Mandya ಕೊಬ್ಬರಿ ಖರೀದಿ ವ್ಯವಸ್ಥೆ ಸ್ಥಗಿತ ರೈತರ ಖಂಡನೆ
ಕೊಬ್ಬರಿ ಖರೀದಿ ಅವಧಿಯನ್ನು ವಿಸ್ತರಿಸುವಂತೆ ತಾಲೂಕಿನ ಕೊಬ್ಬರಿ ಬೆಳೆಗಾರ ರೈತರು ಪಟ್ಟಣದ ಎಪಿಎಂಸಿ ಕೊಬ್ಬರಿ ಖರೀದಿ ಕೇಂದ್ರದ ಬಳಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಕೆ.ಆರ್.ಪೇಟೆ : ಕೊಬ್ಬರಿ ಖರೀದಿ ಅವಧಿಯನ್ನು ವಿಸ್ತರಿಸುವಂತೆ ತಾಲೂಕಿನ ಕೊಬ್ಬರಿ ಬೆಳೆಗಾರ ರೈತರು ಪಟ್ಟಣದ ಎಪಿಎಂಸಿ ಕೊಬ್ಬರಿ ಖರೀದಿ ಕೇಂದ್ರದ ಬಳಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿ ಕಚೇರಿ ಬಳಿ ಆಗಮಿಸಿದ ತೆಂಗು ಬೆಳೆಗಾರ ರೈತರು, ಕೊಬ್ಬರಿ ಖರೀದಿ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡದೆ ದಿಢೀರನೆ ಖರೀದಿ ವ್ಯವಸ್ಥೆಯನ್ನು ನಿಲ್ಲಿಸುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.
ರೈತ ಮುಖಂಡ ಚೌಡೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ತೆಂಗು ಬೆಳೆ ಬೆಳೆದಿದ್ದಾರೆ. ಕೊಬ್ಬರಿ ಬೆಲೆ ಕುಸಿದ ಪರಿಣಾಮ ಸರ್ಕಾರ ಸಹಕಾರ ಮಾರಾಟ ಮಹಾ ಮಂಡಳಿ ಮೂಲಕ ಪ್ರತಿ ಕ್ವಿಂಟಾಲ… ಕೊಬ್ಬರಿಗೆ 11,750 ರು. ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ತಾಲೂಕಿನಲ್ಲಿ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಿರುವ ಬಗ್ಗೆ ಇಲಾಖೆ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು.
ಮಾಹಿತಿಯ ಕೊರತೆಯಿಂದ ಬಹುತೇಕ ತೆಂಗು ಬೆಳೆಗಾರರು ತಮ್ಮ ಕೊಬ್ಬರಿ ಮಾರಾಟಕ್ಕಾಗಿ ಹೆಸರು ನೊಂದಣಿ ಮಾಡಿಸಿಲ್ಲ. ನೆರೆಯ ಚನ್ನರಾಯಪಟ್ಟಣ, ತುರುವೇಕೆರೆ, ತಿಪಟೂರು ಮುಂತಾದ ಕಡೆ ಸುಮಾರು 50 ಸಾವಿರಕ್ಕೂ ಅಧಿಕ ಕ್ವಿಂಟಾಲ… ನೊಂದಣಿಯಾಗಿದ್ದರೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಖರೀದಿ ನೊಂದಣಿ ದಿನದ ಅಂತ್ಯದವರೆಗೆ ಕೇವಲ 5,700 ಕ್ವಿಂಟಾಲ… ಮಾತ್ರ ನೊಂದಣಿಯಾಗಿದೆ ಎಂದರು.
