ಕೊಡಗಿನಲ್ಲಿ ಪುತ್ತರಿ ಹಬ್ಬದ ಸಂಭ್ರಮ: ಕದಿರು ಕೊಯ್ದು ಧಾನ್ಯ ಲಕ್ಷ್ಮಿಯ ಮನೆ ತುಂಬಿಕೊಂಡ ರೈತರು!
ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಕೃಷಿ ಹಬ್ಬ ಪುತ್ತರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ಜಿಲ್ಲೆಯ ಜನರು ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಕೊಂಡಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಡಿ.14): ದೇಶದಲ್ಲಿಯೇ ವಿಶಿಷ್ಟ ಕಲೆ, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕೊಡಗಿನೆಲ್ಲೆಡೆ ರೈತರು ಸೇರಿದಂತೆ ಎಲ್ಲಾ ಜನರು ಧಾನ್ಯ ಲಕ್ಷ್ಮಿಯನ್ನು ಶದ್ಧಾಭಕ್ತಿಯಿಂದ ಪೂಜಿಸಿ ಬರಮಾಡಿಕೊಂಡು ಮನೆ ತುಂಬಿಸಿಕೊಂಡಿದ್ದಾರೆ.
ಹೌದು, ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಪುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕೊಡಗಿನಲ್ಲಿ ಮಳೆ ದೇವರೆಂದೇ ಪೂಜಿಸುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಇಂದು(ಶನಿವಾರ) ರಾತ್ರಿ 7.50 ಕ್ಕೆ ಸರಿಯಾಗಿ ರೋಹಿಣಿ ನಕ್ಷತ್ರದಲ್ಲಿ ಹುಣ್ಣಿಮೆಯಂದು ನೆರೆಕಟ್ಟಲಾಯಿತು. ವಿವಿಧ ಪುಷ್ಪ, ಪತ್ರೆಗಳೊಂದಿಗೆ ನೆರೆಕಟ್ಟಿ ಬಳಿಕ ಪೂಜಾ ವಿಧಿ ವಿಧಾನಗಳು ನೆರವೇರುತ್ತಿದ್ದಂತೆ ಬಳಿಕ 8 ಗಂಟೆ 30 ನಿಮಿಷಕ್ಕೆ ದೇವರ ಗದ್ದೆಯಲ್ಲಿ ಬೆಳೆದಿದ್ದ ಭತ್ತ ಬೆಳೆಗೆ ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಯಿತು. ಆ ಮೂಲಕ ಜಿಲ್ಲೆಯ ಕೃಷಿ ಹಬ್ಬ ಪುತ್ತರಿ ನಮ್ಮೆಗೆ ಚಾಲನೆ ನೀಡಲಾಯಿತು.
ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇವಾಲಯದಲ್ಲಿ ಪುತ್ತರಿ ಅಂಗವಾಗಿ ನೆರೆ ಕಟ್ಟಲಾಯಿತು. ಓಂಕಾಶ್ವೇರನಿಗೆ ಪೂಜೆ ಸಲ್ಲಿಸಿ ಬಳಿಕ ಅಲ್ಲಿಂದ ಕೊಡುವ ಸಾಂಪ್ರದಾಯಿಕ ವಾದ್ಯಗಳಾದ ದುಡಿಕೊಟ್ಟ್ ಪಾಟ್ಗಳೊಂದಿಗೆ ದೇವಾಲಯದ ಮುಂಭಾಗದ ಆವರಣದಲ್ಲಿ ಇರುವ ದೇವರ ಗದ್ದೆಗೆ ಮೆರವಣಿಗೆಯಲ್ಲಿ ಸಾಗಲಾಯಿತು.
ಕೊಡಗು: ದೀನ್ ದಯಾಳ್ ಸತತ್ ವಿಕಾಸ್ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಗಾಳಿಬೀಡು ಗ್ರಾಮ ಪಂಚಾಯಿತಿ
ಪೊಲಿ ಪೊಲಿ ದೇವಾ, ಪೊಲಿಯೇ ಬಾ ದೇವಾ ಎಂದು ಗುರು ಕಾರೋಣ ಹಾಗೂ ಧಾನ್ಯ ಲಕ್ಷ್ಮಿಯನ್ನು ನೆನೆಯುತ್ತಾ ತೆರಳಿದರು. ಬಳಿಕ ಭೂಮಿ ತಾಯಿಗೆ ಹಾಗೂ ಧಾನ್ಯ ಲಕ್ಷ್ಮಿಗೆ ಪೂಜೆ ಸಲ್ಲಿಸಿ ಕದಿರು ಕೊಯ್ಯಲಾಯಿತು. ನಂತರ ಅಲ್ಲಿಂದ ಪುನಃ ಮೆರವಣಿಗೆಯಲ್ಲಿ ಕೆಳಗಿನ ಕೊಡವ ಸಮಾಜಕ್ಕೆ ತೆರಳಿ ಕದಿರು ತೆಗೆಯುವುದಕ್ಕೆ ಬಂದಿದ್ದ ಎಲ್ಲಾ ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು. ಹೀಗೆ ಭಕ್ತಿಯಿಂದ ಕದಿರಿನ ರೂಪದಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ಕೊಂಡೊಯ್ದ ಜನರು ಮನೆಗಳಲ್ಲಿಯೂ ಕದಿರನ್ನು ಇಟ್ಟು ಪೂಜಿಸಿದರು. ಅಲ್ಲದೆ ನೆಲ್ಲಕ್ಕಿಯಲ್ಲಿ ಧಾನ್ಯಗಳನ್ನು ಹಾಕಿ ನಂದಾ ಜ್ಯೋತಿಯನ್ನು ಹಚ್ಚಿ ಪೂಜಿಸಿದರು. ಪುತ್ತರಿ ಹಬ್ಬದ ಅಂಗವಾಗಿ ಮನೆಗಳಲ್ಲಿ ಹೊಸ ಅಕ್ಕಿಯಿಂದ ಪಾಯಸ, ಕಡುಂಬಟ್ಟು, ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಮನೆ ಮಂದಿಯೆಲ್ಲಾ ಸವಿದು ಸಂಭ್ರಮಿಸಿದ್ದಾರೆ.
ವೀರ ಸೇನಾನಿಗಳಿಗೆ ಅಪಮಾನ ಖಂಡಿಸಿ ಕೊಡಗು ಬಂದ್‌ಗೆ ಉತ್ತಮ ಪ್ರತಿಕ್ರಿಯೆ: ಸಾವರ್ಜನಿಕರ
ಇನ್ನು ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿಯಲ್ಲಿರುವ ಮೃತ್ಯುಂಜಯ ದೇವಾಲಯದಲ್ಲೂ ಕದಿರು ಕೊಯ್ದು ಭಕ್ತರಿಗೆ ಹಂಚಿಕೆ ಶ್ರದ್ಧಾಭಕ್ತಿಯಿಂದ ಪುತ್ತರಿ ಆಚರಿಸಲಾಗಿದೆ. ಮತ್ತೊಂದೆಡೆ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ 31 ನೇ ವರ್ಷದ ಸಂಭ್ರಮದ ಸಾರ್ವತ್ರಿಕ ಕೊಡವ ಜನಪದಿಯ ಪುತ್ತರಿ ಹಬ್ಬ ನಡೆಯಿತು.
ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಬಳಿಯ ಬಿಳೂರು ಗ್ರಾಮದ ಕಾಂಡೆರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ರೋಹಿಣಿ ನಕ್ಷತ್ರದಲ್ಲಿ ಕದಿರು ತೆಗೆದು ಧಾನ್ಯ ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಮಾತನಾಡಿದ ಭಕ್ತರು ವರ್ಷವಿಡಿ ದುಡಿದು ವಿವಿಧ ಬೆಳೆಗಳನ್ನು ಬೆಳೆದಿರುತ್ತೇವೆ. ಇದೀಗ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಕೊಳ್ಳುತ್ತಿದ್ದೇವೆ. ಇದು ಕೊಡಗಿನ ಸುಗ್ಗಿ ಹಬ್ಬದ ಸಂಪ್ರದಾಯ ಎಂದಿದ್ದಾರೆ. ಒಟ್ಟಿನಲ್ಲಿ ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಕೃಷಿ ಹಬ್ಬ ಪುತ್ತರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ಜಿಲ್ಲೆಯ ಜನರು ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಕೊಂಡಿದ್ದಾರೆ.