Asianet Suvarna News Asianet Suvarna News

ಶಹಾಪುರದಲ್ಲಿ ಮಳೆ ಕೊರತೆ: ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಹೇಗಾದರೂ ಮಾಡಿ ಬೆಳೆ ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎತ್ತಿನ ಗಾಡಿಗಳಲ್ಲಿ, ಕೊಡ ತಲೆ ಮೇಲೆ ಹೊತ್ತು, ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಆದರೆ, ಅದು ತಾತ್ಕಾಲಿಕ ಪರಿಹಾರವಷ್ಟೇ. ಮಳೆ ಬಾರದ ಹೊರತು ಬೆಳೆಗಳು ಉಳಿಸಿಕೊಳ್ಳುವುದು ಕಷ್ಟ. ಉತ್ತಮ ರೀತಿಯಲ್ಲಿ ಬೆಳೆ ಬಾರದಿದ್ದಲ್ಲಿ ಮುಂದೆ ಇಳುವರಿ ಕೂಡ ಕುಂಠಿತಗೊಳ್ಳಲಿದೆ. 

Farmers Trying to Protect Crop at Shahapur in Yadgir grg
Author
First Published Oct 21, 2023, 10:30 PM IST

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಅ.21):  ಮಳೆ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳೆಲ್ಲ ತೇವಾಂಶವಿಲ್ಲದೇ ಒಣಗುತ್ತಿದ್ದರಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದು, ಹಗಲೂ ರಾತ್ರಿ ಶ್ರಮಪಡುತ್ತಿದ್ದಾರೆ.

ಟ್ಯಾಂಕರ್‌ ಮೂಲಕ ನೀರು: 

ಬಿತ್ತನೆ ಮಾಡಿದ ಖರ್ಚಿಗಿಂತ ರೈತ ಬೆಳೆ ಉಳಿಸಿಕೊಳ್ಳಲು ತಾಲೂಕಿನ ಬಾಣತಿಹಾಳ ಗ್ರಾಮದ ರೈತ ಗಿರೆಪ್ಪ ಗೌಡ ತನ್ನ 10 ಎಕರೆ ಹೊಲದಲ್ಲಿ ಬಿತ್ತಿದ ತೊಗರಿ ಬೆಳೆ ಉಳಿಸಿ ಕೊಳ್ಳಲು ಹೆಣಗಾಡುತ್ತಿದ್ದಾನೆ. ಒಂದು ಟ್ಯಾಂಕರ್‌ಗೆ ದಿನಕ್ಕೆ 3500 ರು. ನಿಗದಿ ಮಾಡಿದ್ದು, 4 ಟ್ಯಾಂಕರ್ ಮೂಲಕ ನೀರು ತರಲಾಗುತ್ತಿದೆ. ಒಂದು ಎಕರೆಗೆ ಕನಿಷ್ಠ 12 ಟ್ಯಾಂಕರ್‌ಗಳ ನೀರು ಬೇಕಾಗಿದೆ. ಅಂದರೆ 15 ಸಾವಿರ ರು. ಖರ್ಚು ಮಾಡಬೇಕು. ಇದು ಒಂದು ದಿನಕ್ಕೆ ಮಾತ್ರ. 1 ವಾರದಿಂದ ಈ ಕೆಲಸ ನಡೆಯುತ್ತಿದೆ ಇದರೊಂದಿಗೆ ಆಯಿಲ್‌ ಎಂಜಿನ್‌ ಮಶಿನ್‌ ಡೀಸೆಲ್‌, ಕೂಲಿ ಸೇರಿದಂತೆ ಒಂದು ಎಕರೆಗೆ ಕನಿಷ್ಠ 15 ರಿಂದ 20 ಸಾವಿರ ರು. ಖರ್ಚು ಬರುತ್ತಿದೆ.

ಯಾದಗಿರಿ: ಬೆಳೆಗೆ ಟ್ಯಾಂಕರ್ ನೀರಿಗೆ ಮೊರೆ ಹೋದ ರೈತರು..!

ಬೆಳೆಗೆ ಮಾಡಿದ ಖರ್ಚನ್ನಾದರೂ ತೆಗೆದುಕೊಳ್ಳಲು ಈ ರೀತಿ ಇನ್ನಷ್ಟು ಹಣ ಖರ್ಚು ಮಾಡುತ್ತಿದ್ದೇನೆ. ಗೊಬ್ಬರ ಔಷಧಿಗೆ ಬೇರೆ ಖರ್ಚು. ಎಲ್ಲಾ ಸೇರಿ ಲಾಭ ಬರದಿದ್ದರೂ ಪರವಾಗಿಲ್ಲ ಮಾಡಿದ ಖರ್ಚು ಬಂದರೆ ಸಾಕು ಎನ್ನುವಂತಾಗಿದೆ. ಇಲ್ಲದೆ ಹೋದೆ ಸಾಲದ ಹೊರೆ ಬೀಳಲಿದೆ ಎನ್ನುತ್ತಾರೆ ಗಿರೆಪ್ಪ ಗೌಡ.

ಈ ಬಾರಿ ಉತ್ತಮ ಹತ್ತಿ, ತೊಗರಿ, ಮೆಣಸಿನಕಾಯಿ, ಭತ್ತ ಬೆಳೆ ಕೈಗೆ ಸಿಗಲಿದೆಯೆಂದು ಬಹಳ ನಿರೀಕ್ಷೆ ಹೊಂದಿದ್ದ ರೈತನಿಗೆ ಮಳೆ ಬಾರದೆ ಹಿನ್ನೆಡೆಯಾಗಿ ಭಾರಿ ನಿರಾಸೆ ಮೂಡಿಸಿದೆ. ಹೂವು, ಮೊಗ್ಗು ಬಿಡುವ ಹಂತದಲ್ಲಿರುವ ಹೊಲಗಳಲ್ಲಿ ತೇವಾಂಶದ ಕೊರತೆ ಎದುರಾಗಿದ್ದು, ಎಲ್ಲೆಡೆ ಬೆಳೆ ಒಣಗುತ್ತಿರುವುದನ್ನು ನೋಡಲಾರದೆ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಬೆಳಗಳಿಗೆ ನೀರು ಉಣಿಸುತ್ತಿದ್ದೇವೆ. ಬಿಸಿಲಿನ ತಾಪಕ್ಕೆ ಹತ್ತಿ ತೊಗರಿ ಮೆಣಸಿನಕಾಯಿ ಭತ್ತ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು ಕಂಗಾಲಾಗಿದ್ದೇವೆ ಎನ್ನುತ್ತಾರೆ ಸಗರ ಗ್ರಾಮದ ರೈತ ಶಿವಪ್ಪ.

ಹೇಗಾದರೂ ಮಾಡಿ ಬೆಳೆ ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎತ್ತಿನ ಗಾಡಿಗಳಲ್ಲಿ, ಕೊಡ ತಲೆ ಮೇಲೆ ಹೊತ್ತು, ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಆದರೆ, ಅದು ತಾತ್ಕಾಲಿಕ ಪರಿಹಾರವಷ್ಟೇ. ಮಳೆ ಬಾರದ ಹೊರತು ಬೆಳೆಗಳು ಉಳಿಸಿಕೊಳ್ಳುವುದು ಕಷ್ಟ. ಉತ್ತಮ ರೀತಿಯಲ್ಲಿ ಬೆಳೆ ಬಾರದಿದ್ದಲ್ಲಿ ಮುಂದೆ ಇಳುವರಿ ಕೂಡ ಕುಂಠಿತಗೊಳ್ಳಲಿದೆ. ಮುಂದೆ ನಷ್ಟ ಅನುಭವಿಸುವುದಕ್ಕಿಂತ ಈಗಲೇ ಅಲ್ಪ ನಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವುದೇ ಲೇಸು. ಇನ್ನೂ ಒಂದು ವಾರ ಕಾಲ ನೋಡಿ ಸಂಪೂರ್ಣ ಆಸೆ ಬಿಡುತ್ತೇವೆ ಎನ್ನುತ್ತಾರೆ ರೈತರು.

ಬಿತ್ತನೆ ವಿವರ: ಶಹಾಪುರ ತಾಲೂಕಿನಲ್ಲಿ ತೊಗರಿ 15200, ಹತ್ತಿ 39000, ಭತ್ತ 15430 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಮೆಣಸಿನಕಾಯಿ, 8000 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಮಳೆ ವಿವರ: ಜೂನ್ ನಿಂದ ಸೆಪ್ಟೆಂಬರ್ ವರೆಗೆ ವಾಡಿಕೆ ಮಳೆ 600ಮಿಮೀ, ಬಿದ್ದ ಮಳೆ 517 ಮೀಮೀ, ಕೊರತೆ ಮಳೆ –14. ಅಕ್ಟೋಬರ್ 1 ರಿಂದ 20 ರ ವರೆಗೆ ವಾಡಿಕೆ ಮಳೆ 90 ಮಿಮೀ, ಬಿದ್ದ ಮಳೆ ಕೇವಲ 4 ಮಿಮೀ, ಕೊರತೆ ಮಳೆ –95.

ಯಾದಗಿರಿ: ಸರ್ಕಾರಿ ಕಚೇರಿಗೆ ಸೂರು, ಬಾಡಿಗೆ ಮಾಫಿಯಾ ಜೋರು..!

ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿದ್ದ ತೊಗರಿ ಬೆಳೆಯೆಲ್ಲ ಮಳೆ ಇಲ್ಲದೇ ಒಣಗಿ ಹೋಯಿತು. ಹಾಗೇ ಬಿಟ್ಟರೆ ಉತ್ತಮ ಇಳುವರಿ ಕೂಡ ಸಿಗುವುದಿಲ್ಲ. ಅಲ್ಲದೇ, ಖರ್ಚು ಕೂಡ ಹೆಚ್ಚಾಗಲಿದ್ದು ಬಿತ್ತನೆದಾಗಿ ಮಾಡಿದ ಖರ್ಚನ್ನಾದರು ತೆಗೆದುಕೊಳ್ಳಬೇಕು ಎನ್ನುವ ಆಸೆಯಿಂದ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಉಣಿಸುತ್ತಿದ್ದೇನೆ. ಭೂಮಿ ತಾಯಿ ಕೈಹಿಡಿದರೆ ಬದುಕುತ್ತೇವೆ. ಇಲ್ಲದೆ ಹೋದರೆ ನಮ್ಮ ಜೀವನ ದೇವರೇ ಬಲ್ಲ ಎಂದು ಟ್ಯಾಂಕರ್ ಮೂಲಕ ಬೆಳಗಳಿಗೆ ನೀರು ಉಳಿಸುತ್ತಿರುವ ರೈತ ಗಿರೆಪ್ಪ ಗೌಡ ಬಾಣತಿಹಾಳ ಹೇಳಿದ್ದಾರೆ. 

ಸಕಾಲಕ್ಕೆ ಮಳೆ ಬಾರದೆ, ವಾಡಿಕೆ ಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತೇವಾಂಶದ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಹೂ ಮೊಗ್ಗು ಬರುವ ಸಮಯದಲ್ಲಿ ಮಳೆ ಕೊರತೆಯಿಂದ ಅಂದಾಜು 50% ಬೆಳೆ ಹಾನಿಯಾಗುವ ಸಂಭವವಿದೆ. ಸರ್ಕಾರ ಈಗಾಗಲೇ ಈ ತಾಲೂಕುವನ್ನು ತೀವ್ರ ಬರಗಾಲವೆಂದು ಘೋಷಣೆ ಮಾಡಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ತಿಳಿಸಿದ್ದಾರೆ.  

Follow Us:
Download App:
  • android
  • ios