ಸೂಕ್ತ ಪ್ರಚಾರದ ಕೊರತೆ ಮತ್ತು ಎಫ್‌ಐಡಿ ಸಮಸ್ಯೆಯಿಂದ ತಾಲೂಕಿನ ರೈತರು ಸಕಾಲದಲ್ಲಿ ಕೊಬ್ಬರಿ ಖರೀದಿ ನೊಂದಣಿ ಮಾಡಿಸಲಾಗಿಲ್ಲ. ಪಿಆರ್‌ಓ ಗಳು ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಮಾಡದ ಕಾರಣ ತೆಂಗು ಬೆಳೆದಿದ್ದರೂ ರೈತರ ಆರ್‌ಟಿಸಿ ಯಲ್ಲಿ ತೆಂಗು ಬೆಳೆ ದಾಖಲಾಗಿಲ್ಲ. ತಾಲೂಕಿನ ತೆಂಗು ಬೆಳೆಗಾರರ ಹಿತದೃಷ್ಠಿಯಿಂದ ಕೊಬ್ಬರಿ ಖರೀದಿ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿದರು.
ತಾಲೂಕು ಕೊಬ್ಬರಿ ಖರೀದಿ ಅಧಿಕಾರಿ ಹನುಮಂತು ಮಾತನಾಡಿ, ಕಳೆದ ಜ.28 ರಿಂದ ಮಾ.13 ರವರೆಗೆ ಒಟ್ಟು 45 ದಿನಗಳ ಕಾಲ ರೈತರಿಗಾಗಿ ಕೊಬ್ಬರಿ ಖರೀದಿ ನೊಂದಣಿ ಆರಂಭಿಸಲಾಗಿದೆ. ನೊಂದಣಿಯ ಅವಧಿ ಇಂದಿಗೆ ಮುಕ್ತಾಯಗೊಂಡಿದೆ. ಇದರ ಪರಿಣಾಮ ಆನ್‌ಲೈನ್ ನೊಂದಣಿ ಸಿಸ್ಟಂ ತಾನಾಗಿಯೇ ಸ್ಥಗಿತಗೊಂಡಿದೆ. ಖರೀದಿ ಕೇಂದ್ರ ಆರಂಭಿಸಿರುವ ಬಗ್ಗೆ ರೈತರಿಗೆ ಅಗತ್ಯ ಮಾಹಿತಿಯನ್ನು ನೀಡಿದ್ದೇವೆ. ರಾಗಿ ಮತ್ತು ಭತ್ತ ಖರೀದಿಯ ಕಾರ್ಯ ಒತ್ತಡದಲ್ಲಿ ನಾವು ವೈಯಕ್ತಿಕವಾಗಿ ಹೆಚ್ಚಿನ ಪ್ರಚಾರ ಮಾಡಲಾಗಿಲ್ಲ ಎಂದು ಹೇಳಿದರು.
ಈ ವೇಳೆ ಜಿಲ್ಲಾ ರೈತಸಂಘದ ಉಪಾಧಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡ ಕೃಷ್ಣಾಪುರ ರಾಜಣ್ಣ, ಕೋಟಹಳ್ಳಿ ಹೊನ್ನೇಗೌಡ, ಮಾವಿನಕಟ್ಟೆಕೊಪ್ಪಲು ಶಿವಲಿಂಗೇಗೌಡ ಸೇರಿದಂತೆ ಹಲವರಿದ್ದರು.
--
ಬಾಕ್ಸ್
ಖರೀದಿ ಪ್ರಕ್ರಿಯೆ ಮತ್ತೇ ಆರಂಭಿಸುವ ಭರವಸೆ
ವಿಷಯ ತಿಳಿದ ತಕ್ಷಣವೇ ರೈತರ ಸಮಸ್ಯೆಗೆ ಸ್ಪಂದಿಸಿದ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಈ ಕುರಿತು ಅಧ್ಯಕ್ಷರೊಂದಿಗೆ ಮಾತನಾಡಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಮತ್ತೆ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದರು.
---------
13ಕೆಎಂಎನ್ ಡಿ12
ಕೆ.ಆರ್ .ಪೇಟೆ ಎಪಿಸಿಎಂಸಿ ಕಚೇರಿ ಕೊಬ್ಬರಿ ಖರೀದಿ ಕೇಂದ್ರದ ಎದುರು ತೆಂಗು ಬೆಳೆಗಾರ ರೈತರು ಕೊಬ್ಬರಿ ಖರೀದಿಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿದರು.