ಡೆತ್ ನೋಟ್ ಬರೆದಿಟ್ಟು ಸಾವು : ಎಚ್‌ಡಿಕೆ, ನಿಖಿಲ್ ಭೇಟಿ
ಡೆತ್ ನೋಟ್ ಬರೆದಿಟ್ಟು ಸಾವಿಗೀಡಾದ ವ್ಯಕ್ತಿಯ ಅಂತಿಮ ದರ್ಶನಕ್ಕೆ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ರಾಮನಗರ (ಜ.18): ತನ್ನ ಸಾವಿನ ಅಂತಿಮ ದರ್ಶನಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದ ರಾಮನಗರ ಜಿಲ್ಲೆಯ ಬೊಮ್ಮಚ್ಚಹಳ್ಳಿಯ ನಿವಾಸಿ, ಆಟೋ ಚಾಲಕ ಆರ್.ಜಯರಾಮ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಎಚ್‌ಡಿಕೆ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಪಡೆದರು. ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ ಹಾಗೂ ನಿಖಿಲ್ ಅವರು ಜಯರಾಮ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಅಲ್ಲದೇ, ಆರ್ಥಿಕ ಸಹಾಯ ಮಾಡಿದರು. ಆಟೋ ಚಾಲಕ ಜಯರಾಮ್ ಅವರ ಎಡಗಾಲಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊನೆ ಉಸಿರೆಳೆಯುವುದಕ್ಕೂ ಮುನ್ನ ಪತ್ರವೊಂದನ್ನು ಬರೆದಿದ್ದರು.
ಇದು ನನ್ನ ಕೊನೆಯ ಹೋರಾಟವೆಂದು ಘೋಷಿಸಿದ ಕುಮಾರಸ್ವಾಮಿ...! ...
ನಾನು ಕುಮಾರಸ್ವಾಮಿ ಅವರ ಅಭಿಯಾನಿಯಾಗಿದ್ದು, ಬುದ್ಧಿ ಬಂದಾಗಿನಿಂದಲೂ ಜೆಡಿಎಸ್ ಅನ್ನು ಬೆಂಬಲಿಸುತ್ತಾ ಬಂದಿದ್ದೇನೆ. ನನ್ನ ಮರಣಾನಂತರ ಅಂತ್ಯಸಂಸ್ಕಾರದಲ್ಲಿ ಕುಮಾರಸ್ವಾಮಿರವರು ಭಾಗವಹಿಸಬೇಕು. ನನ್ನ ಮಗ ಬುದ್ಧಿಮಾಂದ್ಯನಾಗಿದ್ದು, ಆತನಿಗೆ ಆರ್ಥಿಕ ಸಹಾಯ ಮಾಡಬೇಕು. ಬದುಕಲು ಅವರಿಗೊಂದು ದಾರಿ ಮಾಡಿಕೊಡಬೇಕು. ಕುಮಾರಸ್ವಾಮಿರವರ ಋುಣವನ್ನು ಮುಂದಿನ ಜನ್ಮದಲ್ಲಿ ತೀರಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಯಿತಲ್ಲದೇ, ಜೆಡಿಎಸ್ ಮುಖಂಡರು ಕುಮಾರಸ್ವಾಮಿರವರ ಗಮನಕ್ಕೆ ತಂದಿದ್ದಾರೆ. ಭಾನುವಾರ ಮಧ್ಯಾಹ್ನದವರೆಗೆ ಪೂರ್ವ ನಿಯೋಜಿತವಾಗಿದ್ದ ಕಾರ್ಯಕ್ರಮಗಳನ್ನು ರದ್ದು ಪಡಿಸಿದ ಕುಮಾರಸ್ವಾಮಿ ಪುತ್ರ ನಿಖಿಲ್ ಅವರೊಂದಿಗೆ ಬೊಮ್ಮಚ್ಚನಹಳ್ಳಿ ಗ್ರಾಮಕ್ಕೆ ಆಗಮಿಸಿದರು.