಬೆಂಗಳೂರಿನ ಸಿಎಂಐ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೂ ಸಾಧ್ಯವಾಗದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದರೂ ಫಲಕಾರಿಯಾಗದೆ 2016 ಸೆ.25ರ ಬೆಳಗಿನ ಜಾವ ರಮೇಶ್‌ ಮೃತಪಟ್ಟಿದ್ದನು.

ಮಹೇಶ್‌ ನೀಡಿದ ದೂರನ್ನು ಸ್ವೀಕರಿಸಿ ಐಪಿಸಿ ಕಲಂ 302 ಸಹವಾಚಕ 34ರ ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಹಾಗೂ ಸಾಕ್ಷಿದಾರರ ಹೇಳಿಕೆಗಳಿಂದ ಆರೋಪ ದೃಢಪಟ್ಟಿದ್ದರಿಂದ ಆರೋಪಿಗಳ ವಿರುದ್ಧ ಅಂದಿನ ಪೊಲೀಸ್‌ ಉಪ ನಿರೀಕ್ಷಕ ವಿನೋದ್‌ರಾಜ್‌ ಮತ್ತು ಪೊಲೀಸ್‌ ನಿರೀಕ್ಷಕ ವಸಂತ್‌ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ವರದಿ ನೀಡಿದ್ದರು.

ನಂತರ ಚನ್ನರಾಯಪಟ್ಟಣದ 4ನೇ ಹೆಚ್ಚುವರಿ ಜಿಲ್ಲಾ ಮತ್ತ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎಂ.ಸಂಶಿ ಅವರು 3ರಿಂದ 5ನೇ ಆರೋಪಿತರನ್ನು ತಪ್ಪಿತಸ್ಥರಲ್ಲವೆಂದು ಬಿಡುಗಡೆಗೊಳಿಸಿದ್ದಾರೆ.

ಇನ್ನೂ 1, 2ನೇ ಆರೋಪಿಗಳಾದ ಲೋಕೇಶ್‌ ಹಾಗೂ ರಾಜೇಗೌಡನನ್ನು ಭಾ.ಸಂ.ಸಂ ಕಲಂ 302 ಸಹವಾಚಕ 34ರ ರೀತ್ಯ ತಪ್ಪಿತಸ್ತರೆಂದು ನಿರ್ಣಯಿಸಿ ಇಬ್ಬರಿಗೂ ಜೀವಾವಧಿ ಸೆರೆವಾಸ ಮತ್ತು ತಲಾ 30 ಸಾವಿರ ರು.ಗಳ ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ ತಲಾ 25 ಸಾವಿರದಂತೆ ಅಂದರೆ 50 ಸಾವಿರ ರು.ಗಳನ್ನು ಮೃತ ರಮೇಶನ ಪತ್ನಿ ರಾಧಾಳಿಗೆ ಪಾವತಿಸುವಂತೆ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ನಾಗಸುಂದ್ರಮ್ಮ ವಾದಿಸಿದ್ದರು.