ಔರಾದ್ (ಸೆ.26): ತಾಲೂಕು ವ್ಯಾಪ್ತಿಯ ಬಹುತೇಕ ರಸ್ತೆಗಳ ಮೇಲೆಯೇ ರೈತರು ಭರ್ಜರಿಯಾಗಿ ರಾಶಿಯಲ್ಲಿ ತೊಡಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರ ಸಂಚಾರಕ್ಕೆ ಕಷ್ಟವಾಗಿದೆ. ಕಳೆದ ಎರಡು ಮೂರು ವಾರಗಳಿಂದ ರಾಶಿ ಮಾಡುವುದು ಶುರುವಾಗಿದೆ. ಸದ್ಯ ಸುಗ್ಗಿಕಾಲ ಪ್ರಾರಂಭವಾಗಿದೆ ಎನ್ನುವಂತಾಗಿದೆ. ಸೆಪ್ಟೆಂಬರ್ ಬಂದ್ರೆ ಸಾಕು, ರಸ್ತೆಗಳ ಮೇಲೆ ರಾಶಿಗಳ ದರ್ಬಾರು ನಡೆಯುತ್ತಿದ್ದು, ವಾಹನ ಸವಾರರಿಗೆ ಮಾತ್ರ ಕಂಟಕವಾಗಿ ಪರಿಗಣಿಸಿದೆ.

ಹಲವು ವರ್ಷಗಳಿಂದಲೂ ರಸ್ತೆಗಳ ಮೇಲೆಯೇ ರಾಶಿ ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಗುಂಪು ಗುಂಪುಗಳಾಗಿ ರಸ್ತೆಗಳಲ್ಲಿ ವಿವಿಧ ಧಾನ್ಯಗಳ ತೆನೆಗಳನ್ನು ಹಾಕಲಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ ಪರದಾಡುವಂತಾಗಿದೆ. ಅಪಾಯಕ್ಕೆ ಆಹ್ವಾನ: ರೈತರ ಜಮೀನಿನಲ್ಲಿ ಬೆಳೆಗಳ ಕಟಾವು ನಡೆಯುತ್ತಿದ್ದು, ರಾಶಿ ಕಾರ್ಯ ಆರಂಭವಾಗಿದೆ. 

ರೈತರು ಹೊಲದಲ್ಲಿ ಕಣಗಳನ್ನು ನಿರ್ಮಿಸದೇ ರಸ್ತೆ ಮೇಲೆ ರಾಶಿ ಮಾಡುತ್ತಿದ್ದಾರೆ. ತಾಲೂಕಿನ ಚಿಂತಾಕಿ, ವಡಗಾಂವ, ಸಂತಪೂರ ಸುತ್ತಲಿನ ಭಾಗದಲ್ಲಿ ಹೆಸರು ಸೇರಿದಂತೆ ವಿವಿಧ ಧಾನ್ಯಗಳ ರಾಶಿಗಳನ್ನು ರಸ್ತೆಯುದ್ದಕ್ಕೂ ಹಾಕುತ್ತಾರೆ. ವಾಹನ ಸವಾರರು ಸಂಚಾರಕ್ಕಾಗಿ ಹರಸಾಹಸ ಪಡುವಂತಾಗಿದೆ. ರಸ್ತೆ ಮೇಲೆ ರಾಶಿ ಮಾಡುವ ವೇಳೆ ವಾಹನಗಳ ಬರುವಿಕೆಯನ್ನು ಲೆಕ್ಕಿಸದೇ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. 

ಕಣ ಕಟ್ಟೆಗಳು ನಿರ್ಮಿಸಿ:

ತಾಲೂಕಿನ ಅನೇಕ ಭಾಗದಲ್ಲಿ ಗ್ರಾಮಗಳ ರಸ್ತೆಗಳ ಮೇಲೆ ರಾಶಿಗಳ ಕಾರ್ಯ ಪ್ರತಿ ವರ್ಷವೂ ನಡೆಯುತ್ತಿದೆ. ರಸ್ತೆಗಳಲ್ಲಿ ರಾಶಿ ನಡೆಸುವುದರಿಂದ ಹಲವು ಸಮಸ್ಯೆ ಉಂಟಾಗುತ್ತಿವೆ. ವಾಹನ ಸವಾರರು ತೊಂದರೆಯಿಂದ ರಸ್ತೆ ಮೂಲಕ ಸಂಚಾರ ಮಾಡುವಂತಾಗಿದೆ. 

