ಹುಬ್ಬಳ್ಳಿ(ನ.21): ಕಳಸಾ-ಬಂಡೂರಿ ಯೋಜನೆಗೆ ಪರಿಸರ ಇಲಾಖೆ ನೀಡಿದ್ದ ಅನುಮೋದನೆಯ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದಕ್ಕೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಧಿಕರಣವೇ ತೀರ್ಪು ನೀಡಿದ ಮೇಲೆ ಮತ್ತೇನು ಇವರ ಕ್ಯಾತೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಬಿಜೆಪಿ ಸಂಸದರು ಕೂಡಲೇ ಕೇಂದ್ರದ ಮೇಲೆ ಒತ್ತಡ ಹೇರಿ ಸಮಿತಿ ರಚನೆಯಾಗದಂತೆ ನೋಡಿಕೊಳ್ಳಬೇಕು. ವಿನಾಕಾರಣ ವಿಳಂಬತೆ ಮಾಡದೇ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಬ್ರಿಟಿಷರ ವಿರುದ್ಧ ಭಾರತೀಯರೆಲ್ಲರೂ ಪ್ರತಿಭಟನೆ ನಡೆಸಿದಂತೆಯೇ ಉತ್ತರ ಕರ್ನಾಟಕದ ರೈತರು, ಜನಸಾಮಾನ್ಯರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಇತ್ತೀಚಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿತ್ತು. ಆದರೆ ಇದರ ವಿರುದ್ಧ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಇತ್ತೀಚಿಗೆ ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರದ ಪರಿಸರ ಸಚಿವ ಪ್ರಕಾಶ ಜಾವಡೇಕರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಯೋಜನೆ ಕೈಗೆತ್ತಿಕೊಳ್ಳಲು ಅನುಮತಿ ನೀಡಬಾರದು ಎಂದು ಮನವಿಯಲ್ಲಿ ತಿಳಿಸಿತ್ತು. ಅದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್‌, ಕಳಸಾ-ಬಂಡೂರಿ ಯೋಜನೆಗೆ ನೀಡಿರುವ ಪರಿಸರ ಅನುಮೋದನೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೆ ಇಲ್ಲಿನ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜಕಾರಣ ಬಿಡಿ, ಕೆಲಸ ಮಾಡಿ:

ಮಹದಾಯಿ ವಿಷಯದಲ್ಲಿ ದಶಕಗಳಿಂದಲೂ ಬರೀ ರಾಜಕಾರಣ ಮಾಡಿಕೊಂಡೆ ಬರಲಾಗುತ್ತಿದೆ. ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಯತ್ನವನ್ನು ಮಾಡುತ್ತಿವೆ. ಒಂದು ಯೋಜನೆಗೆ ಇಲಾಖೆ ಅನುಮತಿ ನೀಡಬೇಕೆಂದರೆ ಅದರ ಪೂರ್ವಾಪರವನ್ನೆಲ್ಲ ಅಧ್ಯಯನ ಮಾಡಿರುತ್ತದೆ. ಅದೇ ರೀತಿ ಕಳಸಾ-ಬಂಡೂರಿ ಯೋಜನೆ ಜಾರಿಯಿಂದ ಪರಿಸರ ಹಾನಿಯಾಗುತ್ತದೆಯೋ ಇಲ್ಲವೋ ಎಂಬುದನ್ನೆಲ್ಲ ಪರಿಶೀಲಿಸಿ ಅಧ್ಯಯನ ನಡೆಸಿಯೇ ಪರಿಸರ ಇಲಾಖೆ ಅನುಮತಿ ನೀಡಿದೆ. ಇದು ಕೂಡ ಗೊತ್ತಿಲ್ಲದವರು ಅದರ ಸಚಿವರಾಗಿದ್ದಾರೆ ಎಂದು ಜಾವಡೇಕರ್‌ ವಿರುದ್ಧ ಕಿಡಿಕಾರಿದ್ದಾರೆ. ಪರಿಸರ ಇಲಾಖೆ ಅನುಮತಿ ಕೊಟ್ಟಾಗ ಇದೇ ಜಾವಡೇಕರ್‌ ಸ್ವಾಗತಿಸಿ ಇದೀಗ ಅದರ ಪರಿಶೀಲನೆಗೆ ಸಮಿತಿ ರಚಿಸುತ್ತೇವೆ ಎಂದು ಹೇಳುತ್ತಿರುವುದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಹೋರಾಟಗಾರರು ಕಿಡಿಕಾರಿದ್ದಾರೆ.

ಈ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಕೂಡಲೇ ಸಮಿತಿ ಗಿಮಿತಿ ಏನನ್ನು ರಚಿಸದೇ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕಳಸಾ- ಬಂಡೂರಿ ಯೋಜನೆಯಿಂದ ನೀರು ನಮಗೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಸಚಿವ ಜಾವಡೆಕರ್‌ ಸಮಿತಿ ರಚಿಸುವುದಾಗಿ ನೀಡಿರುವ ಹೇಳಿಕೆಗೆ ಉತ್ತರ ಕರ್ನಾಟಕದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿರುವುದಂತೂ ಸತ್ಯ.

ನಮ್ಮ ನೀರನ್ನು ನಮಗೆ ಕೊಡಲು ಎಷ್ಟೊಂದು ಅಡ್ಡಿ ಪಡಿಸುತ್ತಿದ್ದಾರೆ. ಕೂಡಲೇ ಸಮಿತಿ ರಚನೆ ಮಾಡುವ ನಿರ್ಧಾರ ಕೈಬಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬ್ರಿಟಿಷರ ವಿರುದ್ಧ ಯಾವ ರೀತಿ ಭಾರತೀಯರೆಲ್ಲರೂ ಹೋರಾಟ ಮಾಡಿದ್ದರೂ ಅದೇ ಮಾದರಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕಾದೀತು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯ ಕುಲಕರ್ಣಿ ಅವರು ಹೇಳಿದ್ದಾರೆ. 

ಗೋವಾದ ಇಬ್ಬರು ಸಂಸದರಿಗಿರುವ ಬಲ ಕರ್ನಾಟಕದ 28 ಸಂಸದರಿಗೆ ಇಲ್ಲದಂತಾಗಿದೆ. ಮೊದಲು ಆ ರಾಜ್ಯದ ಸರ್ಕಾರ ವಿರೋಧಿಸುತ್ತಿವೆ ಎಂದು ಸಬೂಬು ಹೇಳುತ್ತಿದ್ದರು. ಆದರೆ ಇದೀಗ ಗೋವಾ, ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದರೂ ಜಾರಿಗೊಳಿಸುತ್ತಿಲ್ಲ. ಇದರ ಹಿಂದೆ ಷಡ್ಯಂತ್ರ ವಿದೆ ಎಂದು ಕರ್ನಾಟಕ ರೈತ ಸೇನೆಯ ಅಧ್ಯಕ್ಷರರಾದ ವೀರೇಶ ಸೊಬರದಮಠ ಅವರು ತಿಳಿಸಿದ್ದಾರೆ.