ಚಿಂಚೋಳಿ (ಅ.01): ಕಲಬುರಗಿ ಜಿಲ್ಲೆಯಲ್ಲಿ ಕಳೆದ 2 ದಿನದಿಂದ ಮಳೆಯ ಅಬ್ಬರ ತುಸು ತಗ್ಗಿದ್ದರೂ ಚಿಂಚೋಳಿಯಲ್ಲಿ ಮಾತ್ರ ಇನ್ನೂ ತಗ್ಗಿಲ್ಲ. ಬುಧವಾರ ತಾಲೂಕಿನ ಹಲವೆಡೆ ಸುರಿದ ಗುಡುಗು, ಸಿಡಿಲಿನ ಮಳೆಗೆ ಸಾವು ನೋವು ಸಂಭವಿಸಿದೆ.

ಸಿಡಿಲಿಗೆ ಚಂದನಕೇರಾ ಗ್ರಾಮದ ರೈತ ಮೊಹ್ಮದ್‌ ಪೀರಪಾಶಾ ಇಮಾಮಸಾಬ್‌ (28) ಸಾವನ್ನಪ್ಪಿದ್ದಾನೆ. ಇದಲ್ಲದೆ ಕೊಳ್ಳುರ ಗ್ರಾಮದಲ್ಲಿ 29 ಕುರಿಗಳು ಸಿಡಿಲಿಗೆ ಸಾವನ್ನಪ್ಪಿವೆ. ಕೊಳ್ಳುರ ಗ್ರಾಮದ ಪ್ರಭು ಹುಗ್ಗೆಳ್ಳಿ ಪೂಜಾರಿ ಅವರು ಕುರಿಗಳನ್ನು ಜೋರಾದ ಸುರಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಸರೆಗೊಸ್ಕರ ಮರದ ಕೆಳಗೆ ಕುಳ್ಳಿರಿಸಿದ್ದಾರೆ. ಈ ವೇಳೆ ಸಿಡಿಲು ಬಡಿದು 29 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.

ಸಿಡಿಲು ಗೌಜಿಗೆ ನೆಲ ಅದುರಿ ಹುಟ್ಟಿವೆ ಪುಟ್ಟ ಕಲ್ಲಣಬೆ, ಇಲ್ನೋಡಿ ಫೋಟೋ

ಕೆಲವು ಕುರಿಗಳ ದೇಹ ಛಿದ್ರವಾಗಿವೆ. ಕುರಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಕಾಶ ಕೊಳ್ಳುರ ಅವರು ಶಾಸಕ ಡಾ.ಅವಿನಾಶ ಜಾಧವರಿಗೆ ಮನವಿ ಮಾಡಿಕೊಂಡಿದ್ದಾರೆ.

ರೈತ ಸಾವು:  ಚಂದನಕೇರಾ ಗ್ರಾಮದ ಹೊಲದಲ್ಲಿ ಎತ್ತುಗಳಿಗೆ ಹುಲ್ಲು ಮೇಯಿಸಲು ಹೊಲದ ಬದುವಿನ ಮೇಲೆ ನಿಂತಿದ್ದ ಸಂದರ್ಭದಲ್ಲಿ ರೈತ ಮಹಮ್ಮದ ಪೀರಪಾಶ ಇಮಾಮಸಾಬ ಕೊಡಂಬಲ(28) ಸಿಡಿಲಿಗೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ತಹಸೀಲ್ದಾರ ಅರುಣಕುಮಾರ ಕುಲಕರ್ಣಿ, ಹಣಮಂತರಾವ ಪೂಜಾರಿ, ಭವಾನಿ ಫತ್ತೆಪೂರ, ಶರಣಗೌಡ ಭೇಟಿ ನೀಡಿದ್ದಾರೆ.