ರೈತರಿಗೆ ಸಾಲ ವಸೂಲಾತಿ ನೋಟಿಸ್ ಶೂಲ: ಕಂಗಾಲಾದ ಅನ್ನದಾತ..!
ಕೃಷಿ ಸಾಲ ಪಡೆದಂತಹ ಜಿಲ್ಲೆಯ ರೈತರ ಪಟ್ಟಿ ಮಾಡಿರುವ ಬ್ಯಾಂಕ್‌ಗಳು ಸಾಲ ಮರುಪಾವತಿಯ ನೋಟಿಸ್ ಜಾರಿ ಮಾಡುತ್ತ ಬೆನ್ನು ಬಿದ್ದಿವೆ. ಕನ್ನಡಪ್ರಭಕ್ಕೆ ಲಭ್ಯ ಮಾಹಿತಿ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಈಗಾಗಲೇ ಬಡಪಾಯಿ ರೈತರಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಿವೆ.
ಶೇಷಮೂರ್ತಿ ಅವಧಾನಿ
ಕಲಬುರಗಿ(ಡಿ.23): ಭೀಕರ ಬರಗಾಲದಿಂದಾಗಿ ಮೊದಲೇ ಕಂಗಾಲಾಗಿರುವ ಜಿಲ್ಲೆಯ ಸಣ್ಣ, ಅತೀಸಣ್ಣ ರೈತರಿಗೆ ಇದೀಗ ಬ್ಯಾಂಕ್‌ಗಳು ಸಾಲ ವಸೂಲಾತಿ ನೋಟಿಸ್ ಜಾರಿ ಮಾಡುತ್ತಿರುವುದರಿಂದ ರೈತರು ಇನ್ನಷ್ಟು ಪರೇಶಾನ್ ಆಗುವಂತಾಗಿದೆ. ಕೃಷಿ ಸಾಲ ಪಡೆದಂತಹ ಜಿಲ್ಲೆಯ ರೈತರ ಪಟ್ಟಿ ಮಾಡಿರುವ ಬ್ಯಾಂಕ್‌ಗಳು ಸಾಲ ಮರುಪಾವತಿಯ ನೋಟಿಸ್ ಜಾರಿ ಮಾಡುತ್ತ ಬೆನ್ನು ಬಿದ್ದಿವೆ. ಕನ್ನಡಪ್ರಭಕ್ಕೆ ಲಭ್ಯ ಮಾಹಿತಿ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಈಗಾಗಲೇ ಬಡಪಾಯಿ ರೈತರಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಿವೆ.
ಇನ್ನೂ ಹಲವಾರು ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ಗಳು ಈ ದಿಶೆಯಲ್ಲಿ ನೋಟಿಸ್ ಸಿದ್ಧಪಡಿಸಿಕೊಳ್ಳುತ್ತಿದ್ದು ರೈತರನ್ನು ಇನ್ನೂ ಪರೇಶಾನ್ ಮಾಡಲು ಸಿದ್ಧವಾಗಿ ಕುಳಿತಿವೆ. ಸುಂಠಾಣದ ರೈತ ಬಸಣ್ಣಪೂಜಾರಿಗೆ ಕರ್ನಾಟಕ ಗ್ರಾಮೀಣ ಬ್ಯಾಂತ್ ನೀಡಿರುವ ಸಾಲದ ನೋಟಿಸ್‌ನಲ್ಲಿ ತಮ್ಮ ಸಾದ ಖಾತೆಗೆ 22,322 ರುಪಾಯಿ ಸಾಲದ ಮೊತ್ತವಿದ್ದು , ಶೇ.12ರ ಬಡ್ಡಿಯಂತೆ ನಿಮ್ಮ ಸಾಲದ ಎಲ್ಲಾ ಹಣ ಮರಳಿಸುವಂತೆ ಸೂಚಿಸಿದೆ!
ಬ್ಯಾಂಕ್ ಸಾಲಕ್ಕೆ ಗೃಹಲಕ್ಷ್ಮೀ ಭರ್ತಿ: ಪ್ರಿಯಾಂಕ್ ಖರ್ಗೆ ಅಸಮಾಧಾನ
ಇನ್ನು ಇದೇ ರೀತಿ ಎಸ್ಬಿಐ ಬ್ಯಾಂಕಿನವರು ಚಿಂಚೋಳಿಯ ಬಾಲಮಣಿ ಇವರಿಗೆ ನೋಟಿಸ್ ನೀಡುತ್ತಾ 1.34 ಲಕ್ಷ ರು. ಸಾಲದ ಮೊತ್ತ ಇದೀಗ 2.52 ಲಕ್ಷವಾಗಿದೆ. ಲೋಕ ಅದಾಲತ್‌ನಲ್ಲಿ ರಾಜೀ ಮೂಲಕ ನಿಮ್ಮ ಸಾಲದ ಲೆಕ್ಕ ಚುಕ್ತಾ ಮಾಡಿಕೊಳ್ಳಿ ಎಂಜು ನೊಟೀಸ್‌ನಲ್ಲಿ ಸೂಚಿಸಿದೆ.
ಇದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಈ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಸಾಲದ ಹಣ ಮರುಪಾವತಿಗಾಗಿ ಬೆನ್ನು ಬಿದ್ದಿವೆ. ಇದರಿಂದ ರೈತರು ಬೇಸತ್ತಿದ್ದಾರೆ. ಮೊದಲೇ ಬರಗಾಲ, ಬಳೆ ಬೆಳೆದಿಲ್ಲ. ಅದೆಲ್ಲಿಂದ ಸಾಲದ ಹಣ ಪಾವತಿ ಮಾಡೋದ? ಬ್ಯಾಂಕ್‌ಗಳು ನೋಟಿಸ್ ಮೇಲೆ ನೋಟಿಸ್ ಕೊಡುತ್ತ ನಮ್ಮನ್ನು ಪೀಡಿಸುತ್ತಿದ್ದಾರೆಂದು ಗೋಳಾಡುತ್ತಿದ್ದಾರೆ.
ಈಗಾಗಲೇ ಬರಗಾಲದಿಂದಾಗಿ ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೂ ಜಿಲ್ಲೆಯ 20ಕ್ಕೂ ಹೆಚ್ಚು ರೈತರು ಸಾವಿನ ಮನೆ ಸೇರಿದ್ದಾರೆ. ಇದೀಗ ಬ್ಯಾಂಕ್‌ಗಳವರು ಹೀಗೆ ಸಾಲದ ಪಾವತಿಗಾಗಿ ಬೆನ್ನು ಬಿದ್ದಲ್ಲಿ ಇನ್ನೂ ಹೆಚ್ಚಿನ ರೈತರು ಆತ್ಮಹತ್ಯೆ ದಾರಿ ತುಳಿಯುವ ಆತಂಕಗಳು ಎದುರಾಗಲಿವೆ ಎಂದು ಅನೇಕರು ಬ್ಯಾಂಕ್‌ಗಳ ಸಾಲದ ವಸೂಲಾತಿ ಧೋರಣೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ.
ರಸಗೊಬ್ಬರ, ಬೀಜ, ಔಷಧಿ ಬೆಲೆ ಗಗನಕ್ಕೇರಿದೆ. ರೈತರು ಹತಾಶರಾಗಿದ್ದಾರೆ. ತೊಗರಿಯ ನಾಡಿನಲ್ಲಿ ಸರಿಯಾದ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಕಾರಣ ರೈತರು ರೊಕ್ಕದ ಮಾಲು ಹೆಸರು, ಉದ್ದು, ಸೊಯಾಬಿನ್, ತೊಗರಿ ಸಿಕ್ಕಾಪಟ್ಟೆ ಲಾಗುವಾಡಿ ಮಾಡಿದ ರೊಕ್ಕ ಕೈಗೆ ಬರದಂತಾಗಿದೆ. ಸಾಲದ ಸುಳಿವಿನಲ್ಲಿ ರೈತರು ಒದ್ದಾಡುತ್ತಿದ್ದಾರೆ.
