ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಲಕ್ಷೃ ಖಂಡಿಸಿ ಡಿ.19ರಂದು ಜಿಲ್ಲಾ ರೈತ ಸಂಘ ನೀಡಿರುವ ಮಂಡ್ಯ ನಗರ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.

ಮಂಡ್ಯ (ಡಿ. 19): ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಲಕ್ಷೃ ಖಂಡಿಸಿ ಡಿ.19ರಂದು ಜಿಲ್ಲಾ ರೈತ ಸಂಘ ನೀಡಿರುವ ಮಂಡ್ಯ ನಗರ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.

ಮಂಡ್ಯ ಬಂದ್‌ಗೆ (Mandya Bandh) ಕೆಲ ದಲಿತ ಸಂಘಟನೆಗಳು, ರೈತ (Farmers) ಪರ ಮತ್ತು ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘಟನೆಗಳು ಸೇರಿದಂತೆ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಬಂದ್‌ಗೆ ನಗರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಲು ವರ್ತಕರು ಒಪ್ಪಿದ್ದಾರೆ.

ಸರ್ಕಾರವನ್ನು ಎಚ್ಚರಿಸಲು ಕರೆ ನೀಡಿರುವ ಮಂಡ್ಯ ಬಂದ್‌ಗೆ ನಗರದ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಮಾಲೀಕರು, ಹೋಟೆಲ್‌ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿರುವುದರಿಂದ ಬಂದ್‌ ಯಶಸ್ವಿಯಾಗುವ ಸಾಧ್ಯತೆ ಇದೆ.

ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಮಂಡ್ಯ ನಗರಾದ್ಯಂತ ಮೆರವಣಿಗೆ ನಡೆಸಿ ಬಂದ್‌ ಬೆಂಬಲ ಸೂಚಿಸುವಂತೆ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್‌ ಮಾಡಲು ಸೂಚಿಸಲಾಗಿದೆ.

ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಹಲವು ಸಂಘಟನೆಗಳ ಬೆಂಬಲದೊಂದಿಗೆ ವಿಭಿನ್ನ ರೀತಿಯಲ್ಲಿ ನಗರದ ಸರ್‌ಎಂವಿ ಪ್ರತಿಮೆ ಎದುರು ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಸಚಿವರು ಬಂದು ಭರವಸೆ ನೀಡಿದರಾದರೂ ಕಬ್ಬು, ಹಾಲಿನ ದರ ನಿಗದಿ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಇದರಿಂದ ಸರ್ಕಾರದ ವಿರುದ್ಧ ಮೊದಲ ಹಂತವಾಗಿ ಮಂಡ್ಯ ಬಂದ್‌ ಮಾಡಲಾಗುತ್ತಿದೆ. ಮಂಡ್ಯ ಬಂದ್‌ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿ, ಶಾಲಾ ಕಾಲೇಜು ಹೊರತು ಪಡಿಸಿ ಅಂಗಡಿಗಳು ಬಂದ್‌ ಆಗುವ ಸಾಧ್ಯತೆ ಇದೆ. ಸಾರಿಗೆ ಸಂಚಾರ ಎಂದಿನಂತೆ ಇರಲಿದೆ ಎಂದು ಹೇಳಲಾಗುತ್ತಿದೆ. ಪರಿಸ್ಥಿತಿ ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಕಬ್ಬಿನ ಬೆಲೆ ದರ ನೀಡಲು ಒತ್ತಾಯಿಸಿ ರೈತ ಸಂಘ ಹೋರಾಟ ನಡೆಸುತ್ತಿದೆ. ಸರ್ಕಾರ ರೈತರ ಬೇಡಿಕೆ ಈಡೇರಿಸದೆ ಉದಾಶೀನ ತಾಳಿದೆ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿ ಹೋಗಿದ್ದಾರೆ. ರೈತರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಮಂಡ್ಯ ಬಂದ್‌ಗೆ ಜಿಲ್ಲೆಯ ರೈತರು, ಜನರು ಸಹಕಾರ ನೀಡಬೇಕು. ರೈತರನ್ನು ಉಳಿಸಬೇಕು.

- ಎ.ಎಲ್‌.ಕೆಂಪೂಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ

ರೈತರ ಪರದಾಟ

ಚಿಕ್ಕಬಳ್ಳಾಪುರ (ಡಿ. 17): ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಲು ನೋಂದಣಿ ಕೇಂದ್ರಗಳಿಗೆ ಹೆಸರು ನೊಂದಣಿಗಾಗಿ ತೆರಳಿದ ಅನ್ನದಾತರಿಗೆ ನಿರಾಸೆ ಎದುರಾಗಿ ನೊಂದಣಿಗಾಗಿ ಪರದಾಡುವಂತಾಯಿತು.

ಹೌದು, ಡಿ.15 ರಿಂದಲೇ ಬೆಂಬಲ ಬೆಲೆ (Supporting Price) ಯೋಜನೆಯಡಿ ರಾಗಿ, ಭತ್ತ (Paddy) , ಜೋಳ ಮಾರಾಟಕ್ಕೆ ರೈತರು ನೋಂದಣಿ ಮಾಡಿಕೊಳ್ಳಬಹುದೆಂದು ಜಿಲ್ಲಾಡಳಿತ ಪ್ರಕಟಿಸಿದರೂ ಗುರುವಾರ ಜಿಲ್ಲೆಯ ಬಹುತೇಕ ನೋಂದಣಿ ಕೇಂದ್ರಗಳಲ್ಲಿ ರೈತರ ನೊಂದಣಿಗೆ ವಿವಿಧ ವಿಘ್ನಗಳು ಎದುರಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬಂದ ರೈತರು ಬರಿಗೈಯಲ್ಲಿ ಹಿಂತಿರುಗಿದರು.

ನೂರೆಂಟು ಸಮಸ್ಯೆ ಹೇಳಿದ ಅಧಿಕಾರಿ

ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಜೋಳ ಮಾರಾಟಕ್ಕೆ ರೈತರ ನೋಂದಣಿಗಾಗಿ ಜಿಲ್ಲಾ ಕೇಂದ್ರದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಕಚೇರಿ ಗುರುವಾರ ಬೀಕೋ ಎನ್ನುವಂತಿತ್ತು. ನೋಂದಣಿಗಾಗಿ ಬಂದ ರೈತರು ವಾಪಸ್‌ ಹೋದರು. ಕಚೇರಿಯಲ್ಲಿ ಸೂಕ್ತ ಸಿಬ್ಬಂದಿ ಕೊರತೆ ಇದೆ. ಕಂಪ್ಯೂಟರ್‌ ಸಮಸ್ಯೆ ಇದೆ. ಸಾಪ್‌್ಟವರ್‌ ಅಪ್‌ಡೇಟ್‌ ಆಗಬೇಕು, ಕೋಡ್‌, ಪಾಸ್‌ವರ್ಡ್‌ ಕ್ರಿಯೆಟ್‌ ಆಗಬೇಕೆಂದು ಹೇಳಿ ರೈತರನ್ನು ವಾಪಸ್ಸು ಕಳುಹಿಸಿದ್ದಾರೆ. ರೈತರ ನೊಂದಣಿ ಕಾರ್ಯ ಸಮರ್ಪಕವಾಗಿ ಸರಿ ಹೋಗಬೇಕಾದರೆ ಇನ್ನೂ ಒಂದರೆಡು ದಿನ ಕಾಯಬೇಕಾಗುತ್ತದೆಯೆಂದು ಜಿಲ್ಲೆಯಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಜೋಳ ಸಂಗ್ರಹಣೆಗಾಗಿ ಸರ್ಕಾರದಿಂದ ನೇಮಕವಾಗಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧಿಕಾರಿಯೊಬ್ಬರು ಕನ್ನಡಪ್ರಭಗೆ ತಿಳಿಸಿದರು.

ಜಿಲ್ಲೆಯಲ್ಲಿ ಎಂಎಸ್‌ಪಿ ನೊಂದಣಿಗಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಟಿಬಿ ಕ್ರಾಸ್‌ನಲ್ಲಿ ಎಪಿಎಂಸಿ ಪ್ರಾಂಗಣ, ಚಿಕ್ಕಬಳ್ಳಾಪುರ ಎಪಿಎಂಸಿ ಪ್ರಾಂಗಣ, ಚಿಂತಾಮಣಿ ತಾಲೂಕಿನ ಕಾಗತಿ ಬಳಿ ಇರುವ ಎಸ್‌ಡ್ಲ್ಯೂಸಿ ಸಗಟು ಮಳಿಗೆ, ಗೌರಿಬಿದನೂರು ಎಪಿಎಂಸಿ ಪ್ರಾಂಗಣ, ಗುಡಿಬಂಡೆಯಲ್ಲಿ ಪಡಿತರ ಸಗಟು ಮಳಿಗೆ, ಶಿಡ್ಲಘಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅವಕಾಶ ಕಲ್ಪಿಸಿತ್ತಾದರೂ ಮೊದಲ ದಿನವೇ ಸಿಬ್ಬಂದಿ ಕೊರತೆ, ಕಂಪ್ಯೂಟರ್‌ ಹಾಗೂ ಸಾಪ್‌್ಟವೇರ್‌ ಸಮಸ್ಯೆಯಿಂದ ರೈತರ ನೊಂದಣಿ ಆಗದೇ ರೈತರು ನೊಂದಣಿ ಕೇಂದ್ರಗಳಿಗೆ ಆಗಮಿಸಿ ವಾಪಸ್‌ ಹೋಗಿದ್ದಾರೆ.