ಕರೆಂಟ್ ಕೊಡಿ ಇಲ್ಲ, ವಿಷ ಕೊಡಿ: ರೈತರ ಒತ್ತಾಯ
ಬರಗಾಲದ ನಡುವೆ ಕೊಳವೆ ಬಾವಿಗಳನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವ ರೈತರಿಗೆ ಬೆಸ್ಕಾಂ ಇಲಾಖೆ ಮೋಸ ಮಾಡುತ್ತಿದೆ. ಸಮರ್ಪಕವಾದ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ನಮಗೆ ಕರೆಂಟ್ ಕೊಡಿ, ಇಲ್ಲಾ ವಿಷ ಕೊಡಿ ಎಂದು ರೈತರು ಬೆಸ್ಕಾ ಇಲಾಖೆಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು.

ಗುಡಿಬಂಡೆ : ಬರಗಾಲದ ನಡುವೆ ಕೊಳವೆ ಬಾವಿಗಳನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವ ರೈತರಿಗೆ ಬೆಸ್ಕಾಂ ಇಲಾಖೆ ಮೋಸ ಮಾಡುತ್ತಿದೆ. ಸಮರ್ಪಕವಾದ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ನಮಗೆ ಕರೆಂಟ್ ಕೊಡಿ, ಇಲ್ಲಾ ವಿಷ ಕೊಡಿ ಎಂದು ರೈತರು ಬೆಸ್ಕಾ ಇಲಾಖೆಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ರೈತರ ಜಮೀನುಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡುವಂತೆ ತಿಳಿಸಿದೆ. ಆದರೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾತ್ರ ರೈತರಿಗೆ ಮೋಸ ಮಾಡುತ್ತಿದೆ. ಕನಿಷ್ಠ ಐದು ಗಂಟೆಯಾದರು ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕೊಳವೆಬಾವಿಯನ್ನು ನಂಬಿಕೊಂಡು ಬೆಳೆ ಇಟ್ಟಿದ್ದೇವೆ. ಬೆಳೆ ಬಂದರೆ ಸಾಲ ತೀರಿಸಬಹುದು. ಬೆಸ್ಕಾ ಇಲಾಖೆಯ ಅಧಿಕಾರಿಗಳು ಅದಕ್ಕೂ ತಣ್ಣೀರೆರಚಿದ್ದಾರೆ. ಆದ್ದರಿಂದ ಸಮರ್ಪಕವಾಗಿ ವಿದ್ಯುತ್ ನೀಡಿ ಇಲ್ಲ, ನಮಗೆ ವಿಷ ಕೊಡಿ ಎಂದು ಬೆಸ್ಕಾ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕ್ರಷರ್‌ಗಳಿಗೆ ಸಮರ್ಪಕ ವಿದ್ಯುತ್
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮನಾಥ್ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಮಳೆಯ ಅಭಾವದಿಂದ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೆಚ್ಚಿನ ರೈತರು ಕೊಳವೆಬಾವಿಯನ್ನೇ ನಂಬಿಕೊಂಡಿದ್ದಾರೆ. ಆದರೆ ಕನಿಷ್ಠ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಬೆಳೆ ನಾಶವಾಗುತ್ತಿದೆ. ಜಲ್ಲಿ ಕ್ರಷರ್ ಗಳಿಗೆ ದಿನಪೂರ್ತಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರೈತರಿಗೆ 7 ಗಂಟೆಗಳ ಕಾಲ 3 ಫೇಸ್ ಹಾಗೂ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಇಲ್ಲವಾದಲ್ಲಿ ಕಚೇರಿ ಮುಂಭಾಗ ಅನಿದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಪೂರೈಸುವ ಭರವಸೆ
ಬಳಿಕ ಬೆಸ್ಕಾ ಎ.ಇ.ಇ ಬಾಬು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸಲಾಗುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.