Asianet Suvarna News Asianet Suvarna News

ಸುರಕ್ಷಿತ ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಮುಂದಾಗಬೇಕು- ಜಿ.ಎಚ್. ಯೋಗೇಶ್

ಮಳೆ ನೀರಿನ ಸಂರಕ್ಷಣೆ ಜೊತೆಗೆ ಮಣ್ಣಿನಲ್ಲಿ ಸಾವಯುವ ಇಂಗಾಲ ಹೆಚ್ಚಿಸುವ ಬೇಸಾಯ ಕ್ರಮಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಸುರಕ್ಷಿತ ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಮುಂದಾಗಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಜಿ.ಎಚ್. ಯೋಗೇಶ್ ಕರೆ ನೀಡಿದರು.

Farmers should take initiative to produce safe quality food- G.H. Yogesh snr
Author
First Published Dec 31, 2023, 10:52 AM IST

  ಮೈಸೂರು :  ಮಳೆ ನೀರಿನ ಸಂರಕ್ಷಣೆ ಜೊತೆಗೆ ಮಣ್ಣಿನಲ್ಲಿ ಸಾವಯುವ ಇಂಗಾಲ ಹೆಚ್ಚಿಸುವ ಬೇಸಾಯ ಕ್ರಮಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಸುರಕ್ಷಿತ ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಮುಂದಾಗಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಜಿ.ಎಚ್. ಯೋಗೇಶ್ ಕರೆ ನೀಡಿದರು.

ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ನಂಜನಗೂಡು ತಾಲೂಕು ಮುದ್ದಹಳ್ಳಿಯ ಪ್ರಗತಿಪರ ರೈತ ಚಿಕ್ಕಸ್ವಾಮಿ ಅವರ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕ್ಷೇತ್ರಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಸಮಗ್ರವಾಗಿ ಮಿಶ್ರ ಕೃಷಿ ಜೊತೆಗೆ ಜೇನು ಸಾಕಾಣಿಕೆ, ಹೈನುಗಾರಿಕೆ, ಕುರಿ, ಮೀನು ಸಾಕಾಣಿಕೆ ಪದ್ಧತಿಗಳನ್ನು ಅಳವಡಿಸಿ ಕೊಳ್ಳುವುದರಿಂದ ನಿರಂತರ ಆದಾಯ ಗಳಿಸಬಹುದು ಎಂದರು.

ಮಣ್ಣಿನ ಫಲವತ್ತತೆ ವೃದ್ಧಿಗಾಗಿ ಎರೆಹುಳು ಗೊಬ್ಬರ ತಯಾರಿಕೆ, ಬೆಳೆ ತ್ಯಾಜ್ಯಗಳ ಮಲ್ಚಿಂಗ್ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

ಪ್ರಗತಿಪರ ರೈತ ಚಿಕ್ಕಸ್ವಾಮಿ ಮಾತನಾಡಿ, ಮಳೆಗಾಲದ ತೇವಾಂಶ ಬಳಸಿಕೊಂಡು ಸೆಣಬು, ಡಯಂಚ, ಅಲಸಂದೆ ಮುಂತಾದ ಹಸಿರೆಲೆ ಗೊಬ್ಬರ ಬೆಳೆದು ಮಣ್ಣಿಗೆ ಸೇರಿಸುವುದರಿಂದ ಮಣ್ಣು ಮೃದುವಾಗಿದೆ. ತೆಂಗು, ಬಾಳೆ, ಸೀತಾಫಲ, ರಾಮಫಲ, ಲಕ್ಷ್ಮಣಫಲ, ನಿಂಬೆ, ಕರಿಬೇವು ಮತ್ತಿತರ ರೀತಿ ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ಆದಾಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ಹೇಳಿದರು.

ಜೀವಾಮೃತ ತಯಾರಿಸುವ ಪ್ರಾತ್ಯಕ್ಷಿಕೆ ನೀಡಿದ ಪ್ರಗತಿಪರ ರೈತ ಪೃಥ್ವಿರಾಜ್ ಮಾತನಾಡಿ, 10 ದಿನದೊಳಗೆ ಜೀವಾಮೃತ ಬಳಸುವುದರಿಂದ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ತ್ಯಾಜ್ಯಗಳು ಬೇಗನೆ ಕಳಿತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತವೆ ಎಂದರು.

ನಂಜನಗೂಡು ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾಧುರಿ, ಇ-ಕೆವೈಸಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸುವ ಬಗ್ಗೆ ಮಾಹಿತಿ ನೀಡಿದರು.

ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು, ಚಾಮರಾಜನಗರ ಜಿಲ್ಲೆಗಳ ವಿವಿಧ ಗ್ರಾಮಗಳ 50 ಹೆಚ್ಚು ರೈತರು ಭಾಗವಹಿಸಿದ್ದರು. ಕೃಷಿ ಅಧಿಕಾರಿ ಮಾಲತಿ ನಿರೂಪಿಸಿದರು.

Follow Us:
Download App:
  • android
  • ios