ರಾತ್ರಿ ವೇಳೆಯಂತೂ ವಾಹನಗಳು ವೇಗವಾಗಿ ಚಲಾಯಿಸಿದರೆ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿನ ರಾಶಿ ಮಾಡಲು ಕಣ ಕಟ್ಟೆಗಳನ್ನು ನಿರ್ಮಿಸದೆ ರಸ್ತೆಗಳೆ ಕಣವಾಗಿ ಮಾರ್ಪಟ್ಟಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಹಲವು ವರ್ಷಗಳಿಂದ ರೈತರು ರಸ್ತೆಯ ಮೇಲೇಯೇ ರಾಶಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಬಂದರೂ ಸಂಬಂಧಿತ ಯಾವೊಬ್ಬ ಅಧಿಕಾರಿಯೂ ಕೂಡ ರಸ್ತೆ ಹಾಳಾಗುತ್ತಿರುವ ಕುರಿತು ಕ್ರಮ ಅಥವಾ ರೈತರ ಬೇಡಿಕೆಗೆ ಅನುಗುಣವಾಗಿ ಕಣ ಕಟ್ಟೆಗಳು ನಿರ್ಮಿಸಿ ಕೊಡುವ ಬಗ್ಗೆ ಚಿಂತನೆ ಮಾಡಿಲ್ಲ. ಕೂಡಲೇ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ರಾಶಿ ಮಾಡಲು ಅನುಕೂಲವಾಗುವ ಕಣ ಕಟ್ಟೆಗಳನ್ನು ಸರ್ಕಾರಿ ಸ್ಥಳದಲ್ಲಿ ನಿರ್ಮಿಸಿ ಕೊಡಬೇಕು ಎಂದು ರೈತರು  ಆಗ್ರಹಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಔರಾದ್ ತಾಪಂ ಯೋಜನಾಧಿಕಾರಿ ಶಿವಕುಮಾರ ಘಾಟೆ ಅವರು, ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಾರ್ವಜನಿಕರು ವೈಯಕ್ತಿಕ ಹಾಗೂ ಸಾಮೂಹಿಕ ಕಣ ಹಾಗೂ ಕಟ್ಟೆಗಳನ್ನು ನಿರ್ಮಿಸಿಕೊಳ್ಳಬಹುದು. ರಾಶಿ ಕಣ ಇರದ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಮೂಲಕ ರಾಶಿ ಮಾಡಲು ಕಣಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದ್ದಾರೆ. 

ಗ್ರಾಮೀಣ ಪ್ರದೇಶದಲ್ಲಿ ರಾಶಿ ಮಾಡಲು ಒಕ್ಕಣೆ ಯಂತ್ರಕ್ಕೆ ಪ್ರತಿ ಚೀಲಕ್ಕೆ 30 ರು. ಭರಿಸಬೇಕು. ಬರದಿಂದ ತತ್ತರಿಸಿದ ರೈತರಿಗೆ ಬಾಡಿಗೆ ಕೊಡಲು ಸಮಸ್ಯೆಯಾಗುತ್ತಿದೆ. ಹಣಕಾಸಿನ ಸಮಸ್ಯೆಯಿಂದ ಸಣ್ಣ ರೈತರು ರಸ್ತೆ ಮೇಲೆ ರಾಶಿ ಮಾಡುವ ಪ್ರಸಂಗ ಎದುರಾಗಿದ್ದು, ರಸ್ತೆಯನ್ನೇ ಕಣವಾಗಿ ಅವಲಂಬಿಸಲಾಗಿದೆ ಎಂದು ಬೆಲ್ದಾಳದ ರೈತ ರಾಮಪ್ಪ ಅವರು ಹೇಳಿದರು.