ಈ ಹಂತದಲ್ಲಿ ರೈತರಿಗೆ ಹೀಗೆ ಬೆನ್ನುಬೀಳೋದು ಸರಿಯಲ್ಲ. ಸಾಲ ಬಾಧೆ ತಾಳದೇ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ವರ್ಷವೂ ರೈತರ ಒಕ್ಕಲುತನ ಕಮ್ಮಿಯಾಗುತ್ತಿದೆ. ಅನ್ನದಾತರಿಗೆ ಉಳಿಗಾಲವಿಲ್ಲದಂತಿದೆ. ರೈತರ ಆರ್ಥಿಕ ಪರಿಸ್ಥಿತಿ ನೆಲ ಕಚ್ಚುತ್ತಿದೆ, ಪೈತರು ಕವಲು ದಾರಿಯಲ್ಲಿರುವಾಗ ಬ್ಯಾಂಕ್‌ಗಳ ಸಾಲ ವಸೂಲಾತಿ ಧೋರಣೆ ಅವರನ್ನು ಮತ್ತಷ್ಟೂ ಸಂಕಷ್ಟಕ್ಕೆ ಗುರಿಯಾಗಿಸಿದೆ.
ಕಲಬುರಗಿ ಜೈಲಿಗೆ ನಿತ್ಯ ಗುಟ್ಕಾ, ಸಿಗರೆಟ್ ಪೂರೈಕೆ: ವಿಡಿಯೋ ಬಯಲು
ರೈತರ ಗೋಳು ಕೇಳೋರಿಲ್ಲ!
ರೈತರು ಬೆಳೆದ ಬೆಳೆಗಳು ಈ ವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೃಷಿಕರು ಬೆಳೆದ ಬೆಳೆಗಳಿಗೆ ಕವಡೆ ಕಿಮ್ಮತ್ತು ಇಲ್ಲದಂತಾಗಿದೆ. ಹಗಲು, ಇರುಳು ಕಷ್ಟಪಟ್ಟು ಬೆಳೆದ ಮಾಲು ಮಾರ್ಕೆಟ್‍ಗೆ ತಂದ ಮಾಲು ಕುಣಿಗೆ ಒಯ್ದ ಹೆಣವಾಗಿದೆ. ಕುಡಿವ ನೀರಿನ ಹಾಹಾಕಾರ, ದನಕರುಗಳಿಗೆ ಮೇವಿನ ಸಂಕಷ್ಟದಲ್ಲಿರುವ ರೈತರಿಗೆ ಅನ್ಯಾಯ ಮಾಡುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ಈಗಾಗಲೇ ಸಾಲ ವಸೂಲಾತಿ ನೋಟಿಸ್ ಕೊಡುತ್ತಿರುವುದು ಭಯ ಹುಟ್ಟಿಸಿದೆ. ಸರಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಬರಗಾಲದ ಕುರಿತು ಲೆಕ್ಕಿಸದೇ ಸಾಲ ವಸೂಲಾತಿಗೆ ಮುಂದಾಗಿರುವುದು ನ್ಯಾಯ ಸಮ್ಮತವಲ್ಲವೆಂದು ರೈತ ಸಮೂಹವೇ ಅಲವತ್ತುಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಿಸುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಸಾಲ ವಸೂಲಾತಿ ನೋಟಿಸ್ ಕೊಡುತ್ತಿರುವುದನ್ನು ತಕ್ಷಣವೇ ತಡೆಯಬೇಕು. ಬರಗಾಲ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ವಸೂಲಾತಿ ನೋಟಿಸ್ ಕೊಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ನೆರವಿಗೆ ಬರಬೇಕು. ಇಲ್ಲವಾದಲ್ಲಿ ಬ್ಯಾಂಕ್‍ಗಳ ಎದುರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕಲಬುರಗಿ ಜಿಲ್ಲೆ ಪ್ರಾಂತ ರೈತ ಸಂಘಟನೆ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.