Asianet Suvarna News Asianet Suvarna News

ಬೆಳೆಸಾಲಕ್ಕೆ ರೈತರ ಸೆಲ್ಫಿ, ವಂಶಾವಳಿ ಕಡ್ಡಾಯ..!

* ಬ್ಯಾಂಕುಗಳಿಂದ ಬೆಳೆಸಾಲಕ್ಕೆ ಹೊಸ ನಿಯಮ
* ಸಾಲ ನಿರಾಕರಣೆ ತಂತ್ರ: ರೈತರಿಂದ ತೀವ್ರ ಆಕ್ರೋಶ
* ಜಮೀನು ಅಧಿಕೃತ ಪಾಲುದಾರಿಕೆ ಮಾಡಿಕೊಳ್ಳದೆ ಉಳುಮೆ ಮಾಡುತ್ತಿರುವ ರೈತರಿಗೆ ಈಗ ಸಂಕಷ್ಟ
 

Farmers Selfie and Genealogy Mandatory For Crop Loan in Yadgir grg
Author
Bengaluru, First Published Jul 3, 2021, 7:55 AM IST

ಆನಂದ್‌ ಎಂ. ಸೌದಿ

ಯಾದಗಿರಿ(ಜು.03): ಬೆಳೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ರೈತರು ಇನ್ನು ಮುಂದೆ ವಂಶಾವಳಿ ಹಾಗೂ ಬೆಳೆ ಮುಂದೆ ನಿಂತು ತೆಗೆಯಲಾದ ಸೆಲ್ಫಿ ಸಲ್ಲಿಕೆ ಮಾಡುವುದನ್ನು ಬ್ಯಾಂಕುಗಳು ಕಡ್ಡಾಯಗೊಳಿಸಿವೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಲ ನಿರಾಕರಿಸಲು ಬ್ಯಾಂಕುಗಳು ಹೂಡಿರುವ ತಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.

ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸುವ ರೈತರಿಂದ 15 ವರ್ಷಗಳ ಋುಣಭಾರ ಪ್ರಮಾಣಪತ್ರ (ಇ.ಸಿ.), 14 ವರ್ಷಗಳ ಪಹಣಿ, ಚೆಕ್ಕುಬಂದಿ ವಿವರ, ತೆರಿಗೆ ಪಾವತಿ ರಶೀದಿ, ಪಾಸ್‌ಪೋರ್ಟ್‌ ಫೋಟೋ, ಬೆಳೆ ದೃಢೀಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುತ್ತಿದ್ದವು. ಆದರೆ ಈಗ ವಂಶಾವಳಿ, ಸೆಲ್ಫಿ ನೀಡಬೇಕು ಎಂದು ಸೂಚನೆ ನೀಡಿವೆ.

ಸಮಸ್ಯೆ ಏನು?:

ಅನೇಕ ಗ್ರಾಮಗಳಲ್ಲಿ ಹಿರಿಯರ ಹೆಸರಿನಲ್ಲೇ ಆಸ್ತಿ ಇರುತ್ತದೆ. ಜಮೀನಿನ ಮಾಲೀಕರು ತೀರಿ ಹೋಗಿದ್ದರೂ ಅವರ ವಾರಸುದಾರರು ಅಧಿಕೃತವಾಗಿ ಪಾಲುದಾರಿಕೆ ಮಾಡಿಕೊಳ್ಳದೆ ಉಳುಮೆ ಮಾಡುತ್ತಿರುತ್ತಾರೆ. ಅಂಥವರು ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ದೃಢೀಕರಣ ಪ್ರಮಾಣ ಪತ್ರ ಪಡೆದು ಬ್ಯಾಂಕುಗಳಿಗೆ ಸಲ್ಲಿಸಿ ಸಾಲ ಪಡೆಯುತ್ತಿದ್ದಾರೆ. ಇದೀಗ ಆ ಎಲ್ಲರೂ ವಂಶವೃಕ್ಷ ಹಾಗೂ ಸೆಲ್ಫಿ ಸಲ್ಲಿಸಬೇಕು. ಜಮೀನು ತಮ್ಮ ಹೆಸರಿನಲ್ಲಿ ಇಲ್ಲದ ಕಾರಣ ಈ ರೈತರು ವಂಶವೃಕ್ಷ ಸಲ್ಲಿಸಿದರೆ ಸಾಲದ ಅರ್ಜಿ ತಿರಸ್ಕಾರವಾಗುತ್ತದೆ ಎಂಬ ಅಳಲು ರೈತರದ್ದು. ರೈತರು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿರುತ್ತಾರೆ. ಇದೀಗ ಸಾಲ ಬೇಕೆಂದರೆ ಮೂಲ ಮಾಲೀಕರ ವಂಶವೃಕ್ಷ ಸಲ್ಲಿಸಬೇಕಾಗುತ್ತದೆ. ಇದು ಕೂಡ ಸಮಸ್ಯೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

30 ಲಕ್ಷ ರೈತರಿಗೆ 20,810 ಕೋಟಿ ರೂ. ಬೆಳೆ ಸಾಲ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

ಇ.ಸಿ. ಪಡೆಯಲು ಮೂರ್ನಾಲ್ಕು ದಿನ ಸಮಯ ಹಿಡಿಯುತ್ತದೆ. ಈಗ ವಂಶವೃಕ್ಷ ಕೇಳಿದರೆ 10 ದಿನ ಅದಕ್ಕೇ ಅಲೆಯಬೇಕಾಗುತ್ತದೆ. ಒಟ್ಟಾರೆ ಎಲ್ಲ ದಾಖಲೆ ಹೊಂದಿಸಲು 15ರಿಂದ 20 ದಿನ ಬೇಕಾಗುತ್ತದೆ ಎಂದು ರೈತರು ದೂರುತ್ತಿದ್ದಾರೆ.
ಸೆಲ್ಫಿ ಗೋಜಲು: ಪಪ್ಪಾಯ, ಬಾಳೆಯಂತಹ ಬೆಳೆಗಳ ಮುಂದೆ ಫೋಟೋ ತೆಗೆದು ಕಳುಹಿಸಬಹುದು. ಆದರೆ ಹತ್ತಿ, ತೊಗರಿ, ಮೆಣಸಿನಕಾಯಿಯಂತಹ ಬೆಳೆಗಳನ್ನು ಬಿತ್ತಿದ ಕೂಡಲೇ ಬೆಳೆ ಸಾಲ ಕೋರಿ ಅರ್ಜಿ ಸಲ್ಲಿಸುತ್ತೇವೆ. ಸೆಲ್ಫಿ ತೆಗೆದುಕೊಂಡರೂ ಅದರಲ್ಲಿ ಏನೂ ಕಾಣುವುದಿಲ್ಲ. ಬ್ಯಾಂಕುಗಳು ಬೆಳೆಯ ಸೆಲ್ಫಿ ಕೇಳುತ್ತಿರುವುದು ಅವೈಜ್ಞಾನಿಕ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಸಾಲ ಕೋರುವ ರೈತರಿಂದ ವಂಶಾವಳಿ ಹಾಗೂ ಸೆಲ್ಫಿ ಕೇಳುವುದು ಸೂಕ್ತ ನಡೆಯಲ್ಲ. ಇಂತಹ ನಿಯಮಗಳೇ ಸರಿ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಬ್ಯಾಂಕ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಏಕೆ ಈ ಕ್ರಮ?

ಮರುಪಾವತಿ ಮಾಡದ ಸಾಲಗಾರರು ಬೇರೆಯವರ ಹೆಸರಿನಲ್ಲಿ ಸಾಲ ಪಡೆಯುವುದನ್ನು ತಪ್ಪಿಸಲು ಬ್ಯಾಂಕುಗಳು ಈ ಕ್ರಮಕ್ಕೆ ಮುಂದಾಗಿವೆ ಎಂದು ಹೇಳಲಾಗುತ್ತಿದೆ. ತಂದೆಯ ಹೆಸರಿನಲ್ಲಿ ಜಮೀನಿದ್ದರೆ, ಹಿರಿಯ ಸೋದರ ಸಾಲ ಪಡೆದಿರುತ್ತಾನೆ. ಆತ ಮರುಪಾವತಿ ಮಾಡಿರುವುದಿಲ್ಲ. ಆತನ ಕುಟುಂಬದ ಮತ್ತೊಬ್ಬ ಸದಸ್ಯ ಮತ್ತೊಂದು ಪಹಣಿ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ವಂಶವೃಕ್ಷ ಸಲ್ಲಿಸಬೇಕು. ಆ ವಂಶವೃಕ್ಷ ಗಮನಿಸಿ ಕುಟುಂಬದಲ್ಲಿ ಮರುಪಾವತಿ ಮಾಡದ ಸದಸ್ಯ ಇದ್ದರೆ, ಆತನ ಕುಟುಂಬ ಸದಸ್ಯರಿಗೂ ಸಾಲವನ್ನು ಬ್ಯಾಂಕುಗಳು ನಿರಾಕರಿಸಬಹುದು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಂಶಾವಳಿಯಲ್ಲಿ ಯಾರಾದರೂ ಸಾಲ ಪಡೆದವರು ಇದ್ದು, ಮರುಪಾವತಿಸದೆ ಇದ್ದರೆ ಅರ್ಜಿದಾರರಿಗೆ ಸಾಲ ಸಿಗುವುದಿಲ್ಲ. ಇನ್ನು, ಇದೇ ಬೆಳೆ ಬಿತ್ತನೆ ಮಾಡಿದ್ದಾರೆ ಎನ್ನುವುದಕ್ಕೆ ಸೆಲ್ಫಿ ಸಾಕ್ಷ್ಯ ಆಗುತ್ತದೆ ಎಂದು ಯಾದಗಿರಿ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಭೀಮರಾವ್‌ ತಿಳಿಸಿದ್ದಾರೆ.  

ಎಸ್‌ಬಿಐ ಅಧಿಕಾರಿಗಳು ಈ ದಾಖಲೆಗಳನ್ನು ಕೇಳಿದ್ದಾರೆ. ಎಂದೂ ಕೇಳದ ವಂಶಾವಳಿ ಹಾಗೂ ಸೆಲ್ಫಿ ಈಗೇಕೆ? ಎಂದು ಯಾದಗಿರಿ ಜಿಲ್ಲೆಯ ರೈತ ಮುಖಂಡ ಚೆನ್ನಪ್ಪ ಆನೆಗುಂದಿ ಹೇಳಿದ್ದಾರೆ. 
 

Follow Us:
Download App:
  • android
  • ios