Gadag: ಮಲಪ್ರಭಾ ಕಾಲುವೆಗೆ ಹೆದರಿ ಬಿತ್ತನೆ ಮಾಡೋದನ್ನೇ ಬಿಟ್ಟ ರೈತರು..!

*  20 ವರ್ಷದಿಂದ 30 ಎಕರೆ ಬಿತ್ತನೆಯಾಗುತ್ತಿಲ್ಲ
*  ಹಳ್ಳಕ್ಕೆ ಸೇರಬೇಕಿದ್ದ ನೀರು ಜಮೀನಿಗೆ ನುಗ್ಗುತ್ತಿದೆ
*  ಕೊನೆಯ 1 ಕಿಮೀ ಕಾಲುವೆಯನ್ನೇ ನಿರ್ಮಿಸದ ಅಧಿಕಾರಿಗಳು
 

Farmers Did Not Sowing Due to Fear of Malaprabha Canal in Gadag grg

ಸಂಜೀವಕುಮಾರ ಹಿರೇಮಠ

ಹೊಳೆಆಲೂರ(ನ.25):  ರೈತರಿಗೆ ಉತ್ತಮ ಬೆಳೆ ಬೆಳೆಯಲು ನೆರವಾಗಬೇಕಿದ್ದ ಮಲಪ್ರಭಾ ಕಾಲುವೆ(Malaprabha Canal) ಶಾಪವಾಗಿ ಪರಿಣಮಿಸಿದೆ. ಕಾಲುವೆ ನಿರ್ಮಿಸುವಾಗ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದ 20 ವರ್ಷದಿಂದ 30 ಎಕರೆ ಪ್ರದೇಶದಲ್ಲಿ ರೈತರು(Farmers) ಬಿತ್ತನೆ(Sowing) ಮಾಡುವುದನ್ನೇ ಬಿಟ್ಟಿದ್ದಾರೆ.

ಹೌದು. ಇದು ಬೆನಹಾಳ ರೈತರು ಪ್ರತಿ ವರ್ಷ ಅನುಭವಿಸುತ್ತಿರುವ ಯಾತನೆ. ಮಲಪ್ರಭಾ ನದಿಯಿಂದ(Malaprabha River) ನರಗುಂದ(Nargund) ಮಾರ್ಗವಾಗಿ ಬೆನಹಾಳ ವರೆಗೆ 20 ವರ್ಷದ ಹಿಂದೆ ಕಾಲುವೆ(Canal) ನಿರ್ಮಿಸಲಾಗಿದೆ. ಜಮೀನುಗಳಿಗೆ(Land) ಬಳಕೆಯಾಗಿ ಉಳಿದ ನೀರು(Water) ಹಿರೇಹಳ್ಳಕ್ಕೆ ಸೇರುವಂತೆ ಮಾಡಲಾಗಿದೆ. ಆದರೆ, ಹಳ್ಳ ಇನ್ನೂ 1 ಕಿಮೀ ದೂರ ಇರುವಾಗಲೇ ಅಧಿಕಾರಿಗಳು ಕಾಲುವೆ ಕಾಮಗಾರಿ ಮೊಟಕುಗೊಳಿಸಿದ್ದಾರೆ.

Gadag| ಅಕಾಲಿಕ ಮಳೆಗೆ ಸೋರುತ್ತಿವೆ ಬಡವರ ಮನೆಗಳು

ಜಮೀನಿಗೆ ನುಗ್ಗುವ ನೀರು:

ಪ್ರತಿ ವರ್ಷ ಕಾಲುವೆಗೆ ಬಿಟ್ಟನೀರು ಮುಂದೆ ಹಳ್ಳಕ್ಕೆ ಸೇರದೆ ಜಮೀನುಗಳಿಗೆ ನುಗ್ಗುತ್ತದೆ. ಇದರಿಂದ ಕಾಲುವೆಯ ಕೊನೆಯ ಭಾಗದ 10ರಿಂದ 15 ರೈತರು ಬಿತ್ತನೆ ಮಾಡುವುದನ್ನೇ ಬಿಟ್ಟಿದ್ದಾರೆ. ಒಂದು ವೇಳೆ ಬಿತ್ತನೆ ಮಾಡಿದರೂ ಕಾಲುವೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತದೆ ಎಂದು ಹೆದರಿ ಆ ಜಮೀನುಗಳತ್ತ ಮುಖಮಾಡುವುದನ್ನೇ ಬಿಟ್ಟಿದ್ದಾರೆ.

ಕೆರೆಯಂತೆ ಆದ ಜಮೀನು:

ಕಾಲುವೆಯ ಕೊನೆಯ ಭಾಗದ ರೈತ ರಾಮನಗೌಡ ಟಿ. ಪಾಟೀಲ ಅವರ 24 ಎಕರೆ ಜಮೀನಿನಲ್ಲಿ ಕಾಲುವೆ ನೀರು ಹರಿದಿದೆ. ಇದರಲ್ಲಿ 13 ಎಕರೆ ಸಂಪೂರ್ಣವಾಗಿ ಜಲಾವೃತವಾಗಿದೆ. ಬಳಕೆಯಾಗದ ನೀರು ಹಳ್ಳ ಸೇರದೆ ಇವರ ಜಮೀನಿಗೆ ನುಗ್ಗುತ್ತದೆ. ಇದರಲ್ಲಿ ಕಡಲೆ ಬೆಳೆ(Crop) ಐದು ದಿನಗಳಿಂದ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಧಾವಿಸಿಲ್ಲ.

ಬಿತ್ತುವುದನ್ನೇ ಬಿಟ್ಟರು:

ರೈತರು ಈ ಸಮಸ್ಯೆ ಅನುಭವಿಸುತ್ತಿರುವುದು ನಿನ್ನೆ ಮೊನ್ನೆಯದಲ್ಲ. 20 ವರ್ಷಗಳಿಂದ ಈ ಸಂಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ರೈತರು ಪ್ರತಿಭಟನೆ ನಡೆಸಿದಾಗ ಹಳ್ಳಕ್ಕೆ ನೀರು ಹರಿದು ಹೋಗಲು ಸಣ್ಣ ಕಾಲುವೆ ತೊಡಿಸಲಾಗಿದೆ. ಆದರೆ, ಅದು ಮುಚ್ಚಿ ಹೋಗಿದೆ. ಹೀಗಾಗಿ ಕಾಲುವೆ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿದ ಪರಿಣಾಮ 30 ಎಕರೆ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯವನ್ನೇ ಬಿಟ್ಟಿದ್ದಾರೆ.

ರೈತರೇ ದುರಸ್ತಿ ಮಾಡಿದರು:

ಕಾಲುವೆ ನಿರ್ಮಿಸಿ ಹೋದ ಅಧಿಕಾರಿಗಳು ಅವುಗಳ ನಿರ್ವಹಣೆಯನ್ನೇ ಬಿಟ್ಟಿದ್ದಾರೆ. ಪ್ರತಿ ವರ್ಷ ಕಾಲುವೆಯಲ್ಲಿ ಬೆಳೆದ ಗಿಡ-ಕಂಠಿಗಳನ್ನು ರಾಮನಗೌಡ ಪಾಟೀಲ ಅವರು ಇತರ ರೈತರೊಂದಿಗೆ ಸೇರಿ ಸ್ವಂತ ಹಣದಲ್ಲಿ ಸ್ವಚ್ಛಗೊಳಿಸಿದ್ದಾರೆ. ಕಾಲುವೆ ಪಕ್ಕದ ರಸ್ತೆಯಲ್ಲಿ ಬಿದ್ದ ರಸ್ತೆಗಳಿಗೆ ಇವರೇ ಮಣ್ಣು ಹಾಕಿಸಿದ್ದಾರೆ. ರಾಮನಗೌಡ ಪಾಟೀಲ ಅವರ ಜಮೀನಿನಲ್ಲಿ ಕಾಲುವೆ ನೀರು ಕೋಡಿ ಬಿದ್ದು ಪ್ರತಿ ವರ್ಷ ತಗ್ಗು ಬೀಳುತ್ತದೆ. ಇದನ್ನು ಸಮತಟ್ಟು ಮಾಡಲು 80ರಿಂದ 1 ಲಕ್ಷ ಖರ್ಚು ಮಾಡುತ್ತಿದ್ದಾರೆ. ತಮ್ಮ ಸುತ್ತಮುತ್ತಲಿನ ರೈತರ ಸಂಕಟವನ್ನು ಹಲವು ಬಾರಿ ಇಲಾಖಾ ಅಧಿಕಾರಿಗಳಿಗೆ ಹೇಳಿದರೂ ಯಾರೊಬ್ಬರು ಇತ್ತ ಹೆಜ್ಜೆ ಇಟ್ಟಿಲ್ಲ.

'ಕಪ್ಪತಗುಡ್ಡವ ಆಯುರ್ವೇದ ಔಷಧಿಗಳ ತಾಣ'

ಇನ್ನಾದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ವಾರದೊಳಗೆ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

ಬಳಕೆಯಾಗಿ ಉಳಿದ ನೀರು ಹಳ್ಳ ಸೇರಲು ಕಾಲುವೆ ನಿರ್ಮಿಸಿಲ್ಲ. ಇದರಿಂದ ನಮ್ಮ ಜಮೀನಿಗೆ ನೀರು ನುಗ್ಗಿ ಪ್ರತಿ ವರ್ಷ ಅಪಾರ ಹಾನಿ ಅನುಭವಿಸುತ್ತಿದ್ದೇವೆ. 20 ವರ್ಷದಿಂದಲೂ ನಮಗೆ ನೀರಾವರಿ ಇಲಾಖೆಯಿಂದ ಅನ್ಯಾಯವಾಗಿದೆ. ಕೆಲ ರೈತರು ಬೆಳೆ ಬೆಳೆಯುವದನ್ನೇ ಬಿಟ್ಟಿದ್ದಾರೆ ಅಂತ ರೈತ ರಾಮನಗೌಡ ಪಾಟೀಲ ತಿಳಿಸಿದ್ದಾರೆ. 

ಕಾಲುವೆಗೆ ಹರಿಯುವ ನೀರನ್ನು ಬಂದ್‌ ಮಾಡಿಸಲಾಗಿದೆ. ನನಗೆ ಅದರ ಮಾಹಿತಿ ಇರಲಿಲ್ಲ. ಗುರುವಾರವೇ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ. ಅದು ದೊಡ್ಡ ಸಮಸ್ಯೆಯಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಂದು ವಾರದೊಳಗೆ ಸಮಸ್ಯೆ ನಿವಾರಿಸಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿ (ಮಲ್ಲಾಪುರ ಡಿವಿಜನ್‌)ಪ್ರಭಾಕರ ಟಿ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios