ಶ್ರೀರಂಗಪಟ್ಟಣ [ಅ.03]:  ಮಂಡ್ಯ ಜಿಲ್ಲೆಯಲ್ಲಿ ಕಬ್ಬಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದರೂ ಸಂಸದೆ ಸುಮಲತಾ ರೈತರ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರೈತರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸುರೇಶ್‌, ಕಬ್ಬು ಬೆಳೆಗಾರರ ಹಾಗೂ ಹೋರಾಟ ನಡೆಸುತ್ತಿರುವ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಅವರು ಈ ವರೆಗೂ ತುಟಿಬಿಚ್ಚದೆ ಸರ್ಕಾರವನ್ನು ಒತ್ತಾಯ ಮಾಡದಿರುವುದು ಜಿಲ್ಲೆಯ ರೈತರಲ್ಲಿ ಅಸಮಾಧಾನ ಉಂಟುಮಾಡಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಕಬ್ಬು ಬೆಳೆಗೆ 15 ತಿಂಗಳಾಗಿದೆ. ಇಳುವರಿ ಕಡಿಮೆಯಾಗುತ್ತಿದೆ. ಕೆಲವೆಡೆ ಕಬ್ಬು ಬೆಳೆ ನೆಲಕಚ್ಚಿದ್ದು ರೈತರು ನಷ್ಟಅನುಭವಿಸುತ್ತಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರೈತರನ್ನು ಮಲ ಮಕ್ಕಳಂತೆ ಕಾಣುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯ ರೈತರು ಸಾಲ, ಸೋಲ ಮಾಡಿ ಕಬ್ಬು ಬೆಳೆ ಬೆಳೆದಿದ್ದಾರೆ. ಈ ವರೆವಿಗೂ ಸರ್ಕಾರ ಜಿಲ್ಲೆಯ ಮೈಷುಗರ್‌ ಮತ್ತು ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಆರಂಭಿಸದೆ ರೈತರನ್ನು ಕಡೆಗಾಣಿಸುವುದರ ಜೊತೆಗೆ ಮತ್ತಷ್ಟುಸಮಸ್ಯೆಗೆ ಸಿಲುಕುವಂತೆ ಮಾಡುತ್ತಿದ್ದಾರೆ. ಶೀಘ್ರ ಜಿಲ್ಲಾಡಳಿತ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಮುಂದಾಗದಿದ್ದರೆ ಶ್ರೀರಂಗಪಟ್ಟಣ ಮತ್ತು ಮೈಸೂರು ದಸರಾ ಆಚರಣೆ ಅಡ್ಡಿಪಡಿಸುವುದಾಗಿ ಸರ್ಕಾರವನ್ನು ಎಚ್ಚರಿಸಿದರು.

ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪ ನಮನ:

ಇದಕ್ಕೂ ಮುನ್ನ ಗಾಂ​ಧಿಜಿಯವರ 150ನೇ ಜಯಂತಿ ಹಿನ್ನಲೆಯಲ್ಲಿ ಹೋರಾಟಗಾರರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗಾಂಧೀಜಿ ಅವರ 150ನೇ ಜಯಂತಿ ಆಚರಿಸಿದರು. ಗಾಂಧಿವಾದಿ ಡಾ.ಬಿ.ಸುಜಯ್‌ ಕುಮಾರ್‌ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಗಾಂಧಿತತ್ವ ಅನುಸರಿಸಿ ಪ್ರತಿಭಟನೆ ನಡೆಸುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.

ಆ 4 ರಂದು ರೈತ ಸಭೆ:

ಪ್ರತಿಭಟನಾ ಸ್ಥಳಕ್ಕೆ ಉಪಜಿಲ್ಲಾಧಿಕಾರಿ ಯೋಗೇಶ್‌ ಅಧಿಕಾರಿಗಳೊಂದಿಗೆ ಧರಣಿ ನಿರತ ರೈತರಿಂದ ಮನವಿ ಆಲಿಸಿ ಅ.4 ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಿ ಶೀಘ್ರ ಪರಿಹರಿಸುವ ಭರವಸೆ ನೀಡಿದ ಹಿನ್ನಲೆ ರೈತರು ಪ್ರತಿಭಟನೆ ಹಿಂಪಡೆದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮೇಳಾಪುರ ಸ್ವಾಮಿಗೌಡ, ರೈತ ಸಂಘದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಲತಾ ಶಂಕರ್‌,ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಶಂಕರೇಗೌಡ, ಪಾಂಡು, ರಮೇಶ… ಜಯರಾಮೇಗೌಡ ಇತರರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.