ಚಿಕ್ಕಬಳ್ಳಾಪುರ (ನ.25):  ಜಿಲ್ಲೆಯಲ್ಲಿ ರಾಗಿ, ನೆಲಗಡಲೆ ಸೇರಿದಂತೆ ಕೃಷಿ ಉತ್ಪನ್ನಗಳ ಕೊಯ್ಲು ನಡೆದು ಸಂಸ್ಕರಣಾ ಕಾರ್ಯ ಭರದಿಂದ ಸಾಗಿದೆ. ಆದರೆ ಇಲ್ಲಿಯವರೆಗೂ ರೈತರಿಗೆ ಪ್ರತಿ ವರ್ಷ ಸಕಾಲದಲ್ಲಿ ತಲುಪುತ್ತಿದ್ದ ಟಾರ್ಪಲ್‌ಗಳು ಮಾತ್ರ ಜಿಲ್ಲೆಯ ರೈತರಿಗೆ ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ಕೃಷಿ ಇಲಾಖೆ ಟಾರ್ಪಲ್‌ ವಿತರಿಸದೇ ಕಾರಣ ಅನ್ನದಾತರ ಪಾಲಿಗೆ ಟಾರ್ಪಲ್‌ಗಳು ಮರೀಚಿಕೆಯಾಗಿ ಬೆಳೆ ಸಂರಕ್ಷಣೆಗೆ ಪರದಾಡಬೇಕಿದೆ.

ಹೌದು, 2019-20ನೇ ಸಾಲಿನಡಿ ಜಿಲ್ಲೆಗೆ ಕೃಷಿ ಭಾಗ್ಯ ಯೋಜನೆಯಡಿ ಟಾರ್ಪಲ್‌ ಖರೀದಿಗೆ ಇನ್ನೂ ಸರ್ಕಾರ ಅನುದಾನ ಬಿಡುಗಡೆಗೊಳಿಸದ ಕಾರಣ ಜಿಲ್ಲೆಯ ಸಾವಿರಾರು ರೈತರು ಟಾರ್ಪಲ್‌ಗಳಿಂದ ವಂಚಿತರಾಗಿ ಜಿಲ್ಲೆಯ ಖಾಸಗಿ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ಟಾರ್ಪಲ್‌ ಖರೀದಿಸುವ ಸಂಕಷ್ಟಎದುರಾಗಿದೆ.

ಕೊಪ್ಪಳ: ಎಡೆ ಹೊಡೆಯಲು ಸೈಕಲ್‌ ಬಳಕೆ, ಯುವಕನ ಹೊಸ ಐಡಿಯಾಗೆ ರೈತರ ಮೆಚ್ಚುಗೆ..!

ಸರ್ಕಾರ ಅನುದಾನ ನೀಡಿಲ್ಲ

ರಾಗಿ, ನೆಲಗಡಲೆ, ತೊಗರಿ, ಅಲಸಂದಿ ಸೇರಿದಂತೆ ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನು ಕೊಯ್ಲಿನ ನಂತರ ಸಂಸ್ಕರಣೆ ಮಾಡಿಕೊಳ್ಳಲು ಸಣ್ಣ, ಅತಿ ಸಣ್ಣ ರೈತರಿಂದ ಹಿಡಿದು ಬೃಹತ್‌ ರೈತರಿಗೂ ಟಾರ್ಪಲ್‌ಗಳ ಆಸರೆಯಾಗುತ್ತೇವೆ. ಆದರೂ ರಾಗಿ ಬೆಳೆ ಸಂಸ್ಕರಣೆಗೆ ಟಾರ್ಪಲ್‌ ಬೇಕೆ ಬೇಕು. ಆದರೆ ಇದುವರೆಗೂ ರಾಜ್ಯ ಸರ್ಕಾರ ಟಾರ್ಪಲ್‌ ಸರಬರಾಜುಗೆ ಕೃಷಿ ಇಲಾಖೆಗೆ ಅನುದಾನ ಬಿಡುಗಡೆಗೊಳಿಸದ ಕಾರಣ ರೈತರು ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಕೃಷಿ ಇಲಾಖೆ ವಿತರಿಸದೇ ಇರುವುದನ್ನು ಬಂಡವಾಳ ಮಾಡಿಕೊಂಡಿರುವ ಟಾರ್ಪಲ್‌ ಮಾರಾಟಗಾರರು ಮಾರುಕಟ್ಟೆಯಲ್ಲಿ ರೈತರಿಗೆ ತೀರಾ ಅವಶ್ಯಕವಾದ ಟಾರ್ಪಲ್‌ಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡುತ್ತಿದ್ದು ಅದರಲೂ ಕಳಪೆ ಗುಣಮಟ್ಟದ ಟಾರ್ಪಲ್‌ಗಳು ಮಾರಾಟ ಮಾಡುತ್ತಿದ್ದರೂ ಯಾರು ಹೇಳೋರು ಕೇಳೋರು ಇಲ್ಲವಾಗಿದ್ದು ಟಾರ್ಪಲ್‌ 1ಕ್ಕೆ ಬರೊಬ್ಬರಿ 750 ರಿಂದ 1,500, 2,000, 3,000 ರು, ವರೆಗೂ ಮಾರಾಟ ಮಾಡಲಾಗುತ್ತಿದೆ.

50 ಸಾವಿರ ಟಾರ್ಪಲ್‌ಗೆ ಬೇಡಿಕೆ:  ಜಿಲ್ಲೆಯಲ್ಲಿ 26 ರೈತ ಸಂಪರ್ಕ ಕೇಂದ್ರಗಳಿದ್ದು ಪ್ರತಿ ರೈತ ಸಂಪರ್ಕ ಕೇಂದ್ರದಿಂದ ಕನಿಷ್ಠ 2000 ಟಾರ್ಪಲ್‌ಗಳಿಗೆ ಬೇಡಿಕೆ ಇದೆ. ಆದರೆ ಕೃಷಿ ಇಲಾಖೆಗೆ ರಾಜ್ಯ ಸರ್ಕಾರ 2019-20ನೇ ಸಾಲಿಗೆ 8200 ಟಾರ್ಪಲ್‌ಗಳ ಗುರಿ ನೀಡಿದೆ. ಆದರೆ ಖರೀದಿಗೆ ಅನುದಾನ ಇನ್ನೂ ಬಿಡುಗಡೆಗೊಳಿಸದ ಕಾರಣ ಕೃಷಿ ಅಧಿಕಾರಿಗಳು ಕೈ ಕಟ್ಟಿಕೂರುವಂತಾಗಿದೆ.

ಕೋವಿಡ್‌ ಹಿನ್ನಲೆಯಲ್ಲಿ ಟಾರ್ಪಲ್‌ ಉತ್ಪಾದನೆ ಹಾಗೂ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಜಿಲ್ಲೆಗೆ ಟಾರ್ಪಲ್‌ಗಳು ಇನ್ನೂ ಸರಬರಾಜು ಆಗಿಲ್ಲ. ಜೊತೆಗೆ 2019-20ನೇ ಸಾಲಿನ ಯೋಜನೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕಿರುವುದರಿಂದ ಯೋಜನೆಯಡಿ ಫಲಾನುಭವಿಗಳಿಗೆ ಇನ್ನೂ ಟಾರ್ಪಲ್‌ ವಿತರಿಸಿಲ್ಲ

ಎಲ್‌.ರೂಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ.